ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಿ

7
ಸಿ.ವಿ.ವಿ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ಸಹಾಯಧನ, ಪುಸ್ತಕ ವಿತರಣೆ ಕಾರ್ಯಕ್ರಮ

ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಿ

Published:
Updated:
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.

ಚಿಕ್ಕಬಳ್ಳಾಪುರ: ‘ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಕ್ರಮಗಳ ಬೋಧನೆಗೆ ಸೀಮಿತವಾಗಿರದೆ, ಪ್ರಸ್ತುತದ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾದ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಮೂಲಕ ಅವರ ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡಬೇಕಿದೆ’ ಎಂದು ಎಂದು ಕೆ.ವಿ. ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ವಿ.ನರೇಂದ್ರ ಬಾಬು ಹೇಳಿದರು.

ನಗರದ ಸಿ.ವಿ.ವಿ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿ, ವಿಜ್ಞಾನ ಮತ್ತು ಕಲಾ ಸಂಘಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ, ಸಹಾಯಧನ, ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಠಿಣ ಪರಿಶ್ರಮ, ಸತತ ಪ್ರಯತ್ನ ಇದ್ದಲ್ಲಿ ಮಾತ್ರ ಯಶಸ್ಸು ಸಾಧ್ಯ. ಪ್ರಸ್ತುತ ಜಾಗತೀಕರಣ ಯುಗದಲ್ಲಿ ವಿದ್ಯಾರ್ಥಿಗಳ ಎದುರು ಅನೇಕ ಸವಾಲುಗಳಿವೆ. ಅವೆಲ್ಲವನ್ನೂ ಮೆಟ್ಟಿ ಯಶಸ್ಸು ಸಾಧಿಸುವುದು ಬಹು ಸವಾಲಿನ ಕೆಲಸ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನವನ್ನು ವ್ಯರ್ಥ ಮಾಡಿಕೊಳ್ಳದೆ ಶಿಸ್ತು, ಶ್ರದ್ಧೆ, ಬದ್ಧತೆಯಿಂದ ವಿದ್ಯಾರ್ಜನೆ ಮಾಡಬೇಕು’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಬುದ್ಧ, ಬಸವಣ್ಣ, ಸ್ವಾಮಿ ವಿವೇಕಾನಂದ, ಬಿ.ಆರ್.ಅಂಬೇಡ್ಕರ್, ಸರ್‍ ಎಂ.ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ ಅವರಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಸಿಗುವ ಪ್ರತಿಯೊಂದು ವೇದಿಕೆ, ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದ ನಾಯಕರಾಗುವ ನಿಟ್ಟಿನಲ್ಲಿ ಬೆಳೆಯಬೇಕು’ ಎಂದರು.

ಕೆ.ವಿ ಮತ್ತು ಪಂಚಗಿರಿ ವಿದ್ಯಾದತ್ತಿಯ ಆಡಳಿತಾಧಿಕಾರಿ ಪಿ.ಸಾಯಿಪ್ರಭು ಮಾತನಾಡಿ, ‘ವಿದ್ಯಾರ್ಥಿಗಳಿಗೆ ತಾವು ಏನನ್ನಾದರೂ ಸಾಧಿಸಬಲ್ಲೆವು ಎಂಬ ಛಲ ಇರಬೇಕು. ಆಗ ಮಾತ್ರ ಯಾವುದೇ ಗುರಿಯನ್ನು ಸುಲಭವಾಗಿ ಸಾಧಿಸಬಹುದು. ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅದನ್ನು ಪೋಷಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೆ ಒತ್ತಡ ಹಾಕುವ ಕೆಲಸ ಮಾಡಬಾರದು’ ಎಂದು ಹೇಳಿದರು.

ಎಸ್‍ಎಸ್‍ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. 45 ಬಡ ವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.

ಕೆ.ವಿ ಮತ್ತು ಪಂಚಗಿರಿ ವಿದ್ಯಾದತ್ತಿ ಸದಸ್ಯರಾದ ಬಿ.ಮುನಿಯಪ್ಪ, ಯಾಸೀನ್ ಖಾನ್, ಶಾಲೆಯ ಮುಖ್ಯಶಿಕ್ಷಕ ಎಂ.ನಾರಾಯಣಸ್ವಾಮಿ, ಶಿಕ್ಷಕರಾದ ಮಹಾಂತೇಶ್, ಟಿ.ವಿ.ಶ್ರೀನಿವಾಸರೆಡ್ಡಿ, ಲಕ್ಷ್ಮಣಸ್ವಾಮಿ ಉಪಸ್ಥಿತರಿದ್ದರು.

ಪ್ರತಿ ವಿದ್ಯಾರ್ಥಿಯು ತನ್ನ ಮುಂದಿನ ಜೀವನದ ಬಗ್ಗೆ ನಿರ್ದಿಷ್ಟ ಕನಸು ಹೊಂದಿರಬೇಕಿದೆ. ಅದನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಪರಿಶ್ರಮಪಟ್ಟಾಗ ಯಶಸ್ಸು ದೊರೆಯುತ್ತದೆ
– ಪ್ರೊ.ವಿ.ನರೇಂದ್ರ ಬಾಬು, ಕೆ.ವಿ. ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !