ರೇಬಿಸ್‌ ತಡೆಯಲು ಮುಂಜಾಗ್ರತೆ ಅಗತ್ಯ

7
ಡಾ.ಶಾಂಪುರ್ ಮಧುಸೂದನ್‌ ಟ್ರಸ್ಟ್‌ ವತಿಯಿಂದ ನಗರದಲ್ಲಿ ರೇಬಿಸ್‌ ನಿರ್ಮೂಲನಾ ಅರಿವು ಜಾಥಾ

ರೇಬಿಸ್‌ ತಡೆಯಲು ಮುಂಜಾಗ್ರತೆ ಅಗತ್ಯ

Published:
Updated:
ನ್ಯೂ ಹಾರಿಜನ್‌ ಶಾಲೆಯ ವಿದ್ಯಾರ್ಥಿಗಳು ನಡೆಸಿದ ರೇಬಿಸ್ ಕುರಿತು ಅರಿವು ಮೂಡಿಸುವ ಜಾಥಾಗೆ ಗಣ್ಯರು ಚಾಲನೆ ನೀಡಿದರು.

ಚಿಕ್ಕಬಳ್ಳಾಪುರ: ‘ಪ್ರಾಣಿಗಳ ಮೂಲಕ ಮನುಷ್ಯರಲ್ಲಿ ಹರಡುವ ರೇಬಿಸ್‌ ಸೋಂಕು ಮರಣಾಂತಿಕವಾದ್ದದ್ದು. ಆದ್ದರಿಂದ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮವಾಗಿ ಸಾಕು ಪ್ರಾಣಿಗಳ ಆರೋಗ್ಯ ಕಾಪಾಡಿಕೊಳ್ಳಲು ಸ್ವಚ್ಛತೆಗೆ ಆದ್ಯತೆ ನೀಡಬೇಕು ಜತೆಗೆ ಪ್ರಾಣಿಗಳಿಗೆ ರೇಬಿಸ್‌ ವೈರಸ್‌ ಹರಡದಂತೆ ಲಸಿಕೆ ಹಾಕಿಸಬೇಕು’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರವಿಶಂಕರ್‌ ತಿಳಿಸಿದರು.

ಡಾ.ಶಾಂಪುರ್ ಮಧುಸೂದನ್‌ ಟ್ರಸ್ಟ್‌ ವತಿಯಿಂದ ನಗರದ ನ್ಯೂ ಹಾರಿಜನ್‌ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ರೇಬಿಸ್‌ ನಿರ್ಮೂಲನಾ ಅರಿವು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 423 ನಾಯಿ ಕಡಿತ ಪ್ರಕರಣ ದಾಖಲಾಗಿವೆ. 2013 ರಿಂದ 2018ರ ಮಾರ್ಚ್‌ವರೆಗೆ 453 ಮಕ್ಕಳಿಗೆ ನಾಯಿ ಕಡಿತ ಪ್ರಕರಣ ಕಂಡು ಬಂದಿವೆ. ಆದರೆ ರೇಬಿಸ್‌ ಕಾಯಿಲೆಯಿಂದ ಮೃತಪಟ್ಟ ವರದಿಯಾಗಿಲ್ಲ. ನಾಯಿ ಕಡಿದ ಮಾತ್ರಕ್ಕೆ ರೇಬಿಸ್‌ ಕಾಯಿಲೆ ಹರಡುವುದಿಲ್ಲ. ಮಕ್ಕಳು ನಾಯಿಗಳನ್ನು ಮುಟ್ಟಿದಾಗ, ಅದರ ಜೊಲ್ಲಿನ ರಸ ಮುಟ್ಟಿದಾಗ ಅದರ ಮೂಲಕ ಲಿಸ್ಸಾ ವೈರಾಣು ನಮ್ಮಲ್ಲಿ ಸೇರುತ್ತವೆ. ಈ ವೈರಾಣುವಿನಿಂದ ಮೆದುಳಿನ ಕಾಯಿಲೆ ಶುರುವಾಗುತ್ತದೆ’ ಎಂದು ಹೇಳಿದರು.

‘ಪ್ರಾಣಿಗಳಿಗೆ ಔಷಧಿ ತಿನಿಸುವಾಗ ಕೈಗೆ ಜೊಲ್ಲು ಮೆತ್ತಬಹುದು. ಆ ಜೊಲ್ಲಿನಲ್ಲಿ ರೋಗಾಣುಗಳು ಇದ್ದರೆ, ಕೈಯಲ್ಲಿ ಗಾಯಗಳೆನಾದರೂ ಇದ್ದರೆ ಅಪಾಯದ ಸಂಭವ ಜಾಸ್ತಿ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು. ಹುಚ್ಚು ಹಿಡಿದ ನಾಯಿಗಳಿಂದ ರೇಬಿಸ್‌ ರೋಗ ಬಲು ಬೇಗ ಹರಡುತ್ತದೆ. ನಾಯಿಯನ್ನು ಮುಟ್ಟಿದ ನಂತರ ಸೋಪು ಹಾಕಿ ಕೈಯನ್ನು ಚೆನ್ನಾಗಿ ತೊಳೆಯಬೇಕು. ನಾಯಿ ಕಚ್ಚಿದರೆ ಅಥವಾ ಪರಚಿದರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಡಾ.ಶಾಂಪುರ್ ಮಧುಸೂದನ್‌ ಸಂಸ್ಥೆಯ ಟ್ರಸ್ಟಿ ಡಾ.ಗಿರಿಜಾ ಮಧುಸೂದನ್‌ ಮಾತನಾಡಿ, ‘ಸಂಸ್ಥೆ ರೇಬಿಸ್‌ ಕಾಯಿಲೆ ಕುರಿತು ಈ ವರೆಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಶಾಲಾ–ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದೆ. ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲಿ ಈ ಕಾಯಿಲೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಸಂಸ್ಥೆ ಹಾಕಿಕೊಂಡಿದೆ’ ಎಂದು ಹೇಳಿದರು.

ನ್ಯೂ ಹಾರಿಜನ್‌ ಶಾಲೆಯ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ರೇಬಿಸ್ ಕುರಿತು ಅರಿವು ಮೂಡಿಸುವ ಜಾಥಾ ನಡೆಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಣ್ಣರೆಡ್ಡಿ, ನ್ಯೂ ಹಾರಿಜನ್‌ ಶಾಲೆಯ ಪ್ರಾಂಶುಪಾಲ ಶಿವಣ್ಣ, ಡಾ.ಶಾಂಪುರ್ ಮಧುಸೂದನ್‌ ಸಂಸ್ಥೆಯ ಸಂಚಾಲಕ ಡಿ.ಸಿ.ಪ್ರಕಾಶ್‌, ಟ್ರಸ್ಟಿಗಳಾದ ಡಾ.ಲಲಿತಾ ವಿಶ್ವನಾಥ್‌, ಸನಾತನಮೂರ್ತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !