ಗುರುವಾರ , ಮೇ 6, 2021
33 °C

ಕುಡಿವ ನೀರಿಗೆ ಖಾಕಿಸರದಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜನತೆಯ ಜೀವಕ್ಕೆ ರಕ್ಷಣೆ ಒದಗಿಸಬೇಕಾದ ಆರಕ್ಷಕರಿಗೇ ಕುಡಿಯಲು ನೀರಿಲ್ಲ. ಕಾನೂನು ಸುವ್ಯವಸ್ಥೆ  ಕಾಪಾಡಬೇಕಾದ ಖಾಕಿಗಳು ನೀರಿಗೆ ಸ್ಪರ್ಧೆ ನಡೆಸಬೇಕು. ತುರ್ತು ಸೇವೆಗೆ ತೆರಳಬೇಕಾದ ಪೊಲೀಸರು ಕುಡಿವ ನೀರಿಗೆ ಏಳುದಿನ ಕಾಯುವುದು ಅನಿವಾರ್ಯ!-ಇದು ಗುಲ್ಬರ್ಗ ಪೊಲೀಸ್ ವಸತಿಗೃಹ ಬಡಾವಣೆಯ ನೀರು ಪೂರೈಕೆಯ ದುಸ್ಥಿತಿ. ಎರಡು ತಿಂಗಳಿನಿಂದ ಗುಲ್ಬರ್ಗದ ವಿವಿಧ ಬಡಾವಣೆಗಳಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯು ಪೊಲೀಸರ ವಸತಿಗೃಹಕ್ಕೂ ಬಾಧಿಸಿದೆ. ರಾತ್ರಿ- ಹಗಲೆನ್ನದೇ ಸೇವೆಗೆ ತೆರಳುವ ಆರಕ್ಷಕರನ್ನೂ ಕಾಡಿದೆ.ಎರಡು ತಿಂಗಳಿನಿಂದ ಪೊಲೀಸ್ ವಸತಿಗೃಹ ಬಡಾವಣೆಗೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ವಾರಕ್ಕೊಂದು ಬಾರಿ ಮಾತ್ರ ನೀರು ಬರುತ್ತಿದೆ. ಹೀಗಾಗಿ ಪೊಲೀಸರು ಹಾಗೂ ಅವರ ಮನೆಮಂದಿಯೆಲ್ಲ ನೀರಿಗಾಗಿ ಅಲೆದಾಡುವ ಸ್ಥಿತಿ ಬಂದಿದೆ. ಸರಗಳವು, ಬೈಕ್ ಕಳವು, ರಕ್ಷಣೆ ಮತ್ತಿತರ ಕರ್ತವ್ಯಕ್ಕೂ ಹೆಚ್ಚಾಗಿ ನೀರಿನತ್ತ ಪೊಲೀಸರು ಗಮನ ಹರಿಸಬೇಕಾಗಿದೆ. ಕರ್ತವ್ಯದ ಜೊತೆ ಕೊಡ ಹಿಡಿದು ಸರದಿ ಕಾಯುವ ಪರಿಸ್ಥಿತಿ ಬಂದೊದಗಿದೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.`ಡ್ಯೂಟಿಗೆ ಕರೆದರೆ ಝಳಕ ಮಾಡದೇ ಹೋಗುವ ಸ್ಥಿತಿಯಾಗಿದೆ~ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪೊಲೀಸರೊಬ್ಬರ ಮನೆಯವರು ಹೇಳಿದರು. ನೀರು ಸರಬರಾಜು ಮಾಡುವ ಪೈಪ್‌ಲೈನ್ ಕೂಡಾ ಸಮರ್ಪಕ ಸ್ಥಿತಿಯಲ್ಲಿ ಇಲ್ಲ. ಇದರಿಂದ ಬಂದ ನೀರು ಕೂಡಾ ಸಂಪೂರ್ಣವಾಗಿ ದೊರಕುತ್ತಿಲ್ಲ ಎಂಬ ದೂರಿದೆ.ಪರಿಹಾರ: ಕೊಳವೆಬಾವಿ ತೋಡಿಸುವ ಮೂಲಕ ನೀರಿನ ಸಮಸ್ಯೆ ನೀಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಯತ್ನಿಸಿದ್ದಾರೆ. ಆದರೆ ಕೊಳವೆಬಾವಿಯ  ನೀರು ಕುಡಿಯಲು ಯೋಗ್ಯವಾಗಿಲ್ಲ. ಹೊರಗಿನ ಕಾರ್ಯಗಳಿಗೆ ಮಾತ್ರ ಬಳಸಬಹುದು. ಹೀಗಾಗಿ ಸರದಿ ಕಾಯುವ ಸ್ಥಿತಿ ತಪ್ಪಿಲ್ಲ ಎನ್ನಲಾಗಿದೆ.ನಗರದ ಸಮಸ್ಯೆ: ಭೀಮಾ ನದಿ ನೀರು ಕಲುಷಿತಗೊಂಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ಮಾತ್ರ ನೀರು ಪೂರೈಸಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಮೋಚನಾ ದಿನದಂದು (ಸೆ.17)ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಜಿಲ್ಲಾಧಿಕಾರಿ ಅವರಿಗೆ ಆದೇಶಿಸಿದ್ದರು. ನಗರದ ಕುಡಿವ ನೀರಿನ ಸಮಸ್ಯೆಯನ್ನು ಜಿಲ್ಲಾಧಿಕಾರಿ ತುರ್ತಾಗಿ ಪರಿಹರಿಸಬೇಕಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.