‘ಶುಲ್ಕ ಪಾವತಿಸದೆ ನಿರ್ವಹಣೆ ಅಸಾಧ್ಯ'

7
ಮುನ್ನೂರು : ಗ್ರಾಮಸಭೆಯಲ್ಲಿ ತ್ಯಾಜ್ಯ ಸಮಸ್ಯೆ

‘ಶುಲ್ಕ ಪಾವತಿಸದೆ ನಿರ್ವಹಣೆ ಅಸಾಧ್ಯ'

Published:
Updated:
ಚಿತ್ರ: 4ಉಳ್ಳಾಲ4:  ಮುನ್ನೂರು ಗ್ರಾಮಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಕುಡ್ತಡ್ಕ ಮಾತನಾಡಿದರು. 

ಉಳ್ಳಾಲ : ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಘಟಕ ನಿರ್ಮಾಣವಾಗಿದ್ದರೂ ಜನರು ಸರಿಯಾದ ಶುಲ್ಕವನ್ನು ಪಾವತಿಸದೆ ನಿರ್ವಹಣೆ ಅಸಾಧ್ಯವಾಗಿದೆ. ಇದೇ ರೀತಿಯಲ್ಲಿ ಮುಂದುವರಿದರೆ ಗ್ರಾಮವನ್ನು ತ್ಯಾಜ್ಯ ಮುಕ್ತಗೊಳಿಸಲು ಅಸಾಧ್ಯ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಕುಡ್ತಡ್ಕ ತಿಳಿಸಿದರು.

ಸುಭಾಷ್‍ನಗರದ ಸಮುದಾಯ ಭವನದಲ್ಲಿ ಮಂಗಳವಾರ ನಡೆದ 2018-19ನೇ ಸಾಲಿನ ಮುನ್ನೂರು ಗ್ರಾಮ ಪಂಚಾಯಿತಿ ಪ್ರಥಮ ಹಂತದ ಗ್ರಾಮಸಭೆಯಲ್ಲಿ ತ್ಯಾಜ್ಯ ಸಮಸ್ಯೆಗೆ ಸಂಬಂಧಿಸಿದ ಪ್ರಶ್ನೆಗೆ ಮಾತನಾಡಿ ಮುನ್ನೂರು ಗ್ರಾಮ ಪಂಚಾಯಿತಿಯಲ್ಲಿ ನಿರ್ಮಿಸಲಾಗಿರುವ ತ್ಯಾಜ್ಯ ಘಟಕಕ್ಕೆ ಪ್ರಾರಂಭಿಕ ಹಂತದಲ್ಲೇ ಜನರು ಪ್ರೋತ್ಸಾಹ ನೀಡುತ್ತಿಲ್ಲ ದಿನಕ್ಕೆ ₹1ರಂತೆ ಮಾಸಿಕ ₹30 ಶುಲ್ಕ ವಿಧಿಸಿದರೂ ಆ ಹಣವನ್ನು ಸರಿಯಾಗಿ ಜನರು ಭರಿಸುತ್ತಿಲ್ಲ. ಈ ಹಿಂದೆ ಕಸ ವಿಲೇವಾರಿ ಗುತ್ತಿಗೆ ವಹಿಸಿಕೊಂಡವರು ಹಿಂದೆ ಸರಿದಿದ್ದು, ಗ್ರಾಮದ ಯುವಕರೊಬ್ಬರು ಸಾಮಾಜಿಕ ಕಳಕಳಿಯ ನಿಟ್ಟಿನಲ್ಲಿ ಕಸ ವಿಲೇವಾರಿ ಮಾಡಲು ಒಪ್ಪಿಕೊಂಡಿದ್ದು, ಗ್ರಾಮಸ್ಥರು ಕಸ ವಿಲೇವಾರಿಗೆ ಸಂಬಂಧಿಸಿದ ಶುಲ್ಕವನ್ನು ನೀಡಿದರೆ ನಾವು ಕಸ ವಿಲೇವಾರಿಯಲ್ಲಿ ಯಶಸ್ವಿಯಾಗಲು ಸಾಧ್ಯ’ ಎಂದರು.

ಮದನಿ ನಗರದಲ್ಲಿ ಟ್ರಾನ್ಸ್‌ಫಾರ್ಮರ್ ಜಾಗದಲ್ಲಿ ಕಸವನ್ನು ಕಂಬದ ಬುಡದಲ್ಲೇ ಶೇಖರಿಸುವುದರಿಂದ ಲೈನ್‍ಮನ್‍ಗಳಿಗೆ ತೊಂದರೆಯಾಗುತ್ತಿದ್ದು ಕ್ರಮ ಕೈಗೊಳ್ಳಿ ಎಂದು ಮೆಸ್ಕಾಂ ಅಧಿಕಾರಿ ನಿತೇಶ್ ಹೊಸಗದ್ದೆ ಸಭೆಯಲ್ಲಿ ತಿಳಿಸಿದಾಗ, ಗ್ರಾಮಸ್ಥ ಬಾಬು ಶೆಟ್ಟಿ ದೇಸೋಡಿ ಮಾತನಾಡಿ ಕಸ ಹೆಚ್ಚು ಬೀಳುವ ಸ್ಥಳದಲ್ಲಿ ಬ್ಯಾನರ್ ಮತ್ತು ಕಸದ ತೊಟ್ಟಿಯನ್ನು ಅಳವಡಿಸಬೇಕು. ಅದಕ್ಕೆ ಪಂಚಾಯತ್ ನಿರ್ಣಯ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು. ಬಾಬು ಶೆಟ್ಟಿ ಅವರ ಮಾತಿಗೆ ಉತ್ತರಿಸಿದ ಪ್ರತಿಭಾ ಕುಡ್ತಡ್ಕ ಸ್ವಚ್ಛ ಭಾರತ್ ಪರಿಕಲ್ಪನೆಯಲ್ಲಿ ಕಸದತೊಟ್ಟಿ ಅಳವಡಿಸಲು ಅವಕಾಶವಿಲ್ಲ, ಮನೆ ಮನೆಗೆ ಕಸ ವಿಲೇವಾರಿಗೆ ಬಂದಾಗ ಅವರಲ್ಲಿ ನೀಡಿ. ವಾರಕ್ಕೆ ಮೂರು ಬಾರಿ ಬರುತ್ತಿದ್ದು, ಶುಲ್ಕ ಹೆಚ್ಚು ಮಾಡಿದರೆ ಪ್ರತೀ ದಿನ ಕಸವಿಲೇವಾರಿ ಸಾಧ್ಯ ಎಂದರು.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಿಗ ಪೂರ್ಣಚಂದ್ರ ಮಾಹಿತಿ ನೀಡಿ, ‘ ಮಳೆ ಸಂದರ್ಭದಲ್ಲಿ ಮಳೆ, ಬೆಳೆ ಹಾನಿಯಾದರೆ ಪಂಚಾಯಿತಿಗೆ ಮಾಹಿತಿ ನೀಡಿದರೆ ಪರಿಹಾರವನ್ನು ತಿಂಗಳೊಳಗೆ ನೀಡಲಾಗುವುದು. ಉಳಿದಂತೆ ಬಿಪಿಎಲ್ ಕುಟುಂಬದ ಯಜಮಾನ ನಿಧನರಾದರೆ ಅವರಿಗೆ ಅಂತ್ಯ ಸಂಸ್ಕಾರ ಸಹಾಯಧನ ದೊರೆಯುತ್ತದೆ. ಉಳಿದಂತೆ ವಿವಿಧ ಯೋಜನೆಗಳಲ್ಲಿ ಮಾಸಿಕ ಪಿಂಚಣಿಗಳ ಕುರಿತು ಮಾಹಿತಿ ನೀಡಿದರು. ಹಕ್ಕುಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಹಣ ಕಟ್ಟದವರು ತ್ವರಿತವಾಗಿ ಹಣ ಕಟ್ಟಬೇಕು’ ಎಂದರು.

ಸಹಾಯಕ ಕೃಷಿ ಅಧಿಕಾರಿ ಮುರಳೀಧರ್ ಹಮ್ಮನ್ನನವರ್, ಕೊಣಾಜೆ ಪೊಲೀಸ್ ಠಾಣಾ ಎಎಸ್‍ಐ ಬಾಸ್ಕರ ಕಾಮತ್, ಪಂಚಾಯತ್‌ ರಾಜ್ ಇಲಾಖೆಯ ಸಹಾಯಕ ಎಂಜಿನಿಯರ್ ನಿತಿನ್ ಕುಮಾರ್, ಹಿರಿಯ ಪಶುವೈದ್ಯ ಪರೀಕ್ಷಕ ಅಣ್ಣಪ್ಪಾ ನಾಯ್ಕ, ಶಿಕ್ಷಣಾ ಇಲಾಖೆಯಿಂದ ವತ್ಸಲಾ ಜೋಗಿ, ಸಹಾಯಕ ತೋಟಗಾರಿಕಾ ಅ„ಕಾರಿ ಮಹೇಶ್ ಎನ್., ಆರೋಗ್ಯ ಇಲಾಖೆಯಿಂದ ಜಯಂತಿ. ಅರಣ್ಯ ಇಲಾಖೆಯಿಂದ ಸೌಮ್ಯ, ಅಂಗನವಾಡಿ ಮೇಲ್ವಿಚಾರಕಿ ಶಂಕರಿ ಮಾಹಿತಿ ನೀಡಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಗೀತಾ ಶ್ಯಾನುಭೋಗ್ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹರೀಶ್ ಭಂಡಾರಬೈಲು, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಆಲ್ಪ್ರೆಡ್ ವಿಲ್ಮ ಡಿ.ಸೋಜ, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಬಿ. ಕುಡ್ತಡ್ಕ ಸ್ವಾಗತಿಸಿದರು. ನೆವಿಲ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಭಾರ ಕಾರ್ಯದರ್ಶಿ ಶಾಲಿನಿ ಯು.ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !