ದಿಗ್ಗಾಂವ್ ಗ್ರಾಮಕ್ಕೆ ಟಾರು ರಸ್ತೆ ಭಾಗ್ಯ

ಶನಿವಾರ, ಜೂಲೈ 20, 2019
23 °C

ದಿಗ್ಗಾಂವ್ ಗ್ರಾಮಕ್ಕೆ ಟಾರು ರಸ್ತೆ ಭಾಗ್ಯ

Published:
Updated:

ಚಿತ್ತಾಪುರ: ಇಲ್ಲಿಂದ ದಿಗ್ಗಾಂವ್ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ದಶಕಗಳ ನಂತರ ಟಾರು (ಡಾಂಬರ್) ಭಾಗ್ಯ ಕಂಡು ಸುಧಾರಣೆಯಾಗಿದೆ. ನೂತನ ರಸ್ತೆ ನಿರ್ಮಾಣದಿಂದ ಸಾರಿಗೆ ಸಂಚಾರಕ್ಕೆ ತುಂಬಾ ಅನುಕೂಲವಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತ ಮಾಡಿದ್ದಾರೆ.ಕಳೆದ ಒಂದು ದಶಕಕ್ಕಿಂತ ಹೆಚ್ಚಿನ ಅವಧಿಯವರೆಗೆ ಈ ರಸ್ತೆ ಹದಗೆಟ್ಟು ಸಾರಿಗೆ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿತ್ತು. ಡಾಂಬರ್ ಭಾಗ್ಯವಿಲ್ಲದೆ ರಸ್ತೆ ಅನಾಥವಾಗಿ ತೀರಾ ಹದಗೆಟ್ಟು ಜನರು ಈ ರಸ್ತೆಯಲ್ಲಿ ಸಂಚಾರ ಮಾಡಬೇಕಾದರೆ ನರಕ ಯಾತನೆ ಅನುಭವಿಸುವಂತೆ ಆಗಿತ್ತು. ಈಗ ರಸ್ತೆ ನಿರ್ಮಾಣದಿಂದ ಸುಗಮ ಸಂಚಾರ ಸಾಧ್ಯವಾಗಿದೆ ಎಂದು ಗ್ರಾಮದ ಜನರು ಸಂತೋಷ ವ್ಯಕ್ತ ಮಾಡಿದ್ದಾರೆ.ಡಾಂಬರ್ ರಸ್ತೆ ನಿರ್ಮಾಣ ಮಾಡುವಾಗ ರಸ್ತೆಯ ಎರಡೂ ಪಕ್ಕದಲ್ಲಿ ಸರಿಯಾದ ಮುರುಮ್ ರಸ್ತೆ ನಿರ್ಮಾಣ ಮಾಡಿಲ್ಲ. ಡಾಂಬರ್ ರಸ್ತೆ ಪಕ್ಕದಲ್ಲಿ ಮುರುಮ್ ಹಾಕದ ಪರಿಣಾಮ ವಾಹನಗಳೆರಡು ಪರಸ್ಪರ ಎದುರುಗೊಂಡಾಗ ಸಮಸ್ಯೆಯಾಗುತ್ತಿದೆ. ಇದನ್ನು ಅಧಿಕಾರಿಗಳು ಕಡೆಗಣಿಸಿದ್ದಾರೆ ಎಂದು ದಿಗ್ಗಾಂವ್ ಜನರು ಟೀಕಿಸಿದ್ದಾರೆ.ರಸ್ತೆಯ ಎರಡೂ ಪಕ್ಕದಲ್ಲಿ ಸರಿಯಾಗಿ ಜೆಲ್ಲಿ ಕಲ್ಲು ಮುರುಮ್ ಹಾಕಬೇಕು. ಇಲ್ಲದೆ ಹೋದರೆ ಮಳೆಗಾಲದಲ್ಲಿ ಡಾಂಬರ್ ರಸ್ತೆ ಕಿತ್ತಿ ಹೋಗಿ ಮತ್ತೆ ರಸ್ತೆ ಯಥಾ ದುಸ್ಥಿತಿ ಮುಂದುವರೆಯುತ್ತದೆ. ಇದನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿ ಗಮನ ಹರಿಸಿ ರಸ್ತೆ ಪಕ್ಕದಲ್ಲಿ ಮುರುಮ್ ಹಾಕಿಸುವ ಕೆಲಸ ಮಾಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.ಗ್ರಾಮದ ಕಡೆಗೆ ಉಳಿದಿರುವ ಸುಮಾರು ಮೂರು ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ.ಜನರು ಅನುಭವಿಸುವ ತೊಂದರೆ, ವಾಹನ ಸಂಚಾರಕ್ಕೆ ಆಗುತ್ತಿರುವ ಸಮಸ್ಯೆಯನ್ನು ಗಮನಿಸಿ ರಸ್ತೆ ಸುಧಾರಣೆ ಅಥವಾ ನೂತನ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಹಾಗೂ ಈ ಭಾಗದ ಜನಪ್ರತಿನಿಧಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮದ ಜನರು ವಿನಂತಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry