ಸ್ಮಶಾನ ಜಾಗ ಒತ್ತುವರಿ ಆರೋಪ: ಧರಣಿ

7

ಸ್ಮಶಾನ ಜಾಗ ಒತ್ತುವರಿ ಆರೋಪ: ಧರಣಿ

Published:
Updated:
ಸಂತ ಮೇರಿಯಮ್ಮ ಚರ್ಚ್‌ನ ಸ್ಮಶಾನದ ಒತ್ತುವರಿ ತೆರವುಗೊಳಿಸಬೇಕೆಂದು ಒತ್ತಾಯಿಸಿ ಕ್ರೈಸ್ತ ಸಮುದಾಯದವರು ಮಂಗಳವಾರ ಕೋಲಾರದ ಗಲ್‌ಪೇಟೆ ಪೊಲೀಸ್‌ ಠಾಣೆ ಎದುರು ಜಮಾಯಿಸಿ ಧರಣಿ ನಡೆಸಿದರು.

ಕೋಲಾರ: ಸಂತ ಮೇರಿಯಮ್ಮ ಚರ್ಚ್‌ಗೆ ಸೇರಿದ ಸ್ಮಶಾನದ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಶೀಘ್ರವೇ ಒತ್ತುವರಿ ತೆರವುಗೊಳಿಸಬೇಕೆಂದು ಒತ್ತಾಯಿಸಿ ಕ್ರೈಸ್ತ ಸಮುದಾಯದವರು ನಗರದ ಗಲ್‌ಪೇಟೆ ಪೊಲೀಸ್‌ ಠಾಣೆ ಎದುರು ಮಂಗಳವಾರ ಧರಣಿ ನಡೆಸಿದರು.

‘ಜಿಲ್ಲಾ ಪಂಚಾಯಿತಿ ಮುಂಭಾಗದಲ್ಲಿ ಸಂತ ಮೇರಿಯಮ್ಮ ಚರ್ಚ್‌ಗೆ ಸೇರಿದ ಸ್ಮಶಾನವಿದೆ. ಶ್ರೀನಿವಾಸ್ ಎಂಬುವರು ಸ್ಮಶಾನದ ಸ್ವಲ್ಪ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಜಾಗ ಬಿಟ್ಟು ಕೊಡುವಂತೆ ಕೇಳಿದರೆ ಬೆದರಿಕೆ ಹಾಕುತ್ತಾರೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘2011ರಲ್ಲಿ ಆಗಿದ್ದ ಒಪ್ಪಂದದ ಪ್ರಕಾರ ಸ್ಮಶಾನದ ಪಕ್ಕದ ಜಾಗದಲ್ಲಿ ಪೆಟ್ಟಿಗೆ ಅಂಗಡಿಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಒಪ್ಪಂದದಂತೆ ಶ್ರೀನಿವಾಸ್‌ ಹಾಗೂ ಮೂರ್ನಾಲ್ಕು ಮಂದಿ ಅಂಗಡಿ ಇಟ್ಟುಕೊಂಡಿದ್ದರು’ ಎಂದು ಚರ್ಚ್‌ನ ಫಾದರ್‌ ದೇವದಾಸ್ ಹೇಳಿದರು.

‘ಕರಾರು ಅವಧಿ ಮುಗಿದ ಹಿನ್ನೆಲೆಯಲ್ಲಿ ಪೆಟ್ಟಿಗೆ ತೆರವುಗೊಳಿಸುವಂತೆ ಶ್ರೀನಿವಾಸ್‌ ಅವರಿಗೆ ಸೂಚಿಸಲಾಗಿತ್ತು. ಆದರೆ, ಪೆಟ್ಟಿಗೆ ತೆರವುಗೊಳಿಸದ ಅವರು ಹೊಸದಾಗಿ ಅಂಗಡಿ ನಿರ್ಮಿಸಲು ಸ್ಮಶಾನದ 10 ಅಡಿ ಜಾಗ ಅತಿಕ್ರಮಿಸಿಕೊಂಡು ಗುದ್ದಲಿ ಪೂಜೆ ಮಾಡಿದ್ದಾರೆ. ಜಾಗಕ್ಕೆ ಸಂಬಂಧಪಟ್ಟಂತೆ ನಕಲಿ ದಾಖಲೆಪತ್ರ ಸೃಷ್ಟಿಸಿದ್ದಾರೆ’ ಎಂದು ದೂರಿದರು.

ಪ್ರಕರಣ ದಾಖಲಿಸಿ: ‘ಪೂರ್ವ ಒಪ್ಪಂದದಂತೆ ಶ್ರೀನಿವಾಸ್‌ರ ಪೆಟ್ಟಿಗೆ ತೆರವು ಮಾಡಿಸಬೇಕು. ಜತೆಗೆ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಬಿಡಿಸಿಕೊಡಬೇಕು. ಜಾಗ ಅತಿಕ್ರಮಿಸಿಕೊಂಡು ಬೆದರಿಕೆ ಹಾಕುತ್ತಿರುವ ಶ್ರೀನಿವಾಸ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಧರಣಿನಿರತರು ಒತ್ತಾಯಿಸಿದರು.

ನಿವೃತ್ತ ವೃತ್ತ ನಿರೀಕ್ಷಕ ಶಾಂತಪ್ಪ, ಸಮುದಾಯದ ಮುಖಂಡರಾದ ಸುಮಿತ್, ಶಶಿಕುಮಾರ್, ಮೋಹನ್, ಅರುಣ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !