2 ಸಾವಿರಕ್ಕೂ ಅಧಿಕ ಸಾಧುಸಂತರಿಗೆ ಆಹ್ವಾನ

7
ಸೆ. 3ರಂದು ಶ್ರೀರಾಮ ಕ್ಷೇತ್ರದಲ್ಲಿ ಧರ್ಮ ಸಂಸದ್‌– ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾಹಿತಿ

2 ಸಾವಿರಕ್ಕೂ ಅಧಿಕ ಸಾಧುಸಂತರಿಗೆ ಆಹ್ವಾನ

Published:
Updated:
ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಮಂಗಳೂರು: ಧರ್ಮಸ್ಥಳ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸೆ.3ರಂದು ನಡೆಯುವ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಮತ್ತು ರಾಷ್ಟ್ರೀಯ ಧರ್ಮ ಸಂಸದ್‌ಗೆ ದೇಶವಿದೇಶದ 2 ಸಾವಿರಕ್ಕೂ ಅಧಿಕ ಸಾಧುಸಂತರಿಗೆ ಆಹ್ವಾನ ನೀಡಲಾಗಿದೆ.

ನಗರದಲ್ಲಿ ಮಂಗಳವಾರ ಈ ಕುರಿತು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾಹಿತಿ ನೀಡಿ, ‘ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸಂಸದ್‌ ಅನ್ನು ಉದ್ಘಾಟಿಸುವರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಸೇರಿದಂತೆ ಹಲವು ಸಚಿವರನ್ನು, ಗಣ್ಯರನ್ನು ಆಹ್ವಾನಿಸಲಾಗಿದೆ’ ಎಂದು ತಿಳಿಸಿದರು.

ಬದರಿ, ಕೇದಾರ, ಗಂಗೋತ್ರಿ, ಸೇಮಿಶಾರಣ್ಯ, ಚಿತ್ರಕೂಟ, ಉಜ್ಜಯಿನಿ, ಇಲಾಹಾಬಾದ್, ನಾಸಿಕ್‌, ರಾಮೇಶ್ವರ, ಅಸ್ಸಾಂ, ಕೇರಳ, ತಮಿಳುನಾಡಿ, ನೇಪಾಲ, ಜಮ್ಮು ಸೇರಿದಂತೆ ದೇಶ– ವಿದೇಶಗಳ ‌ಸಂತರು ಧರ್ಮಸಂಸದ್‌ನಲ್ಲಿ ಭಾಗವಹಿಸಲಿದ್ದಾರೆ. ಹೊರರಾಜ್ಯದ ಸಂತರು ಸೆ. 2ರಂದು ಮಠಕ್ಕೆ ಬರಲಿದ್ದು, ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸೆ. 3ರಂದು ಬೆಳಿಗ್ಗೆ 7ರಿಂದ ಶ್ರೀರಾಮ ತಾರಕ ಮಂತ್ರ ಯಜ್ಞ, 9 ಗಂಟೆಗೆ ಹಿಮಾಲಯದ ಸಾಧು– ಸಂತರ ಶೋಭಾಯಾತ್ರೆ, 11 ಗಂಟೆಗೆ ಪಟ್ಟಾಭಿಷೇಕದ ಪೀಠಾರೋಹಣ, ಧರ್ಮಸಂಸದ್‌ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.

ಧರ್ಮಸಂಸದ್‌ ಉದ್ದೇಶ: ಸನಾತನ ಹಿಂದೂ ಧರ್ಮದ ಮೌಲ್ಯಗಳು ನಮ್ಮ ಆಸ್ತಿ. ಜಗತ್‌ ಕಲ್ಯಾಣ, ಧರ್ಮಪೋಷಣೆಗಾಗಿ ಈ ಧರ್ಮಸಂಸದ್‌ ನಡೆಸಲು ನಿರ್ಧರಿಸಲಾಗಿದೆ. ರಾಜಕೀಯರಹಿತವಾಗಿ ರಾಷ್ಟ್ರಮಟ್ಟದಲ್ಲಿ ಎಲ್ಲ ಅಖಾಡಗಳು, ನಾಗಸಾಧುಗಳು, ಸೀತಾರಾಮ ಪರಂಪರೆ, ನಾಥ್‌ ಪಂತ, ತ್ಯಾಗಿ, ಬೈರಾಗಿ ಇನ್ನಿತರ ಎಲ್ಲ ಸನಾತನ ಹಿಂದೂ ಧರ್ಮದ ಬೇರೆ ಬೇರೆ ಪರಂಪರೆಗಳ ಆಚಾರ್ಯರನ್ನು, ಮಹಾಮಂಡಲೇಶ್ವರರನ್ನು, ಮಹಂತರನ್ನು ಒಟ್ಟುಗೂಡಿಸಿ ಧರ್ಮರಕ್ಷಣೆಗಾಗಿ ‘ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಲೋಕ ಕಲ್ಯಾಣ ಮಂಚ್‌’ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಸ್ವಾಮೀಜಿ ಹೇಳಿದರು.

ಹಿಂದಿನ ಕಾಲದಲ್ಲಿ ಸಪ್ತರ್ಷಿಗಳು ಧರ್ಮಸಂಸದ್‌ನಲ್ಲಿ ನಿರ್ಣಯಿಸಿ ದೇಶಕ್ಕೆ ಸುಭೀಕ್ಷೆ ನೀಡಿದ ಮಾದರಿಯಲ್ಲೇ ಧರ್ಮ, ಜನರಿಗೆ ತೊಂದರೆಯಾದಾಗ ರಾಷ್ಟ್ರೀಯ ಲೋಕ ಮಂಚ್‌ ಸಂತರೇ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದು ಅದನ್ನು ಸರ್ಕಾರದ ಗಮನಕ್ಕೆ ತಂದು, ಆತ್ಮಸ್ಥೈರ್ಯ ಹೆಚ್ಚಿಸುವುದು ಈ ಧರ್ಮಸಂಸದ್‌ನ ಉದ್ದೇಶ ಎಂದರು.

ಶ್ರೀರಾಮಕ್ಷೇತ್ರದ ಟ್ರಸ್ಟಿಗಳಾದ ಚಿತ್ತರಂಜನ್‌ ಗರೋಡಿ, ಮೋಹನ ಉಜ್ಜೋಡಿ, ರೋಹಿತ್‌ ಪೂಜಾರಿ, ತುಕರಾಮ ಪೂಜಾರಿ, ರಾಷ್ಟ್ರೀಯ ಧರ್ಮಸಂಸದ್‌ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌, ಪ್ರವೀಣ್‌ ವಾಲ್ಗೆ ಸುದ್ದಿಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !