ಭಾನುವಾರ, ಜನವರಿ 19, 2020
26 °C

ನೂತನ ‘ಜಿಲ್ಲಾಸ್ಪತ್ರೆ’ಸಿದ್ಧ

ಪ್ರಜಾವಾಣಿ ವಾರ್ತೆ/ ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಡವರು ಹಾಗೂ ಮಧ್ಯಮ ವರ್ಗದವರಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ನಿರ್ಮಿಸಲಾಗು­ತ್ತಿರುವ ‘ನೂತನ ಜಿಲ್ಲಾಸ್ಪತ್ರೆ’ ಸೇವೆ ನೀಡಲು ಸಜ್ಜಾಗಿದೆ.ಸೇಡಂ ರಸ್ತೆಯಲ್ಲಿರುವ 35 ಎಕರೆ ವಿಶಾಲವಾದ ಪ್ರದೇಶದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಹಾಲಿ ಇರುವ ಆಸ್ಪತ್ರೆಯ ಪಕ್ಕದಲ್ಲೇ ನೂತನ ಕಟ್ಟಡ ನಿರ್ಮಾಣಗೊಂಡಿದ್ದು, ಉದ್ಘಾ­ಟನೆ ಭಾಗ್ಯಕ್ಕಾಗಿ ಕಾದು ನಿಂತಿದೆ.ಒಟ್ಟು ರೂ 49 ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆಯ ನಿರ್ಮಾಣ ಕಾಮಗಾರಿ­ಯನ್ನು ಕೈಗೆತ್ತಿಕೊಳ್ಳ­ಲಾಗಿದ್ದು, ಶೇ 98ರಷ್ಟು ಕಾಮಗಾರಿ ಪೂರ್ಣ­ಗೊಂ­ಡಿದೆ. ಹಳೆಯ ಆಸ್ಪತ್ರೆಯಲ್ಲಿ 400 ಹಾಸಿಗೆಗಳ ಸೌಲಭ್ಯವಿತ್ತು. ಈ ಆಸ್ಪತ್ರೆ­ಯಲ್ಲಿ 500 ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗಿದೆ. ಹೀಗಾಗಿ, ಒಟ್ಟು 900 ಹಾಸಿಗೆಗಳು ಲಭ್ಯವಾಗಲಿದ್ದು, ಜಿಲ್ಲೆಯ ಬಡ ರೋಗಿಗಳಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ.

ನೆಲ ಅಂತಸ್ತು ಸೇರಿದಂತೆ ಒಟ್ಟು ಐದು ಅಂತಸ್ತುಗಳ ಕಟ್ಟಡವನ್ನು (ಜಿ+4) ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ಹಾಗೂ ಸೇಡಂ ರಸ್ತೆಯ (ಬಿ.ಶಾಮ­ಸುಂದರ ವೃತ್ತ) ಮುಂಭಾಗದಲ್ಲಿ ಎರಡು ಪ್ರತ್ಯೇಕ ಪ್ರವೇಶ ದ್ವಾರಗಳನ್ನು ಅಳವಡಿಸಲಾಗಿದೆ. ಆಸ್ಪತ್ರೆ ಆವರಣ­ದಲ್ಲಿ ಕಾಂಕ್ರೀಟ್ ಹಾಕಲಾಗಿದೆ. ಇದರಿಂ­ದಾಗಿ ಮಳೆ ನೀರು ಸರಾಗವಾಗಿ ಚರಂಡಿ ಸೇರುವಂತಾಗಿದ್ದು, ಆಸ್ಪತ್ರೆಯ ಆವರಣ­ವನ್ನು ಶುಚಿಯಾಗಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾದರಿ­ಯಲ್ಲೇ ಇದನ್ನು ನಿರ್ಮಿಸ­ಲಾಗಿದೆ. ವೈದ್ಯರು, ತಜ್ಞವೈದ್ಯರು, ಶಸ್ತ್ರಚಿಕಿತ್ಸಕರು, ಆರ್‌ಎಂಒ, ಶುಶ್ರೂಷಕಿ­ಯರು ಹಾಗೂ ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆ ಸೇರಿದಂತೆ ಒಟ್ಟು 300 ಹುದ್ದೆಗಳನ್ನು ಭರ್ತಿ ಹೊಸದಾಗಿ ಭರ್ತಿ ಮಾಡಿಕೊಳ್ಳಲಾಗುತ್ತದೆ.ಹಳೆಯ ಆಸ್ಪತ್ರೆಯಲ್ಲಿ ಪ್ರತಿ ನಿತ್ಯ ಸರಾಸರಿ 1,200 ರಿಂದ 1,500 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಳರೋಗಿಗಳ ಸಂಖ್ಯೆಯೂ ಕಡಿಮೆ ಏನಿಲ್ಲ. ನಿತ್ಯ 200 ರಿಂದ 250 ಸಂಖ್ಯೆಯಲ್ಲಿ ಒಳರೋಗಿಗಳು ದಾಖಲಾ­ಗುತ್ತಿದ್ದಾರೆ.2011–12 ನೇ ಸಾಲಿನಲ್ಲಿ ಒಟ್ಟಾರೆ 3.87 ಲಕ್ಷ ರೋಗಿಗಳಿಗೆ ಹಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಒಟ್ಟು 400 ಹಾಸಿಗೆಗಳ ಆಸ್ಪತ್ರೆ ಇದಾಗಿದ್ದು, ಪ್ರತಿ ನಿತ್ಯ ಸರಾಸರಿ 1,300 ರೋಗಿಗಳು ಚಿಕಿತ್ಸೆ ಪಡೆಯು­ತ್ತಿದ್ದಾರೆ. ‘ವಾಜಪೇಯಿ ಆರೋಗ್ಯಶ್ರೀ’ ಯೋಜನೆಯಡಿ ಚಿಕಿತ್ಸೆ ನೀಡ     ಲಾಗುತ್ತಿದೆ.ನರರೋಗ, ಪ್ಲಾಸ್ಟಿಕ್ ಸರ್ಜರಿ, ಹೃದ್ರೋಗ ಶಸ್ತ್ರಚಿಕಿತ್ಸೆ, ನ್ಯೂರೋ­ಲಾಜಿಸ್ಟ್, ರೇಡಿಯಾಲಜಿಸ್ಟ್, ಗ್ರೂಪ್ ‘ಸಿ’ ಮತ್ತು ‘ಡಿ’ ನೌಕರರು, ದರ್ಜೆ–1, ದರ್ಜೆ–2 ಶುಶ್ರೂಷಕ ಅಧೀಕ್ಷಕಿಯರ ನೇಮಕ ಮಾಡಿಕೊಳ್ಳುವುದರಿಂದ ಈ ಭಾಗದ ಸಾವಿರಾರು ಬಡ ರೋಗಿಗಳಿಗೆ ನೂತನ ಆಸ್ಪತ್ರೆ ನೆರವಾಗಲಿದೆ.ಶೀಘ್ರವೇ ಉದ್ಘಾಟನೆ

ನೂತನ ಆಸ್ಪತ್ರೆಯ ಕಾಮಗಾರಿ ಬಹುತೇಕ ಪೂರ್ಣ­ಗೊಂಡಿದೆ. 300 ಹೊಸ ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದೆ. 3ನೇ ಪಾರ್ಟಿ ಪರಿಶೀಲನೆ ಬಾಕಿ ಉಳಿದಿದ್ದು, ಅದಾದ ಬಳಿಕ ಆಸ್ಪತ್ರೆಯನ್ನು ನಮ್ಮ ಸುಪರ್ದಿಗೆ ಹಸ್ತಾಂತರಿಸಲಾಗುತ್ತದೆ. ಈ ಆಸ್ಪತ್ರೆಯಲ್ಲಿ ಪ್ರತ್ಯೇಕ ಸ್ಥಾನೀಯ ವೈದ್ಯಕೀಯ ಅಧಿಕಾರಿ (ಆರ್‌ಎಂಒ) ಸೇರಿದಂತೆ ಅಗತ್ಯ ಹುದ್ದೆಗಳ ಭರ್ತಿ ಮಾಡಲಾಗುತ್ತದೆ. ಹೀಗಾಗಿ, ಈ ಭಾಗದ ಜನರಿಗೆ ಸಂಪೂರ್ಣ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಲಿದೆ.

–ಡಾ.ನಳಿನಿ ನಮೋಶಿ, ವೈದ್ಯಕೀಯ ಅಧೀಕ್ಷಕಿ, ಜಿಲ್ಲಾಸ್ಪತ್ರೆ

ಪ್ರತಿಕ್ರಿಯಿಸಿ (+)