ಭಾನುವಾರ, ಮಾರ್ಚ್ 7, 2021
29 °C
ಮೊದಲ ‘ಚಿತ್ರಸಂತೆ’ಗೆ ನಿರೀಕ್ಷೆ ಮೀರಿ ಸ್ಪಂದನ

‘ಮಾರ್ಕೆಟ್ ರಸ್ತೆ’ಯಲ್ಲಿ ಮನಸೆಳೆದ ಚಿತ್ತಾರ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಾರ್ಕೆಟ್ ರಸ್ತೆ’ಯಲ್ಲಿ ಮನಸೆಳೆದ ಚಿತ್ತಾರ

ಗುಲ್ಬರ್ಗ: ಪ್ರತಿನಿತ್ಯ ದೂಳಿನಿಂದ ಕೂಡಿರುತ್ತಿದ್ದ ಆ ರಸ್ತೆಯಲ್ಲಿ ಭಾನುವಾರ ‘ರಂಗು ರಂಗಿನ’ ಚಿತ್ತಾರ. ಅಲ್ಲಿಗೆ ಬಂದವರೆಲ್ಲ ‘ಭಾವ ಬಣ್ಣ’ದಲ್ಲಿ ಮುಳುಗಿ ಹೋಗಿದ್ದರು. ಮೊದಲ ಬಾರಿಗೆ ಆಯೋಜಿಸಿದ್ದ ‘ಕಲಾಸಂತೆ’ಯಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ‘ಕಲಾಕೃತಿ’ಗಳ ದರ್ಬಾರು.ಗುಲ್ಬರ್ಗ ವಿಶ್ವವಿದ್ಯಾಲಯ, ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ), ಹೈದರಾಬಾದ್ ಕರ್ನಾಟಕದ ಕಲಾ ಸಂಸ್ಥೆಗಳು ಮತ್ತು ಕಲಾವಿದರ ಆಶ್ರಯದಲ್ಲಿ ಡಾ.ಎಸ್.ಎಂ.ಪಂಡಿತ ರಂಗಮಂದಿರದಿಂದ ಮಹಾನಗರ ಪಾಲಿಕೆ ಗೇಟ್‌ ಮುಂಭಾಗದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ‘ಚಿತ್ರಸಂತೆ’ಯಲ್ಲಿ ಕಲಾವಿದರು, ಕಲಾಸಕ್ತರು ಮತ್ತು ಕಲಾ ಪೋಷಕರರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.ಬೆಂಗಳೂರು, ಮೈಸೂರು ಮಾದರಿಯಲ್ಲಿ ಆಯೋಜಿಸಿದ್ದ ‘ಚಿತ್ರಸಂತೆ’ಯನ್ನು ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದರು. ಹೈ. ಕ ಭಾಗದ ಆರು ಜಿಲ್ಲೆಗಳು ಸೇರಿದಂತೆ ವಿಜಾಪುರ, ಧಾರವಾಡ, ಬೆಳಗಾವಿ, ದಾವಣಗೆರೆಯ ಸಾವಿರಕ್ಕೂ ಅಧಿಕ ಕಲಾವಿದರು ಸೂಪರ್ ಮಾರ್ಕೆಟ್ ರಸ್ತೆಯನ್ನು ಬಣ್ಣಗಳಲ್ಲಿ ಅದ್ದಿ ತೆಗೆದಿದ್ದರು.ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಚಿತ್ರಸಂತೆ ಆಯೋಜಿಸಲಾಗಿತ್ತು. 150ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದ ವಾಟರ್‌ ಕಲರ್‌, ಆ್ಯಕ್ರಿಲಿಕ್‌, ಮಧುಬನಿ, ಆಯಿಲ್‌ ಪೇಟಿಂಗ್‌, ಡಿಜಿಟಲ್‌ ಪೇಟಿಂಗ್‌, ಗ್ಲಾಸ್ ಪೇಂಟಿಂಗ್, ಕಟ್ಟಿಗೆ, ಕಲ್ಲಿನಲ್ಲಿ ಕೆತ್ತಿದ ಕಲಾಕೃತಿಗಳು–ಹೀಗೆ ನಾನಾ ಪ್ರಕಾರಗಳ ವೈವಿಧ್ಯಮಯ ವರ್ಣಚಿತ್ರಗಳು ಕಲಾಪ್ರೇಮಿಗಳ ಮನಸೂರೆಗೊಂಡವು.ವಾಟರ್, ಕ್ಯಾನ್ವಾಸ್ ಪೇಂಟಿಂಗ್, ಶಾಡೋ ಪೇಂಟಿಂಗ್ ಮತ್ತು ಮಾಡರ್ನ್ ಆರ್ಟ್ ಚಿತ್ರಗಳನ್ನು ವೀಕ್ಷಿಸಲು ಕಲಾಪ್ರೇಮಿಗಳು ಮುಗಿಬಿದ್ದಿದ್ದರು. ಎಸ್.ಬಿ.ದೃಶ್ಯ ಕಲಾ ಕಾಲೇಜು, ಫೈನ್ ಆರ್ಟ್ ಕಾಲೇಜು ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯದ ದೃಶ್ಯ ಕಲಾ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು, ವೃತ್ತನಿರತ ಕಲಾವಿದರು, ಹವ್ಯಾಸಿ ಕಲಾವಿದರು, ಕಲಾ ವಿದ್ಯಾರ್ಥಿಗಳು, ಕಲಾ ಸಂಸ್ಥೆಗಳು ಹೀಗೆ ಹೈ. ಕ ಭಾಗದ ಎಲ್ಲ ಕಲಾವಿದರು ಒಂದೆಡೆ ಸೇರಿ ವಿಶಿಷ್ಟಅನುಭವ ಪಡೆದರು.ರಸ್ತೆ ಬದಿಯಲ್ಲಿ ಮೊದಲ ಬಾರಿಗೆ ಏರ್ಪಡಿಸಿದ್ದ ‘ಚಿತ್ರಸಂತೆ’ ವೀಕ್ಷಿಸಲು ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಅಲ್ಲದೇ, ದಾರಿಹೋಕರು, ಆಟೊ, ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದವರ ಚಿತ್ತವೂ ಚಿತ್ರಸಂತೆಯತ್ತಲೇ ನೆಟ್ಟಿತ್ತು.

₨ 1ಲಕ್ಷ ನೆರವು: ಸಂಸದ ಸೇಡಂ

‘ಚಿತ್ರಸಂತೆ’ಗೆ ಸಂಸದ ಬಸವರಾಜ ಪಾಟೀಲ ಸೇಡಂ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಹೈದರಾಬಾದ್ ಕರ್ನಾಟಕ ಪ್ರದೇಶದ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ಚಿತ್ರಸಂತೆ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ.ಚಿತ್ರಸಂತೆಯನ್ನು ಪ್ರತಿವರ್ಷ ಆಯೋಜಿಸಬೇಕು. ಇದಕ್ಕಾಗಿ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಮತ್ತು ವಿಕಾಸ ಅಕಾಡೆಮಿ ವತಿಯಿಂದ ಪ್ರತಿ ವರ್ಷ ₨ 1 ಲಕ್ಷ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು. ಗುಲ್ಬರ್ಗ ವಿವಿ ಕುಲಸಚಿವ ಪ್ರೊ.ಚಂದ್ರಕಾಂತ ಯಾತನೂರ ಮಾತನಾಡಿ, ‘ಹೈ. ಕ ಭಾಗದ ಯುವಕಲಾವಿದರಿಗೆ ವೇದಿಕೆ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ.ಮೆಟ್ರೊ ಸೇರಿದಂತೆ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಚಿತ್ರಸಂತೆಯನ್ನು ಜಿಲ್ಲಾ ಸ್ಥಳದಲ್ಲಿ ಆಯೋಜಿಸಿರುವುದು ಉತ್ತಮ ವಿಚಾರ. ಕಲಾಪ್ರೇಮಿಗಳು ಕಲಾಕೃತಿಗಳನ್ನು ಖರೀದಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು’ ಎಂದು ಆಶಿಸಿದರು.ಎಚ್‌ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಕಾರ್ಯದರ್ಶಿ ಬಸವರಾಜ ಹಡಗಿಲ್, ಚೈತನ್ಯ ಆರ್ಟ್ ಗ್ಯಾಲರಿ ನಿರ್ದೇಶಕ ಎ.ಎಸ್.ಪಾಟೀಲ, ಉದ್ಯಮಿಗಳಾದ ಎಸ್.ಎಸ್.ಪಾಟೀಲ, ರಾಮಗೋಪಾಲ ಮಾಲು, ಬಿ.ಜೆ.ಪಾಟೀಲ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.