ನೆಲವೇ ಹಾಸಿಗೆ.. ಬಯಲೇ ಪಾಠಶಾಲೆ..

7

ನೆಲವೇ ಹಾಸಿಗೆ.. ಬಯಲೇ ಪಾಠಶಾಲೆ..

Published:
Updated:

ಹುಣಸಗಿ: ಹೆಸರಿಗೆ ಮಾತ್ರ ಅದೊಂದು ವಸತಿ ಶಾಲೆ. ಮಕ್ಕಳು ಅಲ್ಲಿ ಕುಳಿತು ಪಾಠ ಕೇಳಲು ಆಗದಂತಹ ಸ್ಥಿತಿ. ಮಲಗುವ ಕೋಣೆಯಲ್ಲಿ ನೆಲವೇ ಈ ಮಕ್ಕಳಿಗೆ ಮಂಚ. ಹಾಸಿಗೆ, ಹೊದಿಕೆಗಳೂ ಅಷ್ಟಕ್ಕಷ್ಟೇ. ಪುಸ್ತಕ, ಬಟ್ಟೆಗಳನ್ನು ಹಾಕಿ ಇಟ್ಟುಕೊಳ್ಳುವ ಟ್ರಂಕ್‌ಗಳನ್ನು ಇಡಲೂ ಜಾಗವಿಲ್ಲ.ಪಟ್ಟಣದಲ್ಲಿ ಸುಮಾರು ಐದು ವರ್ಷಗಳ ಹಿಂದೆ ಪ್ರಾರಂಭವಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಸಮಸ್ಯೆಗಳ ಚಿತ್ರಣವಿದು. ಐದು ವರ್ಷಗಳಾದರೂ ಈ ಸಮಸ್ಯೆಗಳು ಇನ್ನೂ ಹಾಗೇ ಉಳಿದಿವೆ. ನಮ್ಮ ನೋವು, ಕಷ್ಟಗಳಿಗೆ ಸ್ಪಂದಿಸುವ ಮನಸ್ಸನ್ನು ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮಾಡುತ್ತಿಲ್ಲ ಎಂಬ ಕೊರಗು ಮಾತ್ರ ವಿದ್ಯಾರ್ಥಿಗಳಿಗೆ ತಪ್ಪುತ್ತಿಲ್ಲ.ಸುಮಾರು 250 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದು, ಶಾಲೆ ಪ್ರಾರಂಭದಂದಿನಿಂದ ಇಲ್ಲಿಯವರೆಗೂ ಸರಿಯಾಗಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ. ನೆಲಹಾಸಾದರೂ ಸರಿ ಇದೆ ಎಂದು ಕೊಂಡರೆ, ಅದೂ ಸರಿಯಾಗಿಲ್ಲ. ನೆಲದ ಮೇಲೆಯೇ ಕುಳಿತು ಪಾಠ ಪ್ರವಚನ ಕೇಳುವ ಪರಿಸ್ಥಿತಿ ಇದೆ. ಅದರಲ್ಲೂ 6ನೇ ತರಗತಿ ವಿದ್ಯಾರ್ಥಿಗಳಿಗಂತೂ ನಿತ್ಯ ಬಿಸಿಲಲ್ಲಿ ಪಾಠ ಕೇಳುವುದು ಅನಿವಾರ್ಯವಾಗಿದೆ.ಸದ್ಯ ಹುಣಸಗಿ-ಸುರಪುರ ರಸ್ತೆಯಲ್ಲಿರುವ ಕಟ್ಟಡದಲ್ಲಿ ಈ ಶಾಲೆ ನಡೆದಿದೆ. ಇರುವ ಕೋಣೆಯಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ಬರಲಾಗುತ್ತಿದೆ. ಮಳೆ ಬಂದಂತೆಂದರೆ ಕಟ್ಟಡ ಸಂಪೂರ್ಣ ಸೋರುತ್ತಿದ್ದು, ವಿದ್ಯಾರ್ಥಿಗಳು ನಿದ್ದೆಗೆಟ್ಟು ಕೂಡುವಂತಾಗಿದೆ. ಇದರಿಂದಾಗಿಯೇ ಪ್ರತಿವರ್ಷ ಸುಮಾರು 15ರಿಂದ 20 ವಿದ್ಯಾರ್ಥಿಗಳು ಶಾಲೆ ಗುಡ್ ಬೈ ಹೇಳಿ ಮರಳಿ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ ಎಂದು ಇಲ್ಲಿಯ ಮಕ್ಕಳು ಹೇಳುತ್ತಾರೆ.ಇನ್ನು ವಿದ್ಯಾರ್ಥಿನಿಯರ ಪರಿಸ್ಥಿತಿಯಂತೂ ಹೇಳತೀರದು. ಅವರಿಗೆ ಶೌಚಾಲಯವಾಗಲಿ, ಸ್ನಾನಗೃಹವಾಗಲಿ ಇಲ್ಲವೇ ಇಲ್ಲ. ವಿದ್ಯಾರ್ಥಿನಿಯರು ವಾರಕ್ಕೊಮ್ಮೆ ಹಳ್ಳಕ್ಕೆ ತೆರಳಿ ಸ್ನಾನ ಮಾಡುತ್ತೇವೆ ಎಂದು 9 ನೇ ತರಗತಿಯ ಮಂಜುಳಾ ಮತ್ತು ಸೌಭಾಗ್ಯ ನೊಂದು ಹೇಳುತ್ತಾರೆ.ಶಾಲೆ ಪ್ರಾರಂಭವಾಗಿ ಸುಮಾರು ನಾಲ್ಕು ತಿಂಗಳು ಗತಿಸಿದರೂ 10ನೇ ತರಗತಿ ಸೇರಿದಂತೆ ಉಳಿದ ತರಗತಿಗಳಿಗೆ ಬೋಧಿಸಲು ಇಂಗ್ಲಿಷ್ ಶಿಕ್ಷಕರಿಲ್ಲ. ಈ ಎಲ್ಲ ಇಲ್ಲಗಳ ಮಧ್ಯೆ ನಾವು ಅಧ್ಯಯನ ಮಾಡುವ ಅನಿವಾರ್ಯತೆ ಇದೆ ಎಂದು ವಿದ್ಯಾರ್ಥಿ ಶಿವಾನಂದ ಮಂಗಳೂರ ಹೇಳುತ್ತಾರೆ.ಶಿಕ್ಷಕರ ಸಮಸ್ಯೆ: ವಿದ್ಯಾರ್ಥಿಗಳ ಸಮಸ್ಯೆ ಒಂದೆಡೆಯಾದರೆ ಶಿಕ್ಷಕರ ಸಮಸ್ಯೆ ಇನ್ನೊಂದಿದೆ. ಕಳೆದ ನಾಲ್ಕು ತಿಂಗಳಿನಿಂದ ಈ ಶಾಲೆಯ ಸಿಬ್ಬಂದಿಗಳಿಗೆ ವೇತನ ಸಿಕ್ಕಿಲ್ಲ.ಆದ್ದರಿಂದ ಇತ್ತೀಚೆಗೆ ನಡೆಯಬೇಕಿದ್ದ ಪರೀಕ್ಷೆಯನ್ನೇ ಬಹಿಷ್ಕರಿಸಿ ಶಿಕ್ಷಕರು ಪ್ರತಿಭಟನೆಗೆ ಮಾಡಿದ್ದಾರೆ ಎಂಬುದು ಶಾಲೆಗೆ ಭೇಟಿ ನೀಡಿದಾಗ ತಿಳಿದು ಬಂತು.ಕಳೆದ ಎರಡು ತಿಂಗಳಿನಿಂದ ವಾರ್ಡನ್ ಈ ಶಾಲೆಯ ಕಡೆಗೆ ಸುಳಿದೇ ಇಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಕೆಂಭಾವಿ ಮತ್ತು ಕೊಡೇಕಲ್ಲ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ಹುಣಸಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮೂಲ ಸೌಕರ್ಯ ಕಲ್ಪಿಸಲು ಸಚಿವ ರಾಜುಗೌಡರು ವೈಯಕ್ತಿಕವಾಗಿ ರೂ. 25ಸಾವಿರ ನೀಡಿದ್ದರು.ಅದರಿಂದ ಕೆಲವು ವ್ಯವಸ್ಥೆ ಮಾಡಲಾಗಿತ್ತು. ಆದರೆ ಇನ್ನೂ ಹಲವಾರು ಸಮಸ್ಯೆಗಳು ಹಾಗೆಯೇ ಉಳಿದಿವೆ.

ಜಿಲ್ಲಾ ಉಸ್ತವಾರಿ ಸಚಿವರು ಸಂಬಂಧಿಸಿದ ಇಲಾಖೆ ಮತ್ತು ಗ್ರಾಮದ ಜನಪ್ರತಿನಿಧಿಗಳು ಮುಂದೆ ಬಂದು ಸಮಸ್ಯೆಗೆ ಪರಿಹರಿಸಲು ಒದಗಿಸಲು ಪ್ರಯತ್ನಿಸಬೇಕು ಎಂಬುದು ವಿದ್ಯಾರ್ಥಿಗಳ ಮನವಿ.  

                                                                         

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry