ಶನಿವಾರ, ಜನವರಿ 18, 2020
21 °C
ಕೃಷಿ ಖುಷಿ

ಹೊಲದ ಪೈರು ಕಲಿಸಿತು ಕೃಷಿ ಪಾಠ!

ಪ್ರಜಾವಾಣಿ ವಾರ್ತೆ/ಭೀಮಶೇನರಾವ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಹೊಲದ ಪೈರು ಕಲಿಸಿತು ಕೃಷಿ ಪಾಠ!

ಹುಣಸಗಿ: ಓದಿದ್ದು ಡಿಪ್ಲೊಮಾ. ಯಾವುದಾದರೂ ಕಂಪೆನಿಯಲ್ಲಿ ಕೆಲಸ ಮಾಡಿ ಒಂದಷ್ಟು ಸಂಬಳ ಪಡೆಯಬಹುದಿತ್ತು. ಆದರೆ ಹೊಲದಲ್ಲಿ ಬೆಳೆಯುವ ಪೈರು, ಕಂಪೆನಿಯಲ್ಲಿ ಸೇವೆ ಮಾಡುವ ಬದಲು ಭೂತಾಯಿ ಸೇವೆ ಮಾಡಲು ಪ್ರೇರೇಪಿಸಿತು. ಒಬ್ಬರ ಕೈ ಕೆಳಗೆ ಕೆಲಸ ಮಾಡುವ ಬದಲು ತಾನೇ ಹಲವರಿಗೆ ಉದ್ಯೋಗ ನೀಡುವ ಶಕ್ತಿಯನ್ನು ಕೊಟ್ಟಿತು.ಕೃಷಿಯಲ್ಲಿ ಲಾಭವಿಲ್ಲ, ನಷ್ಟವೇ ಜಾಸ್ತಿ ಎಂದು ಕೃಷಿಯನ್ನು ಬಿಟ್ಟು ಬೇರೆ ಕೆಲಸ ಮಾಡಲು ತೆರಳುತ್ತಿರುವ ಗ್ರಾಮೀಣ ರೈತ ಯುವಕರಿಗೆ ಸುರಪುರ ತಾಲ್ಲೂಕು ಕೂಡಲಗಿ ಗ್ರಾಮದ ಯುವಕ ಸಂದೀಪ ಪಾಟೀಲ  ಮಾದರಿಯಾಗಿದ್ದಾರೆ.ಇವರು ಕೃಷಿಯಲ್ಲಿಯೇ ಹೆಚ್ಚು ಹಣ ಗಳಿಸಬಹುದು ಎಂದು ಅಪಾರ ನಂಬಿಕೆ ಇಟ್ಟುಕೊಂಡವರು. ತಮ್ಮ 18 ಎಕರೆ ಜಮೀನಿನಲ್ಲಿ ವಿವಿಧ ಹಣ್ಣಿನ ಗಿಡಗಳು, ಕಬ್ಬು, ಭತ್ತದ ಬೀಜ, ಸಾಗವಾನಿ ಮರ, ಹತ್ತಿ, ನಿಂಬೆಗಿಡಗಳನ್ನು ಬೆಳೆಸುವ ಮೂಲಕ ವಾರ್ಷಿಕ ₨ 10 ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ.18 ಎಕರೆ ಜಮೀನಿನಲ್ಲಿ 50 ಮಾವಿನಗಿಡ, 20 ಚಿಕ್ಕಗಿಡ, 25 ಪೇರಲಗಿಡ, 200 ಸೀತಾಫಲ, 10 ನೇರಳೆ ಹಣ್ಣಿನಗಿಡ, ತೆಂಗಿನಗಿಡ, ನಾಲ್ಕು ಎಕರೆಯಲ್ಲಿ ಕಬ್ಬು, ಒಂದು ಎಕರೆ ನಿಂಬೆ, ಎರಡು ಎಕರೆ ಭತ್ತದ ಬೀಜ, ಮೂರು ಎಕರೆ ಹತ್ತಿ, 250 ಸಾಗವಾನಿ ಮರಗಳು ಮತ್ತು 20 ಗುಂಟೆಯಲ್ಲಿ ಜಾನುವಾರುಗಳಿಗೆ ಮೇವು ಬೆಳೆಯುತ್ತಿದ್ದಾರೆ.‘ಮಾವು, ಚಿಕ್ಕು, ಪೇರಲ, ಸೀತಾಫಲ, ಕಬ್ಬು ವರ್ಷಕ್ಕೆ ಒಮ್ಮೆ ದುಡ್ಡಿನ ಮುಖ ತೋರಿಸುತ್ತವೆ. ಆದ್ದರಿಂದ ನಿರಂತರ ಆದಾಯಕ್ಕಾಗಿ ನಿಂಬೆಗಿಡಗಳು, ಭತ್ತದ ಬೀಜ, ಹತ್ತಿ ಬೆಳೆಯುತ್ತೇನೆ. ಜೊತೆಗೆ ಹೈನುಗಾರಿಕೆಗೆ ಅನುಕೂಲವಾಗಲು ಸ್ವಲ್ಪ ಜಾಗದಲ್ಲಿ ಹುಲ್ಲು ಬೆಳೆಸುತ್ತಿದ್ದೇನೆ’ ಎಂದು ಸಂದೀಪ ಪಾಟೀಲ ಹೇಳುತ್ತಾರೆ.ಮಾವಿನಹಣ್ಣು ಬೇಸಿಗೆಯಲ್ಲಿ ಆದಾಯ ತಂದು ಕೊಡುತ್ತದೆ. ಚಿಕ್ಕುಹಣ್ಣು ನಿರಂತರವಾಗಿ ಸಿಗುತ್ತವೆ. ಅದರಂತೆ ಪೇರಲಹಣ್ಣಿಗೂ ಬೇಡಿಕೆ ಇದೆ. ನೇರಳೆಹಣ್ಣುಗಳನ್ನು ಹೆಚ್ಚು ಬಳಸಲಾಗುತ್ತದೆ. ಇನ್ನು ಸಾಗವಾನಿ ಗಿಡಗಳು ದೊಡ್ಡದಾದ ಮೇಲೆಯೇ ಆದಾಯ ಕೊಡುತ್ತವೆ. ಹೀಗಾಗಿ ವರ್ಷದ ಆರಂಭದಿಂದ ಕೊನೆಯವರೆಗೂ ನಿರಂತರವಾಗಿ ಆದಾಯ ಬರುತ್ತಲೇ ಇದೆ. ಇದರಿಂದ ಕುಟುಂಬದ ನಿರ್ವಹಣೆಯ ಜೊತೆಗೆ ಆರ್ಥಿಕ ಸಬಲತೆ ಸಾಧಿಸಲು ಸಾಧ್ಯವಾಗಿದೆ ಎನ್ನುವುದು ಇವರ ನಂಬಿಕೆ.ಹೊಲದಲ್ಲಿ ತಾವೇ ತಿಪ್ಪೆ ಗೊಬ್ಬರವನ್ನು ತಯಾರಿಸುತ್ತಾರೆ. ಬಹುತೇಕ ಸಾವಯವ ಗೊಬ್ಬರವನ್ನೇ ಬಳಸುತ್ತಾರೆ. ಜೊತೆಗೆ ಕೋಳಿ ಗೊಬ್ಬರವನ್ನು ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಉತ್ತಮ ಫಸಲು ಬರುವುದರ ಜೊತೆಗೆ ಖರ್ಚು ಕಡಿಮೆಯಾಗುತ್ತದೆ. ಅವಶ್ಯವಿದ್ದಾಗ ಮಾತ್ರ ರಸಗೊಬ್ಬರ ಬಳಸುತ್ತಾರೆ.‘ಮನೆಯವರ ಸಹಕಾರದಿಂದ ಕೃಷಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತಾಗಿದೆ. ತಂದೆ ಶರಣಗೌಡರ ಮಾರ್ಗದರ್ಶನ­ದಿಂದ ಉತ್ತಮ ಕೃಷಿ ಮಾಡುತ್ತಿದ್ದೇನೆ. ಒಂದೊಂದು ಹಣ್ಣು ಒಂದೊಂದು ಋತುವಿಗೆ ಬರುವುದರಿಂದ ವರ್ಷದ 12 ತಿಂಗಳೂ ಹಣ ಬರುತ್ತದೆ. ಇದರಿಂದ ಆರ್ಥಿಕ ತೊಂದರೆ ಉಂಟಾ­ಗು­ವುದಿಲ್ಲ’  ಎನ್ನುತ್ತಾರೆ ಸಂದೀಪ ಪಾಟೀಲ.  ಇದೇ ಮೊದಲ ಬಾರಿ 4 ಎಕರೆಯಲ್ಲಿ ಕಬ್ಬು ಹಾಕಿದ್ದು, ಸಾವಯವ ಗೊಬ್ಬರ ಹಾಗೂ ಕೋಳಿ ಗೊಬ್ಬರ ಹಾಕಿ ಬೆಳೆಯುತ್ತಿದ್ದಾರೆ.650 ನುಗ್ಗೆಸಸಿಗಳನ್ನು ಸ್ವತಃ ಸಸಿ ಮಾಡಿದ್ದು, ಎರಡು ಎಕರೆಯಲ್ಲಿ ನೆಡುವ ತಯಾರಿ ನಡೆಸಿದ್ದಾರೆ.

ಪ್ರತಿ ಬಾರಿ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯಯದಲ್ಲಿ ನಡೆಯುವ ಕೃಷಿಮೇಳದಲ್ಲಿ ತಾವು ಬೆಳೆದ ಹಣ್ಣುಗಳನ್ನು ಪ್ರದರ್ಶಿಸುವುದು ಇವರ ನೆಚ್ಚಿನ ಹವ್ಯಾಸ.ಆದರೆ ಇದುವರೆಗೂ ಕೃಷಿ, ತೋಟಗಾರಿಕೆ ಇಲಾಖೆಯಿಂದಾಗಲಿ ಯಾವುದೇ ಸಹಾಯ ಪಡೆದಿಲ್ಲ.

ರೈತರಿಗೆ ಮಾಹಿತಿ  ನೀಡುವ ಬಯಕೆ ಅನುಭವ ಹಂಚುವ ಹಂಬಲ

ಸಂದೀಪ ಪಾಟೀಲ ತಾವು ಅಳವಡಿಸಿ­ಕೊಂಡಿರುವ ಕೃಷಿ ಪದ್ಧತಿ, ಬೆಳೆಯುತ್ತಿ­ರುವ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ  ಬಯಕೆಯನ್ನೂ ಹೊಂದಿದ್ದಾರೆ. ಆಸಕ್ತ ರೈತರು ಮೊ: 9740477048 ಸಂಪರ್ಕಿಸ  ಬಹುದು.

ಯುವಕನ ಸಾಧನೆ ಮಾದರಿ’

‘ಗ್ರಾಮೀಣ ಪ್ರದೇಶದಲ್ಲಿ ರೈತರು ಕೃಷಿ­ಯಿಂದ ಹಿಂದೆ ಸರಿಯು­ತ್ತಿ­ರುವ ಇಂದಿನ ದಿನಗ­ಳಲ್ಲಿ ಸಂದೀಪ ಪಾಟೀಲ ಉತ್ತಮ ಫಸಲು ಬೆಳೆಯುವ ಮೂಲಕ ಉತ್ತಮ ಆದಾಯ ಪಡೆಯುತ್ತಿ­ದ್ದಾರೆ. ಇಂದಿನ ಯುವಕರಿಗೆ ಮಾದರಿಯಾ­ಗಿದ್ದಾರೆ. ನಿಜಕ್ಕೂ ಅದ್ಭುತ­ವಾದ ಸಾಧನೆ’.

ನಾಗಣ್ಣ ಸಾಹುಕಾರ ದಂಡಿನ್, ಪ್ರಗತಿಪರ ರೈತ

ಪ್ರತಿಕ್ರಿಯಿಸಿ (+)