ಶುಕ್ರವಾರ, ಮೇ 14, 2021
31 °C

ರಾಹುಲ್ ಗೆ ಅಧ್ಯಕ್ಷತೆಯ ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಕ್ಕಳ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸುವ, ಮಕ್ಕಳೇ ಕಾರ್ಯಕ್ರಮ ನಿರ್ವಹಿಸುವ, ಪ್ರಮುಖರಾಗಿ ಪಾಲ್ಗೊಳ್ಳುವ ಗುಲ್ಬರ್ಗ `ಜಿಲ್ಲಾ ಪ್ರಥಮ ಮಕ್ಕಳ ಪ್ರತಿಭಾ ಸಮ್ಮೇಳನ~ದ ಅಧ್ಯಕ್ಷರಾಗಿ 14ರ ಹರೆಯದ ಯೋಗಪಟು ರಾಹುಲ ಎಸ್.ನಾಗರಾಳ ಆಯ್ಕೆಯಾಗಿದ್ದಾರೆ. ನಗರದ ಜಿಲ್ಲಾ ನ್ಯಾಯಾಲಯ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಭವನದಲ್ಲಿ ಸೆ.30ರಂದು ಸಮ್ಮೇಳನ ನಡೆಯಲಿದೆ. ವಿವಿಧ ಕ್ಷೇತ್ರಗಳ ಮುಖಂಡರ ಸಹಕಾರದೊಂದಿಗೆ ವಿಶ್ವಜ್ಯೋತಿ ಪ್ರತಿಷ್ಠಾನವು ಸಮ್ಮೇಳನ ಆಯೋಜಿಸಿದೆ. ಪ್ರತಿಷ್ಠಾನ ಹಮ್ಮಿಕೊಳ್ಳುತ್ತಿರುವ ಮೂರನೇ ಸಮ್ಮೇಳನ ಇದಾಗಿದ್ದು, ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಲಿದೆ.ಸಾಂಸ್ಕೃತಿಕ ಮೆರವಣಿಗೆ, ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದೊಂದಿಗೆ ಪ್ರತಿಭಾ ಅನಾವರಣ, ಮಕ್ಕಳ ಕವಿಗೋಷ್ಠಿ, 25ಕ್ಕೂ ಹೆಚ್ಚು ಸಾಧಕ ಮಕ್ಕಳಿಗೆ ಪುರಸ್ಕಾರ, ಮಕ್ಕಳ ಚಿತ್ರಕಲಾ ಪ್ರದರ್ಶನ, ಮಕ್ಕಳ ಪುಸ್ತಕಗಳ ಮಾರಾಟ, ಮಕ್ಕಳಿಂದಲೇ ಉದ್ಘಾಟನೆ, ಮಕ್ಕಳಿಂದಲೇ ನಿರೂಪಣೆಯಂತಹ ಹಲವು ಅನನ್ಯತೆಯನ್ನು ಸಮ್ಮೇಳನ ಹೊಂದಲಿದೆ.

 

ಮೂರು ಸಾವಿರಕ್ಕೂ ಹೆಚ್ಚು ವಚನಗಳನ್ನು ನಿರರ್ಗಳವಾಗಿ ಹೇಳುವ ಚತುರರು, ಅಂಧ, ಮೂಕ-ಕಿವುಡರಾಗಿದ್ದೂ ಸಾಧಿಸಿದ ಪುಟಾಣಿಗಳು, ಕ್ರೀಡೆಯಲ್ಲಿ ಸಾಮರ್ಥ್ಯ ತೋರಿದವರು, ಓದು-ಬರಹದ ಸಾಧಕ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ವಿಶೇಷ.ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆಯ ಸ್ವಾಗತ ಸಮಿತಿಯು ಸಮ್ಮೇಳನ ಅಧ್ಯಕ್ಷ ರಾಹುಲ ಅವರನ್ನು ಆಯ್ಕೆ ಮಾಡಿದೆ. ಈ ಸಮಿತಿಯಲ್ಲಿ ನೀಲಕಂಠರಾವ ಮೂಲಗೆ, ಡಾ.ಎಸ್.ಎಸ್.ಗುಬ್ಬಿ (ಗೌರವಾಧ್ಯಕ್ಷರು), ನಾಸೀರ್ ಹುಸೇನ್ ಉಸ್ತಾದ್ (ಕಾರ್ಯಾಧ್ಯಕ್ಷ), ಬಸವರಾಜ ಬಿರಾದಾರ (ಕೋಶಾಧ್ಯಕ್ಷ), ಲಿಂಗರಾಜ ಶಾಸ್ತ್ರಿ, ಶಂಕರ ಬಿರಾದಾರ, ಪ.ಮಾನು ಸಗರ, ಶರಣು ಭೂಸನೂರ, ಶಿವರಾಜ ಅಂಡಗಿ, ಶ್ರೀಕಾಂತಗೌಡ ತಿಳಿಗೂಳ, ಡಾ.ಅರುಣಕುಮಾರ ಲಗಶೆಟ್ಟಿ, ಅನಂತಗುಡಿ, ಬಿ.ಎಂ.ಪಾಟೀಲ ಕಲ್ಲೂರ, ಮಂಜುನಾಥ ನಾಲ್ವಾಲ್ಕರ್ ಮತ್ತಿತರರು ಸಮಿತಿಯಲ್ಲಿ ಇದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಪ.ಮಾನು ಸಗರ, ಶಿವರಾಜ ಪಾಟೀಲ, ಶ್ರೀಕಾಂತಗೌಡ ತಿಳಿಗೂಳ, ಶಿವರಾಜ ಅಂಡಗಿ, ಬಿ.ಎಂ.ಪಾಟೀಲ ಕಲ್ಲೂರ ಮತ್ತಿತರರು ಗೋಷ್ಠಿಯಲ್ಲಿದ್ದರು.

 

ಯೋಗ ಸಾಧನೆಯ ಬಾಲಪ್ರತಿಭೆ

ಗುಲ್ಬರ್ಗ: ಶಿಕ್ಷಕ ದಂಪತಿ ಶ್ರೀಶೈಲ ನಾಗರಾಳ ಮತ್ತು ಗಿರಿಜಾ ನಾಗರಾಳ ಪುತ್ರನಾದ ರಾಹುಲ, ಯೋಗದಲ್ಲಿ ಅಂತರರಾಷ್ಟ್ರೀಯ ಸಾಧನೆ ಮಾಡಿದ್ದಾರೆ. 150ಕ್ಕೂ ಹೆಚ್ಚು ಆಸನಗಳನ್ನು ನಿರಾಯಾಸವಾಗಿ ಮಾಡುವ ರಾಹುಲ, ಪ್ರಸ್ತುತ ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ.

1997ರ ಆಗಸ್ಟ್ 1ರಂದು ಜನಿಸಿದ ರಾಹುಲ 6ನೇ ತರಗತಿಯಲ್ಲಿ ಇದ್ದಾಗಲೇ ಬೆಳಗಾವಿ ಜಿಲ್ಲೆಯ ಮನ್ನಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ದೆಹಲಿಯಲ್ಲಿ ನಡೆದ 2011ರ ಯೋಗಾಸನ ವಿಶ್ವಕಪ್‌ನಲ್ಲಿ `ರಜತ ಪದಕ~ ವಿಜೇತರಾಗಿದ್ದಾರೆ. ಬೆಂಗಳೂರಿನ ಸ್ವಾಮಿ ವಿವೇಕಾನಂದ ವಿಶ್ವಪ್ರಕೃತಿ ಯೋಗಾ ಫೌಂಡೇಶನ್‌ನ ಯೋಗಮಹೋತ್ಸವದಲ್ಲಿ `ಯೋಗನಿಧಿ~, ಯೋಗ ಸಿರಿ~ ಪ್ರಶಸ್ತಿ ಪಡೆದಿದ್ದಾರೆ. ಸ್ವಾಮಿ ವಿವೇಕಾನಂದ ಯೋಗಅನುಸಂಧಾನ ಸಂಸ್ಥಾನವು 2010ರ ಡಿಸೆಂಬರ್‌ನಲ್ಲಿ ನಡೆಸಿದ ಯೋಗ ಒಲಿಂಪಿಯಾಡ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಯೋಗಸ್ಪರ್ಧೆಯಲ್ಲಿ ಈಗಾಗಲೇ ಎರಡು ಬಾರಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.