ತಂಬಾಕಿನಿಂದ ದೇಹ ದುರ್ಬಲ

ಗುಲ್ಬರ್ಗ: ವಿಶ್ವದಲ್ಲಿ ತಂಬಾಕು ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿರುವ ಭಾರತ, ಸೇವನೆಯಲ್ಲಿಯೂ ಮೊದಲ ಸ್ಥಾನ ಪಡೆದುಕೊಂಡಿರುವುದು ವಿಷಾದಕರ ಎಂದು ವೈದ್ಯ ಡಾ. ಎಸ್.ಎಸ್ ಪಾಟೀಲ ತಿಳಿಸಿದರು.
ನಗರದ ಕಾಯಕ ಶಿಕ್ಷಣ ಸಂಸ್ಥೆಯ ಸರ್ವಜ್ಞ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕಿನಿಂದ ದೇಹದ 19 ಅಂಗಗಳು ದುರ್ಬಲಗೊಳ್ಳುತ್ತವೆ. ಶ್ವಾಸಕೋಶ, ಮೆದುಳು ಮತ್ತು ಹೃದಯಕ್ಕೆ ತೀವ್ರ ತೊಂದರೆ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು. ದೂಮ್ರಪಾನ ಮಾಡುವವರ ಜತೆಗಿದ್ದರೂ ಪರೋಕ್ಷವಾಗಿ ಸೇವನೆ ಮಾಡಿದಂತೆಯೆ. ಆ ಕಾರಣಕ್ಕೆ ಮಕ್ಕಳು ಯಾವುದೇ ದುಶ್ಚಟಗಳಿದ್ದರೂ ವಿರೋಧಿಸಿ. ಮನೆಯಲ್ಲಿ ಹಿರಿಯರು ಸೇವಿಸುತ್ತಿದ್ದರೆ ಅಕ್ಷರಸ್ಥರಾದ ನೀವು ತಿಳಿ ಹೇಳಬೇಕು ಎಂದು ಕರೆ ನೀಡಿದರು.
ಇಂದು ಮಾಧ್ಯಮಗಳು ಇಂಥ ದುಶ್ಚಟಗಳನ್ನು ಭಾರಿ ಅಂದವಾಗಿ ತೋರಿಸಿ ಯುವಜನತೆಯನ್ನು ದಾರಿ ತಪ್ಪಿಸುತ್ತಿವೆ. ಅದಕ್ಕೆ ಮರುಳಾಗದೇ ವಾಸ್ತವಾಂಶವನ್ನು ಅರಿತುಕೊಳ್ಳಿ ಎಂದರು. ಶರಣಬಸವೇಶ್ವರ ಕಾಲೇಜಿನ ಮನೋಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಆರ್. ವೆಂಕಟರಡ್ಡಿ ಮಾತನಾಡಿ, ಮಕ್ಕಳಲ್ಲಿ ಯಾವುದೇ ಕೆಟ್ಟ ಕೆಲಸವನ್ನು ಮಾಡಿ ನೋಡಬೇಕು ಎಂಬ ಹುಚ್ಚು ಮನಸ್ಥಿತಿ ಇರುತ್ತದೆ.
ಅಂಥ ಮಕ್ಕಳು ದುಶ್ಚಟಗಳಿಗೆ ಬೇಗನೇ ಒಗ್ಗುತ್ತಾರೆ. ನೀವೆಲ್ಲರೂ ತಂಬಾಕಿನಿಂದ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಅರ್ಥೈಸಿಕೊಂಡು ಇತರರಿಗೆ ತಿಳಿಸಬೇಕು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಪ್ರೊ. ಚನ್ನಾರಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಶಿವರಾಜ ಪಾಟೀಲ, ಗೀತಾ ಪಾಟೀಲ, ಕರುಣೇಶ ಬಿ.ಎಚ್., ಎಸ್.ಎಸ್. ಹಿರೇಮಠ, ಎಂ.ಸಿ.ಕಿರದಳ್ಳಿ ಹಾಗೂ ಸಂಸ್ಥೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.