ಡಿಜಿಟಲ್‌ ನರ್ವ್‌ ಕೇಂದ್ರಕ್ಕೆ ಸಚಿವರ ಭೇಟಿ

7

ಡಿಜಿಟಲ್‌ ನರ್ವ್‌ ಕೇಂದ್ರಕ್ಕೆ ಸಚಿವರ ಭೇಟಿ

Published:
Updated:
ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಕೋಲಾರದ ಡಿಜಿಟಲ್ ನರ್ವ್ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋಲಾರ: ಆರೋಗ್ಯ ಇಲಾಖೆ ಹಾಗೂ ಟಾಟಾ ಟ್ರಸ್ಟ್‌ ಸಹಯೋಗದೊಂದಿಗೆ ನಗರದಲ್ಲಿ ಆರಂಭಿಸಿರುವ ಡಿಜಿಟಲ್ ನರ್ವ್ ಕೇಂದ್ರಕ್ಕೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಡಿಜಿಟಲ್ ನರ್ವ್ ಕೇಂದ್ರದ ಮಾದರಿಯಲ್ಲೇ ಕೇಂದ್ರ ಸರ್ಕಾರವು ದೇಶದೆಲ್ಲೆಡೆ ಹೆಲ್ತ್ ವೆಲ್‌ನೆಸ್‌ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರು ಡಿಜಿಟಲ್‌ ನರ್ವ್‌ ಕೇಂದ್ರದ ಕಾರ್ಯ ವಿಧಾನದ ಬಗ್ಗೆ ಮಾಹಿತಿ ಸಂಗ್ರಹಿಸಲು ಆಗಮಿಸಿದ್ದರು.

‘ಸಾರ್ವಜನಿಕರು ಡಿಜಿಟಲ್ ನರ್ವ್ ಕೇಂದ್ರದಿಂದ ಅವಶ್ಯಕ ಮಾಹಿತಿ ಪಡೆದು ಚಿಕಿತ್ಸೆ ತೆಗೆದುಕೊಳ್ಳಬಹುದು. ಈ ಕೇಂದ್ರವು ದೇಶಕ್ಕೆ ಮಾದರಿಯಾಗಿದೆ. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯು ಮನೆಗಳಿಗೆ ಭೇಟಿ ನೀಡಿ ಅನಾರೋಗ್ಯಪೀಡಿತರ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆಯ ವಿವರ ಸಂಗ್ರಹಿಸಿಕೊಂಡು ಬಂದು ಕೇಂದ್ರದ ತಂತ್ರಾಂಶದೊಂದಿಗೆ ಜೋಡಣೆ ಮಾಡುತ್ತಾರೆ’ ಎಂದು ಕೇಂದ್ರದ ಸಿಬ್ಬಂದಿ ಸಚಿವರಿಗೆ ಮಾಹಿತಿ ನೀಡಿದರು.

‘ರೋಗಿಗಳ ಸಂಪೂರ್ಣ ಮಾಹಿತಿ ಕೇಂದ್ರದಲ್ಲಿ ಲಭ್ಯವಿರುತ್ತದೆ. ರೋಗಿಗಳಿಗೆ ಅವಶ್ಯಕ ತಜ್ಞರು ಹಾಗೂ ತಜ್ಞರನ್ನು ಸಂಪರ್ಕಿಸುವ ದಿನ ನಿಗದಿಪಡಿಸಿಕೊಳ್ಳಲು ಮಾಹಿತಿ ಸಹಕಾರಿಯಾಗಲಿದೆ. ಜತೆಗೆ ರೋಗಿಗಳ ಮೊಬೈಲ್‌ ಸಂಖ್ಯೆಗೆ ತಜ್ಞರ ಲಭ್ಯತೆ ಬಗ್ಗೆ ಮಾಹಿತಿ ರವಾನೆಯಾಗುತ್ತದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಒದಗಿಸುವುದು ಈ ಕೇಂದ್ರದ ಪ್ರಮುಖ ಉದ್ದೇಶ’ ಎಂದು ಸಿಬ್ಬಂದಿ ವಿವರಿಸಿದರು.

4.50 ಲಕ್ಷ ನೋಂದಣಿ: ‘ಫೆಬ್ರುವರಿ ತಿಂಗಳಲ್ಲಿ ಕಾರ್ಯಾರಂಭ ಮಾಡಿದ ಡಿಜಿಟಲ್‌ ನರ್ವ್‌ ಕೇಂದ್ರದಲ್ಲಿ ಈವರೆಗೆ ಸುಮಾರು 4.50 ಲಕ್ಷ ರೋಗಿಗಳ ನೋಂದಣಿ ಮಾಡಲಾಗಿದೆ. ವೈದ್ಯರು, ತಜ್ಞರು, ಲ್ಯಾಬೊರೇಟರಿ ಪರೀಕ್ಷೆಗಳ ಲಭ್ಯತೆ, ವೈದ್ಯರು ಮತ್ತು ತಜ್ಞರ ಭೇಟಿಗೆ ಸಮಯ ಕಾಯ್ದಿರಿಸುವಿಕೆ, ಪಾಲನಾ ಸಂಯೋಜಕರ ಸಹಾಯ ಸೇರಿದಂತೆ ರೋಗಿಗಳಿಗೆ ವಿವಿಧ ಸೇವೆಗಳು ಕೇಂದ್ರದಿಂದ ಲಭ್ಯವಾಗಲಿವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್ ತಿಳಿಸಿದರು.

ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಹಾಗೂ ಮಿಂಡಹಳ್ಳಿ ಆರೋಗ್ಯ ಉಪ ಕೇಂದ್ರದಲ್ಲಿನ ನರ್ವ್‌ ಕೇಂದ್ರದ ಟ್ರಾನ್ಸ್‌ಫಾರ್ಮೇಷನ್‌ ಕೇಂದ್ರಕ್ಕೂ ಸಚಿವರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಶಾಸಕೆ ಕೆ.ಶ್ರೀನಿವಾಸಗೌಡ, ಜಿಲ್ಲಾಧಿಕಾರಿ (ಪ್ರಭಾರ) ಶುಭಾ ಕಲ್ಯಾಣ್‌, ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಅಗರ್ವಾಲ್‌, ರಾಷ್ಟ್ರೀಯ ಆರೋಗ್ಯ ಅಭಿಯಾನ ವ್ಯವಸ್ಥಾಪಕ ನಿರ್ದೇಶಕ ರತನ್ ಖೇಲ್ಕರ್, ನಿಮ್ಹಾನ್ಸ್‌ ನಿರ್ದೇಶಕ ಗಂಗಾಧರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !