ಗುರುವಾರ , ನವೆಂಬರ್ 14, 2019
19 °C

ಮಿರಿಯಾಣ-ಚಿಂಚೋಳಿ ಅಂತರ ರಾಜ್ಯ ರಸ್ತೆ: ನೆನೆಗುದಿಗೆ ಬಿದ್ದ ಕಾಮಗಾರಿ ಆರಂಭ

Published:
Updated:

ಚಿಂಚೋಳಿ: ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂತರ ರಾಜ್ಯ ಸಂಪರ್ಕ ರಸ್ತೆ ಯೋಜನೆಯ ತಾಂಡೂರು ಚಿಂಚೋಳಿ ಮಾರ್ಗದ ರಸ್ತೆ ನಿರ್ಮಾಣ ಕಾಮಗಾರಿ ಮಳೆಗಾಲದಲ್ಲಿ ಪ್ರಾರಂಭಿಸಲಾಗಿದೆ.ಕೇಂದ್ರದ ಭೂಸಾರಿಗೆ ಸಚಿವಾಲಯದ ರೂ. 24.73 ಕೋಟಿ ಅಂದಾಜು ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್‌ನಲ್ಲಿ ರೂ. 23.78 ಕೋಟಿಗೆ ಗುತ್ತಿಗೆದಾರರು ಪಡೆದುಕೊಂಡಿದ್ದು, ಕಳೆದ ವಾರ ಕಾಮಗಾರಿ ಪ್ರಾರಂಭಿಸಿದ್ದಾರೆ.ಆಂಧ್ರದ ಗಡಿ(ಮಿರಿಯಾಣ)ಯಿಂದ ಚಿಂಚೋಳಿಯ ಬಸವೇಶ್ವರ ವೃತ್ತದ ಮೂಲಕ ಚಿಂಚೋಳಿ ಷುಗರ್ ಮಿಲ್ ಆ್ಯಂಡ್ ಬಯೋ ಇಂಡಸ್ಟ್ರೀಸ್ ವರೆಗೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ -9ರ ಹುಮ್ನಾಬಾದ ಉಪ ವಿಭಾಗದ ಅಧಿಕಾರಿಗಳು ಅಂದಾಜು ಪಟ್ಟಿ ಸಿದ್ದಪಡಿಸಿದ್ದರು.ಪ್ರತಿ ಕೀ.ಮೀ.ಗೆ ಒಂದು ಕೋಟಿ ರೂ.ಗಿಂತಲೂ ಅಧಿಕ ಹಣ ವೆಚ್ಚ ಮಾಡಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಕಳೆದ 2 ವರ್ಷಗಳಿಂದ ವಿವಿಧ ಹಂತದ ಮಂಜೂರಾತಿ ಸಿಕ್ಕರೂ ಸಹ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆಗೆ ವಿನಾ ಕಾರಣ ತಡೆ ಹಿಡಿದಿದ್ದರು ಎನ್ನಲಾಗಿದೆ.ಆದರೆ ಕಳೆದ 7 ತಿಂಗಳ ಹಿಂದಷ್ಟೆ ಕೇಂದ್ರದ ಭೂಸಾರಿಗೆ ಸಚಿವಾಲಯದ ಹಣಕಾಸು ಇಲಾಖೆ ಹಸಿರು ನಿಶಾನೆ ತೋರಿಸಿದ ನಂತರ ಟೆಂಡರ್ ಪ್ರಕ್ರಿಯೆ ಗೊಳಿಸಲಾಗಿದೆ.ಗುತ್ತಿಗೆದಾರರು ತಾಲ್ಲೂಕಿನ ಕಲ್ಲೂರು ರೋಡ್ ದಿಂದ ಪೋಲಕಪಳ್ಳಿವರೆಗೆ ರಸ್ತೆಯ ಒಂದು ಭಾಗ ಅಗೆದು, ಮುರುಮ್ ಭರ್ತಿ ನಡೆಸುತ್ತಿದ್ದಾರೆ. ಹಾಲಿ ಇರುವ ರಸ್ತೆಯನ್ನು ಒಂದು ಅಡಿ ಆಳ ಅಗೆದಿರುವ ಗುತ್ತಿಗೆದಾರರು, ಇದರ ಮೇಲೆ ಒಂದವರೆ ಮೀಟರ್ ಎತ್ತರದಲ್ಲಿ ವಿವಿಧ ಸಾಮಗ್ರಿ ಬಳಸಿ ರಸ್ತೆ ನಿರ್ಮಿಸಲಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ -9ರ ಹುಮ್ನಾಬಾದ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದೇವಿದಾಸ್ ಚವ್ಹಾಣ್ ತಿಳಿಸಿದರು.   ಕರ್ನಾಟಕ ಹಾಗೂ ಆಂಧ್ರದ ಮಧ್ಯೆ ಸಂಪರ್ಕ ಕಲ್ಪಿಸುವ ಮಹತ್ವದ ಚಿಂಚೋಳಿ ತಾಂಡೂರು ಮಾರ್ಗದ ಈ ರಸ್ತೆ ಸಂಪೂರ್ಣ ಹದಗೆಟ್ಟು ಸುಧಾರಣೆಗಾಗಿ ಕಾಯುತ್ತಿತ್ತು.ತಾಲ್ಲೂಕಿನಲ್ಲಿ ಜನಪ್ರತಿನಿಧಿಗಳು ಒಂದು ಲಕ್ಷ, ಎರಡು ಲಕ್ಷ ರೂ.ಗಳ ಮೊತ್ತದ ಸಿಮೆಂಟ್ ಕಾಮಗಾರಿಗಳಿಗೆ ಸರಣಿ ಅಡಿಗಲ್ಲು ನೆರವೇರಿಸಿದ್ದಾರೆ. ಆದರೆ 23.78 ಕೋಟಿ ಮೊತ್ತದ ಅಂತರ ರಾಜ್ಯ ಸಂಪರ್ಕ ರಸ್ತೆ ಯೋಜನೆ ಅಡಿಯಲ್ಲಿ ಮಂಜೂರಾದ ಈ ಕಾಮಗಾರಿ ಪ್ರಾರಂಭಕ್ಕೆ ಶಿಲಾನ್ಯಾಸ ನೆರವೇರಿಸದೇ ಇರುವುದು ಸ್ಥಳೀಯರು ಹುಬ್ಬೇರಿಸುವಂತೆ ಮಾಡಿದೆ.

ಪ್ರತಿಕ್ರಿಯಿಸಿ (+)