ಶನಿವಾರ, ಮೇ 8, 2021
26 °C

ಬವಣೆಗಳಲ್ಲಿ ಬಡವಾದ ಪಾಣೆಗಾಂವ

ನಾಗರಾಜ ರಾ. ಚಿನಗುಂಡಿ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: `ಸೂರ್ಯನ ಶಾಖ ಹೆಚ್ಚಾಗಿರುವ ಈ ಭಾಗದಲ್ಲಿ ಬಹಳ ಹಿಂದೊಮ್ಮೆ ನೀರಿಗಾಗಿ ಪರಿತಪಿಸುತ್ತಿದ್ದ ಜನರ ಗುಂಪೊಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಬಾವಿಯೊಂದನ್ನು ತೋಡಿದರು. ಅದರಿಂದ ನೀರು ದೊರೆಯಿತು.ಅದೇ ಸ್ಥಳದಲ್ಲಿ ಮನೆ ಕಟ್ಟಿಕೊಂಡು ಆ ಜನ ವಾಸಿಸಲಾರಂಭಿಸಿದರು. ಉರ್ದು ಪ್ರಭಾವದಿಂದಾಗಿ ನೀರು ಎನ್ನುವುದು ಹಿಂದಿಯಲ್ಲಿ `ಪಾಣಿ~ಯಾಗಿ, ಗ್ರಾಮವು `ಗಾಂವ~ ಎಂದಾಗಿ ಪಾಣೆಗಾಂವ ಎನ್ನುವ ಗ್ರಾಮ ಹುಟ್ಟಿಕೊಂಡಿದೆ ಎನ್ನುವುದು ಆ ಗ್ರಾಮದಲ್ಲಿ ವಾಸಿಸುವ ಜನರ ನಂಬಿಕೆ.ಜನರ ಈ ನಂಬಿಕೆಯನ್ನು ಸಮರ್ಥಿಸುವ ಸಿಹಿನೀರಿನ ಬಾವಿಯೊಂದು ಅಲ್ಲಿದೆ. ಬಾವಿ ತೋಡಿದ ಸಂದರ್ಭದಲ್ಲಿದ್ದ ಜನರ ಸಂಖ್ಯೆ ಈಗ ಸಾಕಷ್ಟು ಹೆಚ್ಚಾಗಿದೆ. ಒಟ್ಟು 1400 ಜನಸಂಖ್ಯೆಯ ಗ್ರಾಮಕ್ಕೆ ನೀರು ಒದಗಿಸುವ ಸಾಮರ್ಥ್ಯವನ್ನು ಬಾವಿ ಹೊಂದಿಲ್ಲ. ಸರ್ಕಾರವು ಕೊಳವೆಬಾವಿ ಕೊರೆಸಿ ಆ ಮೂಲಕ ಕುಡಿಯಲು ನೀರು ಒದಗಿಸುತ್ತಿದೆ. ಕೆರೆ, ನದಿಗಳ ಆಶ್ರಯವಿರದ ಈ ಗ್ರಾಮದ ಜನರು ನೀರಿಗಾಗಿ ಪರಿತಪಿಸುವುದೇ ಹೆಚ್ಚು.ಗುಲ್ಬರ್ಗ ನಗರದ ಜನರು ಬಳಸಿದ ಚರಂಡಿ ನೀರನ್ನೆ ಪಾಣೆಗಾಂವ ಜನರು ಈಗಲೂ ಬಟ್ಟೆಬರೆ ತೊಳೆದುಕೊಳ್ಳಲು ಬಳಸುತ್ತಿದ್ದಾರೆ ಎನ್ನುವುದು ಕೇಳುವುದಕ್ಕೆ ಅಪ್ರಿಯವಾದರೂ ಗ್ರಾಮದ ಮಹಿಳೆಯರು ಈ ಸಂಕಷ್ಟವನ್ನೆ ಪ್ರಿಯ ಮಾಡಿಕೊಂಡಿದ್ದಾರೆ. ಗುಲ್ಬರ್ಗದಿಂದ ಹರಿಯುವ ರಾಜಕಾಲುವೆಯ ಮುಖ್ಯ ಚರಂಡಿ ಪಾಣೆಗಾಂವ ಮುಖಾಂತರ ಭೀಮಾ ನದಿ ಸೇರುತ್ತದೆ.ಗ್ರಾಮಕ್ಕೆ ಹೊಂದಿಕೊಂಡು ಹಳ್ಳದ ರೀತಿಯಲ್ಲಿ ಚರಂಡಿ ಸಾಗುತ್ತದೆ. ಪಾಣೆಗಾಂವ ತಲುಪಲು ಈ ಚರಂಡಿ ಮೇಲೆ ನಿರ್ಮಿಸಿರುವ ಕಿರುಸೇತುವೆ ಮೂಲಕವೇ ಹೋಗಬೇಕು. ಮಳೆಗಾಲದಲ್ಲಿ ಚರಂಡಿ ತುಂಬಿಕೊಂಡು ಹರಿಯುವುದರಿಂದ ಕಿರುಸೇತುವೆ ಕೂಡಾ ಮುಳುಗುತ್ತದೆ. ಆಗ ಈ ಗ್ರಾಮವು ಗುಲ್ಬರ್ಗದೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತದೆ.ಭೀಮಾ ನದಿಯಿಂದ ಗುಲ್ಬರ್ಗಕ್ಕೆ ನೀರು ಪೂರೈಸುವ ಪೈಪ್‌ಲೈನ್ ಪಾಣೆಗಾಂವಗೆ ಹೊಂದಿಕೊಂಡೆ ಸಾಗುತ್ತದೆ. ಆದರೆ, ಗ್ರಾಮಸ್ಥರು ಮಾತ್ರ ಕೊಳಚೆ ನೀರುಗಳಲ್ಲಿ ಬಟ್ಟೆ ತೊಳೆದುಕೊಂಡು ಬದುಕುವ ದುಸ್ಥಿತಿಯನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎನ್ನುವುದು ವಿಪರ್ಯಾಸ.ಖಣದಾಳ ಗ್ರಾಮ ಪಂಚಾಯಿತಿಗೆ ಸೇರುವ ಪಾಣೆಗಾಂವ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತಗೊಂಡಿದೆ. ಗ್ರಾಮದಲ್ಲಿ 8ನೇ ತರಗತಿವರೆಗೆ ಸರ್ಕಾರಿ ಶಾಲೆ ಇದೆ. ಮನೆ ಬೀದಿಗಳಲ್ಲಿ ಸಿಮೆಂಟ್ ರಸ್ತೆಗಳನ್ನು ನಿರ್ಮಿಸುವ ಕೆಲಸ ಬಹುತೇಕ ಗ್ರಾಮಗಳಲ್ಲಿ ನಡೆಯುತ್ತಿದೆ. ಪಾಣೆಗಾಂವ ಪಾಲಿಗೆ ಮಾತ್ರ ಸಿಮೆಂಟ್ ರಸ್ತೆಯ ಭಾಗ್ಯ ಬಂದಿಲ್ಲ. ಗ್ರಾಮದಲ್ಲಿ ದೊಡ್ಡ ದೇವಸ್ಥಾನ ನಿರ್ಮಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಇಲ್ಲಿನ ಜನರ ಆರ್ಥಿಕ ಸ್ಥಿತಿ ಇದೆ. ಗ್ರಾಮದಲ್ಲಿ ಶೇ. 70ರಷ್ಟು ಪರಿಶಿಷ್ಟ ಜಾತಿಯ ಜನರಿದ್ದಾರೆ.ಪಾಣೆಗಾಂವದಿಂದ ಗ್ರಾಮ ಪಂಚಾಯಿತಿಗೆ ಐದು ಸದಸ್ಯರನ್ನು ಆಯ್ಕೆ ಮಾಡಿದ್ದರೂ, ಗ್ರಾಮ ನೈರ್ಮಲ್ಯ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಸಮರ್ಪಕ ರಸ್ತೆ ನಿರ್ಮಾಣ ಮಾಡಿಕೊಡಲು ಸಾಧ್ಯವಾಗಿಲ್ಲ.ರೋಗ ರುಜಿನಗಳಿಗೆ ಆಹ್ವಾನ: ಗ್ರಾಮದ ಜನರು ರಾತ್ರಿ ಹೊತ್ತು ಚರಂಡಿಯ ದುರ್ಗಂಧವನ್ನೆ ಸೇವಿಸುವುದರ ಫಲವಾಗಿ ಇರಬಹುದು; ಇಷ್ಟು ಸಣ್ಣ ಗ್ರಾಮದಲ್ಲಿ 30ರ ವಯೋಮಿತಿ ಒಳಗಿನ 12 ಅಂಗವಿಕಲರಿದ್ದಾರೆ. ಗ್ರಾಮಸ್ಥರ ಮುಖಗಳು ಕಪ್ಪಿಟ್ಟ ರೀತಿಯನ್ನು ನೋಡಿದರೆ, ಬಿಸಿಲಿಗಿಂತ ಶುದ್ಧಗಾಳಿಯ ಅಲಭ್ಯತೆ ಎದ್ದುಕಾಣುತ್ತದೆ.ಗ್ರಾಮ ಪಂಚಾಯಿತಿ ನೀಡಿರುವ ಮಾಹಿತಿ ಪ್ರಕಾರ ಗ್ರಾಮದಲ್ಲಿ 55 ಬೀದಿ ದೀಪಗಳು, 15 ಸಾರ್ವಜನಿಕ ನಲ್ಲಿಗಳಿವೆ. ವಾಸ್ತವದಲ್ಲಿ ಎಲ್ಲ ನಲ್ಲಿಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಟ್ಯಾಂಕ್ ನಿರ್ಮಿಸಿಕೊಂಡಿದ್ದರೂ ಅವುಗಳಿಗೆ ನೀರು ಪೂರೈಸಲು ಯೋಗ್ಯ ಸೌಲಭ್ಯಗಳಿಲ್ಲ.ನೈರ್ಮಲ್ಯ ಎನ್ನುವುದು ದೂರದ ಮಾತಾಯಿತು, ಕನಿಷ್ಠ ಒಂದು ಸಾರ್ವಜನಿಕ ಶೌಚಾಲಯ, ಮಹಿಳಾ ಶೌಚಾಲಯ ನಿರ್ಮಿಸಿಕೊಡುವ ಕೆಲಸವೂ ಆಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.