ಶುಕ್ರವಾರ, ಮೇ 27, 2022
21 °C

ಭ್ರಷ್ಟ ವ್ಯವಸ್ಥೆಯಲ್ಲಿ ಅಭಿವೃದ್ಧಿ ಮರೀಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: “ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗದೇ ಅಭಿವೃದ್ಧಿ ಕನಸು ಮರೀಚಿಕೆ. ಸಭ್ಯರು ರಾಜಕೀಯಕ್ಕೆ ಬರಲು ಹಿಂಜರಿಯುವ, ಚುನಾವಣೆಗಳಲ್ಲಿ ಕಪ್ಪುಹಣದ ಪ್ರಭಾವ ದಟ್ಟವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಅಭಿವೃದ್ಧಿಯನ್ನು ನಿರೀಕ್ಷಿಸುವುದು ಅಸಾಧ್ಯ”ಎರಡು ದಶಕಗಳಿಂದ ಲಂಡನ್‌ನಲ್ಲಿ ವೈದ್ಯವೃತ್ತಿ, ಸಮಾಜಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಲಂಡನ್ ಲ್ಯಾಂಬೆತ್ ಕೌನ್ಸಿಲ್ ಮೇಯರ್ ಡಾ.ನೀರಜ್ ಪಾಟೀಲರ ಸ್ಪಷ್ಟ ನುಡಿ. ಮೇಯರ್‌ಗಿರಿ ಅಲಂಕರಿಸಿದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ನೀರಜ್ ‘ಪ್ರಜಾವಾಣಿ’ ಮೇಲೆ ಇಟ್ಟ ಅಭಿಮಾನ ಅವರನ್ನು ಪತ್ರಿಕೆಯ ಗುಲ್ಬರ್ಗ ಕಚೇರಿಗೆ ಕರೆತಂದಿತ್ತು. ಮುಕ್ಕಾಲು ಗಂಟೆಯ ಸಂಭಾಷಣೆಯಲ್ಲಿ ತಮ್ಮ ರಾಜಕೀಯ ಸಾಧನೆ, ಸಮಾಜಸೇವೆಯ ಸಂತೃಪ್ತಿ, ಲಂಡನ್ ಮತ್ತು ಗುಲ್ಬರ್ಗದ ಸ್ಥಳೀಯ ಆಡಳಿತ ವ್ಯವಸ್ಥೆ ಮತ್ತಿತರ ವಿಷಯಗಳ ಬಗ್ಗೆ ಮುಕ್ತವಾಗಿ ಅನುಭವ ಹಂಚಿಕೊಂಡರು.“ಲ್ಯಾಂಬೆತ್ ಲಂಡನ್ ನಗರದ ಹೃದಯ ಭಾಗ. ವಿಶ್ವದಲ್ಲೇ ಅತ್ಯಂತ ವಿಶಿಷ್ಟ ಹಾಗೂ ವೈವಿಧ್ಯಕ್ಕೆ ಹೆಸರಾದ ನಗರ. ಈ ಪ್ರಾಚೀನ ಹಾಗೂ ಐತಿಹಾಸಿಕ ನಗರದ ಪ್ರಥಮಪ್ರಜೆಯಾಗಿ ಸಮಾಜಸೇವೆಯಲ್ಲಿ ಹಲವು ಅನುಭವ ಪಡೆದುಕೊಂಡಿದ್ದೇನೆ. ನಾಗರಿಕರಿಗೆ ಮೂಲಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಲ್ಯಾಂಬೆತ್ ಹಾಗೂ ಕಲ್ಬುರ್ಗಿಯನ್ನು ತುಲನೆ ಮಾಡುವಂತೆಯೇ ಇಲ್ಲ. ಅಲ್ಲೂ ಸಮಸ್ಯೆಗಳಿಲ್ಲ ಎಂದಲ್ಲ. ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ”“ಗುಲ್ಬರ್ಗದಲ್ಲಿ ಸಂಚಾರ ಅವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಕೊರತೆ, ಉತ್ತಮ ರಸ್ತೆ, ಫುಟ್‌ಪಾತ್, ಪಾರ್ಕ್‌ಗಳ ಕೊರತೆ, ಮಿತಿಮೀರಿದ ಮಾಲಿನ್ಯ, ಪರಿಸರ ಪ್ರಜ್ಞೆಯ ಕೊರತೆ, ವಸತಿ ಸಮಸ್ಯೆಯಂಥ ಸಮಸ್ಯೆ ಸ್ಥಳೀಯ ಆಡಳಿತಕ್ಕೆ ಸವಾಲಾಗಿಯೇ ಉಳಿದಿದೆ. ಉತ್ತಮ ಮೂಲಸೌಕರ್ಯ ಕಲ್ಪಿಸುವುದು ಸ್ಥಳೀಯ ಆಡಳಿತದ ಜವಾಬ್ದಾರಿ. ಸದ್ಯದ ವ್ಯವಸ್ಥೆಯಲ್ಲಿ ಭಾರತದಲ್ಲಿ ಇದನ್ನು ನಿರೀಕ್ಷಿಸುವುದು ಕಷ್ಟಸಾಧ್ಯ. ರಾಜಕೀಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮತ್ತು ಯೋಜನೆ ರೂಪಿಸುವಲ್ಲಿ ಸಾರ್ವನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರ ನಿರೀಕ್ಷಿತ ಅಭಿವೃದ್ಧಿ ಸಾಧ್ಯ” ಎಂದು ಅಭಿಪ್ರಾಯಪಟ್ಟರು.“ಸ್ಥಳೀಯಸಂಸ್ಥೆ ಜನರಿಗಾಗಿ ಅಭಿವೃದ್ಧಿ ಕಾರ್ಯ ಮಾಡುವುದಕ್ಕೂ ಜನರನ್ನು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಲಂಡನ್ ಸೇರಿದಂತೆ ವಿಶ್ವದ ಎಲ್ಲ ಮುಂದುವರಿದ ರಾಷ್ಟ್ರಗಳಲ್ಲೂ ಆಡಳಿತದಲ್ಲಿ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಇದೆ. ಆದರೆ ನಮ್ಮ ವ್ಯವಸ್ಥೆ ಇದಕ್ಕೆ ತದ್ವಿರುದ್ಧ. ಉದಾಹರಣೆಗೆ ಲಂಡನ್‌ನಲ್ಲಿ ಒಂದು ವಸತಿ ಬಡಾವಣೆಯಲ್ಲಿ ವಾಣಿಜ್ಯ ಸಂಕೀರ್ಣ ತೆರೆಯಬೇಕಿದ್ದರೆ, ಮಹಾನಗರಪಾಲಿಕೆಗಿಂತ ಮುನ್ನ ಸ್ಥಳೀಯರ ಒಪ್ಪಿಗೆ ಪಡೆಯಬೇಕು. ಸ್ಥಳೀಯಾಡಳಿತ ಲೈಸನ್ಸ್ ನೀಡಲು ಸ್ಥಳೀಯರ ಒಪ್ಪಿಗೆಯೇ ಪ್ರಮುಖ ಅಂಶ. ಅಲ್ಲಿ ನಾಗರಿಕರನ್ನು ಗ್ರಾಹಕ ಎಂದು ಪರಿಗಣಿಸುವ ಬದಲು ಅಭಿವೃದ್ಧಿಯ ಪಾಲುದಾರ ಎಂದು ಪರಿಗಣಿಸಲಾಗುತ್ತದೆ” ಎಂದು ವಿವರಿಸಿದರು.ನಾಗರಿಕರಲ್ಲಿ ಪೌರಪ್ರಜ್ಞೆ ಜಾಗೃತಿ ಮೂಡಿಸುವುದು ಮತ್ತು ನಾಗರಿಕರನ್ನು ಸಶಕ್ತಗೊಳಿಸುವುದು ಅಭಿವೃದ್ಧಿಗೆ ಅನಿವಾರ್ಯ. ಜನರಿಗಾಗಿ ಸರ್ಕಾರಿ ಯೋಜನೆ ರೂಪಿಸುವ ಬದಲು ಜನರ ಜತೆ ಸೇರಿ ಅಭಿವೃದ್ಧಿ ಯೋಜನೆಗಳನ್ನು ನಿರ್ಧರಿಸುವ ಪರಿಪಾಠ ಬೆಳೆಯಬೇಕು. ಇಲ್ಲಿನಂತೆ ಲಂಡನ್‌ನಲ್ಲೂ ಸ್ಥಳೀಯ ಸಂಸ್ಥೆಗಳು ಸ್ವಾಯತ್ತವಲ್ಲ. ಒಟ್ಟು ಅಂದಾಜುವೆಚ್ಚದ ಶೇಕಡ 20ರಷ್ಟನ್ನು ಮಾತ್ರ ಸ್ಥಳೀಯ ಸಂಸ್ಥೆಗಳು ತೆರಿಗೆ ರೂಪದಲ್ಲಿ ಸಂಗ್ರಹಿಸುತ್ತವೆ. ಉಳಿದ 80 ಭಾಗವನ್ನು ಪಾರ್ಲಿಮೆಂಟ್ ಅನುದಾನವಾಗಿ ನೀಡುತ್ತದೆ ಎಂದು ಹೇಳಿದರು.

ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ವಸತಿ ಸಮಸ್ಯೆಗೂ ಸುಲಭ ಪರಿಹಾರವಿದೆ. ಉದಾಹರಣೆಗೆ ಲಂಡನ್‌ನಲ್ಲಿ ಹೊಸ ವಸತಿ ಸಮುಚ್ಛಯ ನಿರ್ಮಿಸುವ ನಿರ್ಮಾಣ ಸಂಸ್ಥೆಗಳು ಶೇಕಡ 10ನ್ನು ಸ್ಥಳೀಯ ಆಡಳಿತಕ್ಕೆ ಬಿಟ್ಟುಕೊಡಬೇಕು. ಈ ಪಾಲನ್ನು ಸ್ಥಳೀಯ ಆಡಳಿತ ಬಡವರಿಗೆ ರಿಯಾಯಿತಿದರಲ್ಲಿ ಬಾಡಿಗೆಗೆ ನೀಡುತ್ತದೆ. ಇದರಿಂದ ವಸತಿ ಸಮಸ್ಯೆ ಬಹುತೇಕ ಬಗೆಹರಿದಿದೆ ಎನ್ನುತ್ತಾರೆ.ಸ್ಥಳೀಯ ಆಡಳಿತದಲ್ಲಿ ಜನಪರ ಸುಧಾರಣೆಯಾಗಬೇಕಾದರೆ ವ್ಯವಸ್ಥೆ ಬದಲಾಗಬೇಕು. ಉದಾಹರಣೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಿರ್ಧಿಷ್ಟ ಪಕ್ಷದಿಂದ ಸ್ಪರ್ಧಿಸಲು ಒಬ್ಬ ವ್ಯಕ್ತಿ ಬಯಸುವುದಾದರೆ ಆತ ಕನಿಷ್ಠ ಒಂದು ವರ್ಷ ಆ ಪಕ್ಷದ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವುದು ಕಡ್ಡಾಯವಾಗಬೇಕು. ಜತೆಗೆ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಲು ಬಯಸುವ ಎಲ್ಲ ಅಭ್ಯರ್ಥಿಗಳನ್ನು ಪಕ್ಷದ ಮುಖಂಡ ಕರೆಸಿ, ಸ್ಥಳೀಯ ಸಮಸ್ಯೆಗಳ ಅರಿವು, ಅದಕ್ಕೆ ಇರುವ ಪರಿಹಾರೋಪಾಯಗಳು, ಸೇವಾ ಕಾರ್ಯಗಳಿಗೆ ಅಭ್ಯರ್ಥಿಗೆ ಇರುವ ಬದ್ಧತೆ ಮತ್ತಿತರ ಅಂಶಗಳ ಬಗ್ಗೆ ಸಂದರ್ಶನ ನಡೆಸಿ, ಸೂಕ್ತ ಎನಿಸಿದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಪರಿಪಾಠ ಬೆಳೆಯಬೇಕು. ಎಲ್ಲ ಪಕ್ಷದವರೂ  ನಿಜವಾಗಿ ಕಾಳಜಿ ಇರುವವರು ರಾಜಕೀಯಕ್ಕೆ ಬರುತ್ತಾರೆ. ಆಗ ನೈಜ ಸುಧಾರಣೆ ಸಾಧ್ಯ ಎಂಬ ಸ್ಪಷ್ಟ ಅಭಿಪ್ರಾಯ ಅವರದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.