ಗುರುವಾರ , ಮೇ 19, 2022
20 °C

ಜೇವರ್ಗಿ: 18ರಿಂದ ಮಹಾಲಕ್ಷ್ಮಿ ಜಾತ್ರಾ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ಪಟ್ಟಣದ ಆರಾಧ್ಯ ದೇವತೆ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ಅ.18ರಿಂದ ಪ್ರಾರಂಭವಾಗಲಿದೆ. ಆರು ದಿನಗಳವರೆಗೆ ನಡೆಯುವ ಜಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಅ.18ರಂದು ರಾತ್ರಿ 10ಗಂಟೆಗೆ ಬಡಿಗೇರ ಮನೆಯಲ್ಲಿ ಶ್ರೀದೇವಿಯನ್ನು ಸ್ಥಾಪಿಸಲಾಗುವುದು.

ಅ.19ರಂದು ಬಡಿಗೇರ ಮನೆಯಲ್ಲಿ ಭಜನೆ ಕಾರ್ಯಕ್ರಮ ಜರುಗಲಿದೆ. ಅ.20 ರಂದು ಚಿಕ್ಕ ಜೇವರ್ಗಿಯಿಂದ ಮಂಟಪ ಬರುವುದು. ರಾತ್ರಿ 9ರಿಂದ ಬೆಳಗಿನ ಜಾವ 4 ರವರೆಗೆ ಬಡಿಗೇರ ಮನೆಯಿಂದ ನಡುಗಟ್ಟೆಗೆ ಶ್ರೀದೇವಿಯ ಆಗಮನವಾಗುತ್ತದೆ.ಅ.21ರಂದು ಗ್ರಾಮದ ಜನರಿಂದ ಶ್ರೀದೇವಿಗೆ ನೈವೇದ್ಯ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅ.22ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಶ್ರೀದೇವಿಯ ರಥೋತ್ಸವ ಜರುಗಲಿದೆ. ಸಂಜೆ 5ರಿಂದ 6ರವರೆಗೆ ಜಂಗೀ ಕುಸ್ತಿಗಳು,ರಾತ್ರಿ 8ಗಂಟೆಗೆ ಲಾವಣಿ ಪದಗಳು ಹಾಗೂ ರಾತ್ರಿ 10 ಗಂಟೆಗೆ ಬಯಲಾಟ ಮತ್ತು ನಾಟಕಗಳು ಪ್ರದರ್ಶನಗೊಳ್ಳಲಿವೆ.ಅ.23ರಂದು ಬೆಳಿಗ್ಗೆ 8ರಿಂದ 4ರವರೆಗೆ ಜಂಗೀ ಕುಸ್ತಿಗಳು ಹಾಗೂ ಲಾವಣಿ ಪದಗಳು ನಡೆಯಲಿವೆ.ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಶ್ರೀದೇವಿಗೆ ವಿಶೇಷ ಪೂಜೆ, ಅಲಂಕಾರ ನಡೆಯಲಿವೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿಸಲು ಶ್ರೀ ಮಹಾಲಕ್ಷ್ಮಿ ಟ್ರಸ್ಟ್ ಕಮಿಟಿ ಹಾಗೂ ಪಟ್ಟಣದ ಸಮಸ್ತ ಸದ್ಭಕ್ತಾದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.ಅಭಿವೃದ್ಧಿ ಕಾಮಗಾರಿ: ಸುಮಾರು 1ಕೋಟಿ ಅಂದಾಜು ವೆಚ್ಚದಲ್ಲಿ ಮಹಾಲಕ್ಷ್ಮಿ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ. ರಾಜ್ಯ ಸರ್ಕಾರದ ಧಾರ್ಮಿಕ, ದತ್ತಿ ಇಲಾಖೆಯಿಂದ ಈಗಾಗಲೇ 50ಲಕ್ಷ ಅನುದಾನ ಬಿಡುಗಡೆಯಾಗಿದೆ. ಇನ್ನೂ 20ಲಕ್ಷ ಅನುದಾನ ಮಂಜೂರಾಗಿದೆ. ತಮಿಳುನಾಡಿನ ಶಿಲ್ಪಿಸತೀಶ ಮತ್ತು ಭೈರವ ತಂಡದ ನೇತೃತ್ವದಲ್ಲಿ ನೂತನ ದೇವಸ್ಥಾನದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ದೇವಸ್ಥಾನದ ಶಿಖರ, ಮಹಾಲಕ್ಷ್ಮಿ ದೇವಸ್ಥಾನದ ಶಿಖರ, ಈಶ್ವರ ದೇವಸ್ಥಾನದ ಶಿಖರ, ಸುತ್ತುಗೋಡೆ ನಿರ್ಮಿಸಲಾಗಿದೆ.ಸ್ವಚ್ಛತಾ ಕಾರ್ಯ ವಿಳಂಬ: ಪಟ್ಟಣದ ಪ್ರಸಿದ್ಧ ಮಹಾಲಕ್ಷ್ಮಿ ಜಾತ್ರೆಗೆ ಕೇವಲ 5ದಿನಗಳು ಬಾಕಿ ಉಳಿದಿದ್ದು, ಸ್ಥಳೀಯ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಅಖಂಡೇಶ್ವರ ವೃತ್ತದಿಂದ- ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳುವ ಮುಖ್ಯ ರಸ್ತೆಯನ್ನು ಇದುವರೆಗೂ ಸ್ವಚ್ಛಗೊಳಿಸಿಲ್ಲ. ರಸ್ತೆಯಲ್ಲಿ ಬಿದ್ದಿರುವ ಘನತಾಜ್ಯ ವಿಲೇವಾರಿಯಾಗಿಲ್ಲ.ಪ್ರಮುಖವಾಗಿ ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಹೊಸ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿತ್ತು. ಆದರೆ ಈ ವರ್ಷ ಪಟ್ಟಣದ ಅನೇಕ ಬಡಾವಣೆಗಳು ವಿದ್ಯುತ್ ದೀಪಗಳನ್ನು ಕಂಡಿಲ್ಲ. ಪಟ್ಟಣ ಪಂಚಾಯಿತಿ ನಿರ್ಲಕ್ಷದಿಂದ ನಾಗರಿಕರು ಕತ್ತಲೆಯಲ್ಲಿ ಅಲೆದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.ಚರಂಡಿಗಳ ಸ್ವಚ್ಛತೆ ಕಾರ್ಯ ನಡೆದಿಲ್ಲ. ಪಟ್ಟಣದಲ್ಲಿ ಹೊಲಸು ವಾಸನೆ ತಡೆಯಲು ಹಾಗೂ ಸೊಳ್ಳೆಗಳ ಕಾಟ ಕಡಿಮೆಯಾಗುವ ಉದ್ದೇಶದಿಂದ ಬ್ಲೀಚಿಂಗ್ ಪೌಡರ್ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ದೊರೆತಿಲ್ಲ. ಈ ವಿಷಯವಾಗಿಪಟ್ಟಣದ ನಾಗರಿಕರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ನಾಗರಿಕರು ದೂರಿದ್ದಾರೆ. ಕೂಡಲೇ ಪಟ್ಟಣದ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.