ಮೇಳೈಸಿದ ತಂಬೂರಿ, ತಾಳ, ತಮಟೆ

7
ಜಿಲ್ಲಾ ಮಟ್ಟದ ಜಾನಪದ ಸಂಭ್ರಮ: ವಿವಿಧ ಕಲಾ ಪ್ರಕಾರಗಳ ಪ್ರದರ್ಶನ

ಮೇಳೈಸಿದ ತಂಬೂರಿ, ತಾಳ, ತಮಟೆ

Published:
Updated:
ಮಂಡ್ಯದ ಗಾಂಧಿಭವನದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಜಾನಪದ ಸಂಭ್ರಮವನ್ನು ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಂ.ಅಪ್ಪಾಜಪ್ಪ ಉದ್ಘಾಟಿಸಿದರು

ಮಂಡ್ಯ: ಜನಪದ ಹಾಡು, ಕೋಲಾಟ, ಕಂಸಾಳೆ ಪದ, ಬುದ್ಧ ಗೀತೆ, ಭಾವ ಗೀತೆ, ದಾಸರ ಪದ, ದೇವರನಾಮ, ಪರಿಸರ ಗೀತೆಗಳಿಗೆ ಭಾನುವಾರ ಗಾಂಧಿಭವನದ ವೇದಿಕೆ ಸಾಕ್ಷಿಯಾಯಿತು.

ಮಲೆಮಹಾದೇಶ್ವರ ಜಾನಪದ, ಸುಗಮ ಸಂಗೀತ ಅಕಾಡೆಮಿ ತಂಡ ಆಯೋಜಿಸಿದ್ದ 2017–18ನೇ ಸಾಲಿನ ಜಿಲ್ಲಾ ಮಟ್ಟದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಲಾತಂಡಗಳ ಕಲಾವಿದರು ಸಂಗಮಿಸಿ ತಮ್ಮ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು. ಹಿರಿಯ ಹಾಗೂ ಕಿರಿಯ ಕಲಾವಿದರು ಒಂದೇ ವೇದಿಕೆಯ ಮೇಲೆ ಮೇಳೈಸಿದ್ದು ವಿಶೇಷವಾಗಿತ್ತು. ತಮಟೆಯ ಸದ್ದು ಕೇಳುಗರ ಕಿವಿಗಡಚಿತು. ವೀರಗಾಸೆಯ ಹೆಜ್ಜೆಗಳು ವಿದ್ಯುತ್‌ ಸಂಚಾರ ಸೃಷ್ಟಿಸಿದವು. ಪೂಜಾ ಕುಣಿತ, ಸೋಮನ ಕುಣಿತಗಳು ನೋಡುಗರಲ್ಲಿ ಸಂಭ್ರಮ ಸೃಷ್ಟಿಸಿದವು.

ಹೆಮ್ಮಿಗೆ ಗ್ರಾಮದ ನಾಲ್ಕು ತಂಡಗಳ ಕಲಾವಿದರು ವಿವಿಧ ಜನಪದ ಗೀತೆಗಳನ್ನು ಪ್ರಸ್ತುತಪಡಿಸಿ ಮೆಚ್ಚುಗೆ ಗಳಿಸಿದರು. ಅಮೇಜಿಂಗ್ ನೃತ್ಯ ಶಾಲೆಯ ಕಲಾವಿದ ವಿನೋದ್‌ ಹಾಗೂ ತಂಡದ ಸದಸ್ಯರು ಕೋಲಾಟವಾಡಿದರು. ಶ್ರೀನಿವಾಸ್ ಅವರ ತಂಡ ಹಲವು ಭಾವಗೀತೆಗಳನ್ನು ಪ್ರಸ್ತುತಪಡಿಸಿತು. ಮೇಘನಾ ಅವರ ದೇಶಭಕ್ತಿಗೀತೆ, ಸಿಂಚನಾರ ಭಾವಗೀತೆಗಳು ಸೊಗಸಾಗಿ ಮೂಡಿಬಂದವು. ಅಪ್ಪಟ ಗ್ರಾಮೀಣ ಪ್ರದೇಶದ ಸೊಗಡು ಪ್ರತಿಬಿಂಬಿಸುವ ತತ್ವಪದ, ಸೋಬಾನೆ ಪದಗಳು ವಿಶೇಷ ಆಕರ್ಷಣೆಯಾಗಿದ್ದವು.

ಗ್ರಾಮೀಣ ಮತ್ತು ನಗರದ ಕಲಾವಿದರು ಒಂದೇ ವೇದಿಕೆಗೆ ಬಂದು ತಮ್ಮ ಪ್ರತಿಭೆ ತೋರಿದರು. ತಂಬೂರಿ, ತಾಳ, ತಮಟೆ ಮುಂತಾದ ವಾದ್ಯಗಳು ಮೇಳೈಸಿದವು. ಕಲೆಗಳು, ಕಲಾವಿದರು ಹಾಗೂ ವಾದ್ಯಗಳ ಸಂತೆಯಂತೆ ಸಭಾಂಗಣ ಕಂಡು ಬಂತು. ಈ ಸಂದರ್ಭದಲ್ಲಿ ಹಿರಿಯ ಜಾನಪದ ಕಲಾವಿದರಾದ ಹೆಮ್ಮಿಗೆ ನಂಜಯ್ಯ ಹಾಗೂ ಶಿವಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಂ.ಅಪ್ಪಾಜಪ್ಪ ಮಾತನಾಡಿ ‘ಜಾನಪದ ಕಲೆ ಎಲ್ಲಾ ಕಲೆಗಳ ತಳಹದಿಯಾಗಿದೆ. ಜಾನಪದ ಕಲೆಗಳಿಂದ ವಿವಿಧ ಕಲೆಗಳು ಜನ್ಮ ತಾಳಿವೆ. ಸರ್ಕಾರಗಳು ಜಾನಪದಕ್ಕೆ ಮರುಜೀವ ನೀಡಬೇಕು. ಎಷ್ಟೋ ಕಲಾವಿದರು ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಅಂಥವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಬೇಕು.  ಕಲೆಗಳನ್ನು ಉಳಿಸಿ ಬೆಳೆಸುವ ಬಲುದೊಡ್ಡ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ’ ಎಂದು ಹೇಳದಿರು.

‘ಗ್ರಾಮೀಣ ಪ್ರದೇಶದ ಮೂಲ ಕಲಾವಿದರನ್ನು ಗುರುತಿಸಿ ಅವರಿಗೆ ನೆರವು ನೀಡಲು ಯೋಜನೆ ರೂಪಿಸಬೇಕು. ಮುಂದಿನ ವರ್ಷದಿಂದ ಜಿಲ್ಲೆಯ ವಿವಿಧ ಕಲಾತಂಡಗಳ ಮುಖಂಡರನ್ನು ಸೇರಿಸಿ ಒಂದು ಸಮಿತಿ ರಚನೆ ಮಾಡಿ ಜಿಲ್ಲಾ ಮಟ್ಟದ ದೊಡ್ಡ ಜಾನಪದ ಉತ್ಸವ ಮಾಡಲಾಗುವುದು. ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮ,ಉತ್ಸವ, ಹಬ್ಬಗಳಿಗೆ ಸ್ಥಳೀಯ ಕಲಾವಿದರಿಗೆ ಅವಕಾಶ ಸಿಗಬೇಕು’ ಎಂದು ಹೇಳಿದರು.

ಪಶುವೈದ್ಯಕೀಯ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಕೆ.ಎಂ.ಸುರೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಚ್.ಕೆ.ಚಂದ್ರಹಾಸ್, ಮಲೆಮಹಾದೇಶ್ವರ ಜಾನಪದ, ಸುಗಮ ಸಂಗೀತ ಅಕಾಡೆಮಿ ತಂಡ ದೇವೀರಮ್ಮ, ಕಾರ್ಯದರ್ಶಿ ಎಚ್.ಎಂ.ಮಹದೇವು, ಮುಖಂಡರಾದ ಬಸವರಾಜು, ಕಿರಣ್‌ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !