ಸಂಸ್ಕಾರ ಬೆಳೆಸಿಕೊಂಡರೆ ಭವಿಷ್ಯ ಉಜ್ವಲ

7
ಚಿನ್ಮಯ ಮಿಷನ್‌ ರಾಜ್ಯ ಮುಖ್ಯಸ್ಥ ಬ್ರಹ್ಮಾನಂದ ಹೇಳಿಕೆ

ಸಂಸ್ಕಾರ ಬೆಳೆಸಿಕೊಂಡರೆ ಭವಿಷ್ಯ ಉಜ್ವಲ

Published:
Updated:
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೋಲಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಚಿನ್ಮಯ ಮಿಷನ್‌ ರಾಜ್ಯ ಮುಖ್ಯಸ್ಥ ಬ್ರಹ್ಮಾನಂದ ಮಾತನಾಡಿದರು.

ಕೋಲಾರ: ‘ಮಕ್ಕಳು ಜೀವನದಲ್ಲಿ ಸಂಸ್ಕಾರ, ನೈತಿಕ ಮೌಲ್ಯ ಬೆಳೆಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಚಿನ್ಮಯ ಮಿಷನ್‌ ರಾಜ್ಯ ಮುಖ್ಯಸ್ಥ ಬ್ರಹ್ಮಾನಂದ ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಗಳಿಸಿದ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕಲಿಕೆಗೆ ಶ್ರದ್ಧೆ ಮತ್ತು ಛಲ ಬಹಳ ಮುಖ್ಯ. ವಿದ್ಯೆಯು ಸಾಧಕನ ಸ್ವತ್ತು’ ಎಂದರು.

‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ ಸಹಜ. ಆದರೆ, ಸ್ಪರ್ಧೆಯು ಆರೋಗ್ಯಕರವಾಗಿರಬೇಕು. ಅಸೂಹೆ, ದ್ವೇಷ ಬಿಟ್ಟು ನ್ಯಾಯಯುತ ಹಾದಿಯಲ್ಲಿ ಯಶಸ್ಸಿನತ್ತ ಸಾಗಬೇಕು.ಈ ಹಾದಿಯಲ್ಲಿ ಮತ್ತೊಬ್ಬರ ಶ್ರೇಯಸ್ಸು ಕಂಡು ಅಸೂಹೆ ಪಡುವುದು ತಪ್ಪು. ವಿದ್ಯಾರ್ಥಿಗಳು ದೇಶದ ಸಂಸ್ಕೃತಿ, ಪರಂಪರೆ ಗೌರವಿಸಬೇಕು. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಸ್ವಂತಿಕೆ ಕಳೆದುಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.

‘ಸಮಾಜ ನನಗೇನು ಮಾಡಿದೆ ಎಂದು ಪ್ರಶ್ನಿಸುವುದಕ್ಕೂ ಮುನ್ನ ಸಮಾಜಕ್ಕೆ ನನ್ನಿಂದ ಏನು ಕೊಡುಗೆ ಸಿಕ್ಕಿದೆ ಎಂದು ಆಲೋಚಿಸಬೇಕು. ವೈದ್ಯರು ಹಾಗೂ ಎಂಜಿನಿಯರ್‌ಗಳಾಗುವ ಆಶಯ ಈಡೇರಲಿ. ಆದರೆ, ಅದಕ್ಕೂ ಮೊದಲು ಪೋಷಕರಿಗೆ ಒಳ್ಳೆಯ ಮಕ್ಕಳಾಗಿ. ತಂದೆ ತಾಯಿಯ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಿ’ ಎಂದು ಸಲಹೆ ನೀಡಿದರು.

ಸವಾಲು ಎದುರಿಸಿ: ‘ಪ್ರತಿಭೆಯು ಶ್ರದ್ಧೆ ಮತ್ತು ಛಲ ಇರುವವನ ಸ್ವತ್ತು. ಅದನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ನೈತಿಕ ಮೌಲ್ಯಗಳನ್ನು ಕಲಿಸಬೇಕು’ ಎಂದು ಚಿನ್ಮಯ ಮಿಷನ್‌ ನಿರ್ದೇಶಕ ಗುರುಪ್ರಸಾದ್ ತಿಳಿಸಿದರು.

ಶಿಕ್ಷಕರ ಪರಿಶ್ರಮ: ‘ವಿದ್ಯಾಲಯವು ಶೇ 100ರ ಫಲಿತಾಂಶ ಸಾಧನೆಗೆ ಶ್ರಮಿಸುತ್ತಿದೆ. ಫಲಿತಾಂಶ ಗುಣಮಟ್ಟದಿಂದ ಕೂಡಿರಲು ಶಿಕ್ಷಕರು ಶಕ್ತಿಮೀರಿ ಶ್ರಮಿಸಿದ್ದಾರೆ. ಈ ಸಾಧನೆಯಲ್ಲಿ ಎಲ್ಲಾ ಶಿಕ್ಷಕರ ಪರಿಶ್ರಮವಿದೆ’ ಎಂದು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಕೆ.ಚಂದ್ರಪ್ರಕಾಶ್ ಸ್ಮರಿಸಿದರು.

ಎಸ್ಸೆಸ್ಸೆಲ್ಸಿಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ನಗರದ ಚಿನ್ಮಯ ವಿದ್ಯಾಲಯದ 94 ಮಂದಿ ಹಾಗೂ ಚೊಕ್ಕಹಳ್ಳಿ ವಿದ್ಯಾಲಯದ 7 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಚಿನ್ಮಯ ಮಿಷನ್‌ ಸದಸ್ಯ ರಮಾತ್ಮಾನಂದ, ವಿದ್ಯಾಲಯದ ಪ್ರಾಂಶುಪಾಲರಾದ ಅನಂತ ಪದ್ಮನಾಭ್, ದ್ವಾರಕಾನಾಥ್, ಶಿಕ್ಷಕರಾದ ರವಿಶಂಕರ್ ಅಯ್ಯರ್, ಡಿ.ಎನ್.ಸುಧಾಮಣಿ, ಭವಾನಿ, ಬಸವರಾಜ್, ಕೆ.ಎಂ.ಶ್ರೀನಿವಾಸ್, ಶಂಕರಪ್ಪ, ಸೌಮ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !