ಜಿಎಸ್‌ಟಿ: ಚಿನ್ನಾಭರಣ ಖರೀದಿಗೆ ಇಲ್ಲದ ಭಯ

7
ವರ್ಷದ ಹಿಂದೆ ಇದ್ದ ಆತಂಕ ಮಾಯ; ಗ್ರಾಹಕರಿಗೆ ಹೊರೆಯಾಗದ ಶೇ 3ರಷ್ಟು ತೆರಿಗೆ

ಜಿಎಸ್‌ಟಿ: ಚಿನ್ನಾಭರಣ ಖರೀದಿಗೆ ಇಲ್ಲದ ಭಯ

Published:
Updated:
Deccan Herald

ಮಂಡ್ಯ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೂ ಮುನ್ನ ಆಭರಣ ಪ್ರಿಯರ ಮೊಗದಲ್ಲಿ ಆತಂಕದ ಗೆರೆ ಮೂಡಿದ್ದವು. ಆದರೆ ಜಿಎಸ್‌ಟಿ ಜಾರಿಯಾದ ಕೇವಲ ಎರಡು ವಾರದಲ್ಲಿ ಆತಂಕ ಮರೆಯಾಯಿತು. ಹೊಸ ತೆರಿಗೆ ವ್ಯವಸ್ಥೆಯನ್ನು ಇಡೀ ದೇಶದ ಜನರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು’ ಎಂದು ನಗರದ ಚಿನ್ನಾಭರಣ ಮಳಿಗೆಯೊಂದರ ಮಾಲೀಕರೊಬ್ಬರು ಹೇಳಿದರು.

ಜಿಎಸ್‌ಟಿ ಜಾರಿಗಿಂತಲೂ ಮೊದಲು ಚಿನ್ನ–ಬೆಳ್ಳಿ ಅಂಗಡಿಗಳಲ್ಲಿ ಜಿಎಸ್‌ಟಿಯದ್ದೇ ಚಿಂತೆ. ಚಿನ್ನ ಹೊರೆಯಾದೀತು ಎಂಬ ಚಿಂತೆ ಗ್ರಾಹಕರನ್ನು ಕಾಡಿದರೆ, ಹೊಸ ತೆರಿಗೆ ವ್ಯವಸ್ಥೆಗೆ ಹೊಂದಿಕೊಳ್ಳುವ ಚಿಂತೆ ವ್ಯಾಪಾರಿಗಳನ್ನು ಕಾಡಿತು. ಹೊಸ ತೆರಿಗೆಯಲ್ಲಿ ಇನ್ವಾಯ್ಸ್‌ ಸೃಷ್ಟಿಸುವ ಕುರಿತು ಹಲವು ಗೊಂದಲಗಳಿದ್ದವು. ಚಿನ್ನಾಭರಣ ವರ್ತಕರು ಜಿಎಸ್‌ಟಿ ಜಾಲಕ್ಕೆ ನೋಂದಣಿ ಮಾಡುವಾಗ ಹಲವು ಪ್ರಶ್ನೆಗಳು ಎದುರಾದವು. ಕೆಲ ವರ್ತಕರು ತಮ್ಮ ವಹಿವಾಟನ್ನು ನಿಗದಿತ ಪ್ರಮಾಣಕ್ಕಿಂತಲೂ ಕಡಿಮೆ ಮಾಡಿಕೊಂಡರು.

‘ಆರಂಭದಲ್ಲಿ ಒಂದು ತಿಂಗಳು ಮಳಿಗೆಯಲ್ಲಿ ಯಾವುದೇ ವಹಿವಾಟು ನಡೆಯಲಿಲ್ಲ. ಆ ನಂತರ ಒಂದೂವರೆ ತಿಂಗಳು ನಿಧಾನವಾಗಿ ವಹಿವಾಟು ಪುನಾರಂಭಗೊಂಡಿತು. ಶೇ 3ರಷ್ಟು ಜಿಎಸ್‌ಟಿ ಗ್ರಾಹಕರಿಗೆ ಹೊರೆಯಾಗಲಿಲ್ಲ, ಗ್ರಾಹಕರು ನಿರಾಳರಾದರು. ಈಗ ಗ್ರಾಹಕರು ಜಿಎಸ್‌ಟಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ವಹಿವಾಟು ಎಂದಿನಂತೆ ಸಾಗಿದೆ’ ಎಂದು ನಗರದ ಮಲಬಾರ್‌ ಗೋಲ್ಡ್‌ ಮಳಿಗೆಯ ಎಜಿಎಂ ದಿಲೀಪ್‌ ಹೆಗಡೆ ಹೇಳಿದರು.

ಮೂರು ತೆರಿಗೆ ಮಾಯ:
ಜಿಎಸ್‌ಟಿ ಜಾರಿಗೂ ಮೊದಲು ಚಿನ್ನ ಖರೀದಿಯ ಮೇಲೆ ಮೂರು ರೀತಿಯ ತೆರಿಗೆ ವಿಧಿಸಲಾಗುತ್ತಿತ್ತು. ಶೇ 1ರಷ್ಟು ಸೀಮಾ ಸುಂಕ, ಶೇ 1 ಸೇವಾ ತೆರಿಗೆ ಹಾಗೂ ಶೇ 1 ಮೌಲ್ಯಾಧಾರಿತ ತೆರಿಗೆ (ವ್ಯಾಟ್‌) ಇದ್ದವು. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ತೆರಿಗೆ ಜಾರಿಯಲ್ಲಿದ್ದವು. ವರ್ತಕರು ಅನ್ಯ ರಾಜ್ಯಗಳಿಂದ ಚಿನ್ನ ತಂದರೂ ಗ್ರಾಹಕರಿಗೆ ಕರ್ನಾಟಕದಲ್ಲಿ ಜಾರಿಯಲ್ಲಿದ್ದ ತೆರಿಗೆಯನ್ನೇ ವಿಧಿಸಲಾಗುತ್ತಿತ್ತು. ಇದರಿಂದ ವರ್ತಕರೂ ಹಲವು ಗೊಂದಲ ಎದುರಿಸುತ್ತಿದ್ದರು.

ಜಿಎಸ್‌ಟಿ ಜಾರಿಗೆ ಬಂದ ನಂತರ ಏಕರೂಪ ತೆರಿಗೆ ವ್ಯವಸ್ಥೆಯಡಿ ಎಲ್ಲಾ ವಹಿವಾಟುಗಳು ಒಂದೇ ಸೂರಿನಡಿ ಬಂದಿವು. ಶೇ 3ರಷ್ಟು ಜಿಎಸ್‌ಟಿಯಲ್ಲಿ ಶೇ 1.5 ಕೇಂದ್ರದ ಪಾಲಿನ ತೆರಿಗೆ (ಸಿಜಿಎಸ್‌ಟಿ), ಶೇ 1.5 ರಾಜ್ಯದ ಪಾಲಿನ ತೆರಿಗೆ (ಎಸ್‌ಜಿಎಸ್‌ಟಿ) ಹಂಚಿಕೆ ಮಾಡಲಾಯಿತು.

‘ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಜಿಎಸ್‌ಟಿ ಸೂಕ್ತವಾದ ಕ್ರಮ. ಮೊದಲು ನೂರಾರು ಸವಾಲು (ಮಲ್ಟಿ ಪಾಯಿಂಟ್‌) ಇದ್ದವು. ಈಗ ಇರುವುದೊಂದೇ (ಸಿಂಗಲ್‌ ಪಾಯಿಂಟ್‌) ತೆರಿಗೆ. ಒಂದು ವರ್ಷದಲ್ಲಿ ದೊಡ್ಡ ಸಮಸ್ಯೆಗಳೇನೂ ಸೃಷ್ಟಿಯಾಗಿಲ್ಲ. ಪ್ರತಿ ಗ್ರಾಹಕ ಹಾಗೂ ವರ್ತಕನಿಗೆ ತೆರಿಗೆ ಕಟ್ಟುವುದು ಹೆಮ್ಮೆಯ ವಿಚಾರವಾಗಬೇಕು’ ಎಂದು ಚಿನ್ನ– ಬೆಳ್ಳಿ ಮಾರಾಟಗಾರರ ಸಂಘದ ಅಧ್ಯಕ್ಷ, ಶ್ರೀ ವರಲಕ್ಷ್ಮಿ ಜ್ಯುವೆಲರ್ಸ್‌ ಮಾಲೀಕ ಎನ್‌.ಡಿ.ಹರಿಪ್ರಸಾದ್‌ ಹೇಳಿದರು.

‘ಕೇವಲ ಒಂದು ವರ್ಷದಲ್ಲಿ ಶೇ 75ರಷ್ಟು ಜನರು ಜಿಎಸ್‌ಟಿಯ ಅರಿವು ಪಡೆದಿದ್ದಾರೆ.  ಮುಂದಿನ ವರ್ಷದ ವೇಳೆಗೆ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಜಿಎಸ್‌ಟಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಶ್ರೀನಿಧಿ ಗೋಲ್ಡ್‌ ಮಾಲೀಕ ಎಸ್.ಜಗನ್ನಾಥ ಶೆಟ್ಟಿ ಹೇಳಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !