ಅಧಿಕಾರಿಗಳಿಂದ ಬಡವರಿಗೆ ಅನ್ಯಾಯ: ಆರೋಪ

7
ಉಪವಿಭಾಗಾಧಿಕಾರಿ, ಪೌರಾಯುಕ್ತರ ವಿರುದ್ಧ ಆಕ್ರೋಶ

ಅಧಿಕಾರಿಗಳಿಂದ ಬಡವರಿಗೆ ಅನ್ಯಾಯ: ಆರೋಪ

Published:
Updated:
ಪುತ್ತೂರು ನಗರಸಭೆಯ ಸದಸ್ಯ ಎಚ್.ಮಹಮ್ಮದ್ ಆಲಿ  ಮಾಹಿತಿ ನೀಡಿದರು.

ಪುತ್ತೂರು : ‘ನಗರಸಭೆಯ ವ್ಯಾಪ್ತಿಯಲ್ಲಿ 4 ಸಾವಿರ ನಿವೇಶನ ರಹಿತರಿದ್ದಾರೆ. 5 ವರ್ಷದ ಅವಧಿಯಲ್ಲಿ ಒಂದೇ ಒಂದುನಿವೇಶನ ಹಂಚಿಲ್ಲ. ಬಡವರಿಗೆ ಅನ್ಯಾಯ ಆಗಿದೆ. ಉಪವಿಭಾಗಾಧಿಕಾರಿ,  ನಗರಸಭೆಯ ಪೌರಾಯುಕ್ತರು ಬಡವರ ಬಗ್ಗೆ ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ನಗರಸಭೆಯ ಆಡಳಿತ ಪಕ್ಷದ ಹಿರಿಯ ಸದಸ್ಯ ಎಚ್.ಮಹಮ್ಮದ್ ಆಲಿ ದೂರಿದರು.

ನಿವೇಶನ ಹಂಚಿಕೆ ಮಾಡಲು ಶಾಸಕರ ಅಧ್ಯಕ್ಷತೆಯಲ್ಲಿನ ಆಶ್ರಯ ಸಮಿತಿಗೆ ಸಾಧ್ಯವಾಗಿಲ್ಲ. ನಗರಸಭೆಯ ಆಡಳಿತದ ವತಿಯಿಂದ ಉಪವಿಭಾಗಾಧಿಕಾರಿಗಳನ್ನು ಮತ್ತು ತಹಶೀಲ್ದಾರ್‌ರನ್ನು ಭೇಟಿಯಾಗಿ ಸರ್ಕಾರಿ ಜಾಗಗಳನ್ನು ನಗರಸಭೆಗೆ ಹಸ್ತಾಂತರಿಸುವಂತೆ ಮತ್ತು ಗಡಿಗುರುತು ಮಾಡುವಂತೆ ಹಲವು ಬಾರಿ ಕೇಳಿಕೊಂಡಿದ್ದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿಯೇ ನಿವೇಶನ ರಹಿತರಿಗೆ ಸಮಸ್ಯೆಯಾಗಿದೆ ಎಂದರು.

ನಿವೇಶನ ರಹಿತರು ಕಳೆದ 20 ವರ್ಷಗಳಿಂದ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಅರ್ಜಿ ಸಲ್ಲಿಸಿದವರು ನಮ್ಮಲ್ಲಿ ಏನಾಗಿದೆ ಎಂದು ಕೇಳುತ್ತಿದ್ದಾರೆ ಮತ್ತು ನಮ್ಮ ವಿರುದ್ದವೇ ಆರೋಪ ಮಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆಡಳಿತ ವ್ಯವಸ್ಥೆಗೆ ಕೆಟ್ಟ ಹೆಸರು ಬರುವಂತಾಗಿದೆ ಎಂದರು.

ಬಲ್ನಾಡು ಗ್ರಾಮದ ಸುಂಕದಮೂಲೆ ಎಂಬಲ್ಲಿರುವ ಇಳಿಜಾರುಗುಡ್ಡ ಪ್ರದೇಶದ ಸುಮಾರು 3 ಎಕ್ರೆಯಷ್ಟು ಸರ್ಕಾರಿ ಜಾಗವನ್ನು ಕಂದಾಯ ಇಲಾಖೆಯಿಂದ ನಗರಸಭೆಗೆ ಹಸ್ತಾಂತರಿಸಿದ್ದರೂ ಗಡಿಗುರುತು ಮಾಡಿಲ್ಲ. ಬಲ್ನಾಡಿನಲ್ಲಿ ಹಸ್ತಾಂತರಕ್ಕೆ ಮೊದಲೇ ಮನೆ ನಿರ್ಮಿಸಿದವರು ಇದ್ದಾರೆ. ಆದರೆ ಆಶ್ರಯ ಸಮಿತಿಯ ಅಧ್ಯಕ್ಷರ ಗಮನಕ್ಕೆ ತಾರದೆಯೇ ಅಲ್ಲಿ ಬಡ ಮಹಿಳೆ ನಿರ್ಮಿಸಿದ ಮನೆಯನ್ನು ತೆರವು ಮಾಡಲಾಗಿದೆ. ಉಪವಿಭಾಗಾಧಿಕಾರಿ ಮತ್ತು ನಗರಸಭೆಯ ಆಯುಕ್ತರಿಂದ ಬಡಮಹಿಳೆಗೆ ಅನ್ಯಾಯವಾಗಿದೆ ಎಂದು ದೂರಿದರು.

‘ಮಿನಿ ವಿಧಾನಸೌಧ ಭೃಷ್ಟಾಚಾರದ ಅಡ್ಡೆಯಾಗಿದ್ದು, ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯುವ ಕೆಲಸವನ್ನು ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಮಾಡುತ್ತಿಲ್ಲ. ಬದಲಾಗಿ ಬಡವರನ್ನು ಹಿಂಸಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆಹರೂನಗರ ಎಂಬಲ್ಲಿ ವಾಣಿಜ್ಯ ಸಂಕೀರ್ಣವೊಂದಕ್ಕೆ ಅಡ್ಡವಾಗುತ್ತದೆ ಎಂದು ಎದುರುಭಾಗದ ರಸ್ತೆ ಬದಿಯಲ್ಲಿದ್ದ ಬಡಕುಟುಂಬದ ಪ್ರದೀಪ್ ಭಂಡಾರಿ ಎಂಬವರ ಸೆಲೂನ್  ದ್ವಂಸ ಮಾಡಿದ ಅಧಿಕಾರಿಗಳಿಗೆ ರಸ್ತೆ ಬದಿ ಬೇರೆ ಅಕ್ರಮ ಗೂಡಂಗಡಿಗಳಿರುವುದು ಕಾಣಿಸುವುದಿಲ್ಲವೇ ಎಂದು ಪ್ರಶ್ನಿಸಿದರು.

ಆಂದೋಲನದ: ಬಡವರಿಗೆ ಅನ್ಯಾಯ ಎಸಗುವ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ. ಲೋಕಾಯುಕ್ತರಿಗೆ, ಎಸಿಬಗೆ ದೂರು ನೀಡುತ್ತೇವೆ. ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ 4 ಸಾವಿರ ಮಂದಿಯಿಂದ ಆಂದೋಲನ ನಡೆಸುತ್ತೇವೆ ಎಂದು ಎಚ್ಚರಿಸಿದರು.

ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯರಾದ ಜಯಲಕ್ಷ್ಮಿ ಸುರೇಶ್ ಮತ್ತು ಉಷಾ ಧನಂಜಯ್, ಸಂತ್ರಸ್ತ ಸೆಲೂನ್ ಅಂಗಡಿ ಮಾಲೀಕ ಪ್ರದೀಪ್ ಭಂಡಾರಿ, ಅವರ ತಾಯಿ ಸುಶೀಲ, ಸಫಿಯಾ ಅವರ ಸಂಬಂಧಿ ಮುಸ್ತಾಫ, ಸುಂಕದಮೂಲೆಯ ದೇವದಾಸ್  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !