ಜಿಲ್ಲೆಗೆ ಅನುದಾನ ನೀಡದಿದ್ದರೆ ಹೋರಾಟ

7
ಬಿಜೆಪಿ ಜಿಲ್ಲಾ ಘಟಕದಿಂದ ಎಚ್ಚರಿಕೆ

ಜಿಲ್ಲೆಗೆ ಅನುದಾನ ನೀಡದಿದ್ದರೆ ಹೋರಾಟ

Published:
Updated:

ಶಿರಸಿ: ರಾಜ್ಯದ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸಂಪೂರ್ಣ ಅನ್ಯಾಯವಾಗಿದೆ. ಜಿಲ್ಲೆಗೆ ಅನುದಾನ ನೀಡದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ರವಿ ಹೆಗಡೆ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಒಕ್ಕಲಿಗ ಶಾಸಕರಿರುವ ಜಿಲ್ಲೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಮಂಚೂಣಿಯಲ್ಲಿರುವ ಉತ್ತರ ಕನ್ನಡಕ್ಕೆ ಅನುದಾನ ಮೀಸಲಿಟ್ಟಿಲ್ಲ. ಜಿಲ್ಲೆಗೆ ಏತ ನೀರಾವರಿ, ಕಾಲುಸಂಕ, ಕೃಷಿ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡದಿದ್ದರೆ ಬಿಜೆಪಿ ಘಟಕದ ವತಿಯಿಂದ ಬೃಹತ್ ಪ್ರತಿಭಟಿಸಲಾಗುವುದು’ ಎಂದರು.

ಪಕ್ಷದ ಪ್ರಮುಖ ಪ್ರಮೋದ ಹೆಗಡೆ ಮಾತನಾಡಿ, ‘ಪ್ರಾಮಾಣಿಕವಾಗಿ ಸಾಲ ತುಂಬಿದವರಿಗೆ ಶಿಕ್ಷೆ ನೀಡಿ, ಸಾಲ ತುಂಬದವರಿಗೆ ₹ 2 ಲಕ್ಷ ಬಹುಮಾನ ನೀಡುವ ಬಜೆಟ್ ಜಾರಿಮಾಡಲಾಗಿದೆ. ಜಿಲ್ಲೆಯ 83ಸಾವಿರ ರೈತರ ₹ 640 ಕೋಟಿ ಸಾಲ ಮನ್ನಾದ ಬದಲಾಗಿ, ಕೇವಲ 740 ಸುಸ್ತಿ ಬಾಕಿದಾರರಿಗೆ ₹ 8 ಕೋಟಿ ಸಾಲ ಮನ್ನಾ ಯೋಜನೆಯಲ್ಲಿ ಸೇರಿಸಲಾಗಿದೆ. ಇದರಿಂದಾಗಿ ಸಾಲ ತುಂಬುವ ಪ್ರಾಮಾಣಿಕ ರೈತರಿಗೆ ಅನ್ಯಾಯವಾಗಿದೆ. ₹ 34ಸಾವಿರ ಕೋಟಿ ಸಾಲ ಮನ್ನಾ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಬಜೆಟ್‌ನಲ್ಲಿ ಇದಕ್ಕಾಗಿ ಮೀಸಲಿಟ್ಟಿರುವುದು ₹ 6ಸಾವಿರ ಕೋಟಿ ಮಾತ್ರ’ ಎಂದು ಆರೋಪಿಸಿದರು.

ಕುಮಾರಸ್ವಾಮಿ ಹಾಗೂ ದೇವೆಗೌಡ ಸೇರಿ ರಾಜ್ಯದ ರೈತರಿಗೆ ಮೋಸ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಡಲಾದ ಸಾಲ ಮನ್ನಾದ ಮೊತ್ತ ₹ 303 ಕೋಟಿ ಕೆಡಿಸಿಸಿ ಬ್ಯಾಂಕಿಗೆ ಬರಬೇಕಾಗಿದೆ. ಹೀಗಾದರೆ, ಡಿಸಿಸಿ ಬ್ಯಾಂಕ್ ದಿವಾಳಿಯಾಗಲಿದೆ ಎಂದರು. ಪಕ್ಷದ ಪ್ರಮುಖರಾದ ವಿನಾಯಕ ಹೆಗಡೆ, ಆರ್.ವಿ.ಹೆಗಡೆ, ಶ್ರೀರಾಮ ನಾಯ್ಕ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !