ಸೋಮವಾರ, ಜನವರಿ 20, 2020
29 °C

ಬ್ಯಾಂಕ್‌ ನೌಕರರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವ ಅವಧಿ 2012ರ ನವೆಂಬರ್‌ನಲ್ಲಿ ಮುಗಿದಿದ್ದು, ಕೂಡಲೇ ಸರ್ಕಾರ ವೇತನ ಪರಿಷ್ಕರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ಹಾಗೂ ಸಿಬ್ಬಂದಿ ಒಕ್ಕೂಟಗಳ ಸದಸ್ಯರು ಬುಧವಾರ ಕೆಲಸ ಸ್ಥಗಿತಗೊಳಿಸಿ ಎಸ್‌ಬಿಎಚ್‌ ಸೂಪರ್‌ ಮಾರ್ಕೆಟ್‌ ಶಾಖೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ನಿಯಮಿತವಾಗಿ ಬ್ಯಾಂಕ್‌ ನೌಕರರಿಗೆ ಹಾಗೂ ಸಿಬ್ಬಂದಿಗೆ ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಿ ವೇತನ ಹೆಚ್ಚಿಸಲಾಗುತ್ತಿತ್ತು. ಐದು ವರ್ಷ ಅವಧಿ ಮುಗಿದು ಮತ್ತೊಂದು ವರ್ಷವಾದರೂ ವೇತನ ಪರಿಷ್ಕರಿಸಿಲ್ಲ. ಸರ್ಕಾರವು ನೌಕರರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.ಅಖಿಲ ಭಾರತ ಮಟ್ಟದಲ್ಲಿ ಬುಧವಾರ ಬ್ಯಾಂಕ್‌ ನೌಕರರೆಲ್ಲ ಪ್ರತಿಭಟನೆ ನಡೆಸಲು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಗುಲ್ಬರ್ಗ ಜಿಲ್ಲೆಯಲ್ಲಿರುವ ಎಲ್ಲ 32 ರಾಷ್ಟ್ರೀಕೃತ ಬ್ಯಾಂಕುಗಳ 127 ಶಾಖೆಗಳ ಸುಮಾರು 1200 ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬ್ಯಾಂಕ್‌ ಚೀಫ್‌ ಮ್ಯಾನೇಜರ್‌ ಹಾಗೂ ಅದಕ್ಕಿಂತ ಹೆಚ್ಚಿನ ಹುದ್ದೆಯ ಅಧಿಕಾರಿಗಳನ್ನು ಹೊರತುಪಡಿಸಿ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪದ್ಮನಾಭ ಮಠ, ಕಿರಣ ಚಿವುಟೆ, ಎಸ್‌.ಎಲ್‌. ತಡಕಲ್ಲ, ಎಸ್.ಎ. ಪವಾರ್‌, ಎನ್.ಮಳಖೇಡ್‌, ದಯಾನಿಧಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.ಬ್ಯಾಂಕುಗಳ ಪ್ರತಿಭಟನೆಯಿಂದ ಗುಲ್ಬರ್ಗ ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಪ್ರತಿದಿನ ನಡೆಸುವ ₨600 ಕೋಟಿ ವಹಿವಾಟಿಗೆ  ಹೊಡೆತ ಬಿತ್ತು .ಜಿಲ್ಲೆಯಲ್ಲಿರುವ 14 ಡಿಸಿಸಿ ಬ್ಯಾಂಕ್‌ ಶಾಖೆಗಳು ಹಾಗೂ 84 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ (ಆರ್‌ಆರ್‌ಬಿ)ಗಳು ಬುಧವಾರ ಎಂದಿನಂತೆ ವ್ಯವಹಾರ ನಡೆಸಿದವು.

ಪ್ರತಿಕ್ರಿಯಿಸಿ (+)