ವರ್ಷ ಗತಿಸಿದರೂ ನಳದಲ್ಲಿ ನೀರು ಬಂದಿಲ್ಲ..!

7
24X7 ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬ

ವರ್ಷ ಗತಿಸಿದರೂ ನಳದಲ್ಲಿ ನೀರು ಬಂದಿಲ್ಲ..!

Published:
Updated:

ವಿಜಯಪುರ: ‘ನಮ್‌ ವಾರ್ಡ್‌ನಲ್ಲಿ ಕಾಮಗಾರಿ ಮುಗಿದರೂ ನೀರು ಬರ್ತಿಲ್ಲ. ನಮ್‌ ಮನೆ ಕಡೆ ಇನ್ನೂ ಕೆಲಸವೇ ಚಾಲೂ ಆಗಿಲ್ಲ. ನಮ್ ಓಣ್ಯಾಗ್ ಅಮಾವಾಸ್ಯೆ, ಹುಣ್ಣಿಮೆಗೊಮ್ಮೆ ನೀರ್ ಬರ್ತಾವ್. ಕುಡಿಯೋ ನೀರಿನ ಸಮಸ್ಯೆ ಬಗೆಹರಿಯಲು ಇನ್ನೂ ಎಷ್ಟ್‌ ವರ್ಷ ಬೇಕಾಗುತ್ತೋ ಎಂಬುದು ಆ ದೇವರಿಗೆ ಗೊತ್ತು..!’

‘ಒಂದೆಡೆಯಿಂದ ಕೆಲಸ ಪೂರ್ಣಗೊಳಿಸಿಕೊಂಡು ಬಂದಿದ್ದರೆ, ಇದೂವರೆಗೂ ಹಲ ವಾರ್ಡ್‌ಗಳ ಜನರಿಗೆ 24X7 ಕುಡಿಯುವ ನೀರು ಪೂರೈಸಬಹುದಿತ್ತು. ಆದರೆ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿ ವರ್ಗ ಅವೈಜ್ಞಾನಿಕವಾಗಿ ಎಲ್ಲೆಡೆ ಕೆಲಸ ಮಾಡುತ್ತಿರುವುದರಿಂದ ನೀರಿನ ಸಮಸ್ಯೆ ಬೇತಾಳದಂತೆ ಇಂದಿಗೂ ಕಾಡುತ್ತಿದೆ...’ ಎಂಬ ಆಕ್ರೋಶದ ನುಡಿಗಳು ಗುಮ್ಮಟ ನಗರಿಯ ವಿವಿಧೆಡೆ ಮಾರ್ದನಿಸಲಾರಂಭಿಸಿವೆ.

‘ಹಲ ವರ್ಷಗಳಿಂದ ನೀರಿಗಾಗಿ ಸಮಸ್ಯೆ ಅನುಭವಿಸುತ್ತಿರುವ ನಮಗೆ, ನಗರದಲ್ಲಿ 24X7 ನಿರಂತರ ಕುಡಿಯುವ ನೀರು ಯೋಜನೆ ಕಾಮಗಾರಿ ಚಾಲನೆಗೊಂಡಾಗ ತುಂಬಾ ಖುಷಿಯಾಗಿತ್ತು. ನೀರಿನ ಸಮಸ್ಯೆ ನೀಗಿತು ಎಂದುಕೊಂಡೆವು. ಆದರೆ ನೀರಿನ ತ್ರಾಸ್‌ ಇಂದಿಗೂ ತಪ್ಪದಾಗಿದೆ’ ಎನ್ನುತ್ತಾರೆ ಗಣೇಶ ನಗರದ ನಿವಾಸಿ ಆನಂದ ಬಿರಾದಾರ.

‘ನಮ್‌ ಪ್ರದೇಶದಲ್ಲಿ ಈಗಾಗಲೇ ಪೈಪ್‌ಲೈನ್‌ ಕಾಮಗಾರಿ ಮುಗಿದಿದೆ. ಮನೆಗಳಿಗೆ ಹೊಸದಾಗಿ ನಳ ಕೂಡಿಸಿ, ಮೀಟರ್ ಹಾಕಿದ್ದಾರೆ. ಈ ಕೆಲಸ ನಡೆದು ಐದಾರು ತಿಂಗಳಾದ್ರೂ ನಮ್ಮನೆಗೆ ಇಂದಿಗೂ ನೀರು ಬಾರದಾಗಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಮ್ಮ ವಾರ್ಡ್‌ನಲ್ಲಿ ಎಲ್ಲಾ ರಸ್ತೆಗಳನ್ನು ಹಾಳು ಮಾಡಿ, ನಿರಂತರ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸಿ ವರ್ಷ ಕಳೆದಿದೆ. ಇಂದಿಗೂ ತಿಂಗಳಿಗೆ ಮೂರು ಬಾರಿ ಮಾತ್ರ 2 ತಾಸು ನೀರು ಬಿಡುತ್ತಿದ್ದಾರೆ. 24X7 ನಿರಂತರ ಕುಡಿಯುವ ನೀರಿನ ಯೋಜನೆಯ ಲಾಭ ದೊರೆಯಲಿದೆ ಎಂಬ ಆಶಾಭಾವನೆಯಲ್ಲಿರುವ ನಮಗೆ ಅದು ಇಂದಿಗೂ ಕೈಗೂಡುತ್ತಿಲ್ಲ’ ಎನ್ನುತ್ತಾರೆ ವಾರ್ಡ್‌ ನಂಬರ್‌ 35ರ ಇಟಗಿ ಕಾಲೊನಿಯ ಎಸ್‌.ಎಚ್‌.ಬಾಗವಾನ.

‘2012ರಲ್ಲಿ 24X7 ಕುಡಿಯುವ ನೀರಿನ ಕೇಂದ್ರ ಸರ್ಕಾರದ ಯೋಜನೆ ನಗರಕ್ಕೆ ಮಂಜೂರಾಯಿತು. 2014ರಲ್ಲಿ ಪ್ರಾಯೋಗಿಕವಾಗಿ ಆರು ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಂಡು, ವರ್ಷದೊಳಗೆ ನೀರು ಪೂರೈಸಿದೆವು.

2016ರಲ್ಲಿ ಅಮೃತ್ ಯೋಜನೆಯಡಿ ₹ 150 ಕೋಟಿ ಬಿಡುಗಡೆಯಾದ ನಂತರ ಉಳಿದಡೆ ಕಾಮಗಾರಿ ಆರಂಭಿಸಲಾಯಿತು. ಅನುದಾನ ಕೊರತೆಯಿಂದ ಒಂದು ವಾರ್ಡ್‌ನಲ್ಲಿ ಕಾಮಗಾರಿ ಆರಂಭಿಸಿರಲಿಲ್ಲ. ಇದೀಗ ₹ 27.98 ಕೋಟಿ ಬಿಡುಗಡೆಯಾಗಿದ್ದು, ವಾರದಲ್ಲಿ ಕೆಲಸ ಆರಂಭವಾಗಲಿದೆ’ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಚಂದ್ರಶೇಖರ ವಸ್ತ್ರದ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಲಯವಾರು ಕಾಮಗಾರಿ ನಡೆಸಲಾಗಿದೆ. ಪ್ರಾಯೋಗಿಕ ಹಂತದಲ್ಲಿ ಆರು ವಾರ್ಡ್‌ಗಳಿಗೆ ನೀರು ಪೂರೈಸಿದ್ದೇವೆ. ಐದು ವಲಯ ವ್ಯಾಪ್ತಿಯ 12 ವಾರ್ಡ್‌ಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ನೀರು ಬಿಟ್ಟಿದ್ದರೆ, 12 ವಾರ್ಡ್‌ಗಳಲ್ಲಿ ಶೇ 90ರಷ್ಟು ಕಾಮಗಾರಿ ಮುಗಿದಿದೆ. ಒಂದು ವಾರ್ಡ್‌ನ ಕಾಮಗಾರಿ ಆರಂಭಗೊಳ್ಳಬೇಕಿದೆ. 2019ರ ಅಕ್ಟೋಬರ್‌ ಒಳಗೆ ಕಾಮಗಾರಿ ಮುಗಿಯಬೇಕಿದೆ. ಅಷ್ಟರೊಳಗೆ ಎಲ್ಲ ಕಾಮಗಾರಿ ಮುಗಿದು, ನೀರು ಪೂರೈಸಲಾಗುವುದು’ ಎಂದು ವಸ್ತ್ರದ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !