ನಗರದಲ್ಲಿ 14ಕ್ಕೆ ಪಂಜಿನ ಮೆರವಣಿಗೆ

7
ದೆಹಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟ ಪ್ರಕರಣ

ನಗರದಲ್ಲಿ 14ಕ್ಕೆ ಪಂಜಿನ ಮೆರವಣಿಗೆ

Published:
Updated:

ಕೋಲಾರ: ‘ಸಂವಿಧಾನದ ಪ್ರತಿ ಸುಟ್ಟಿ ಹಾಕಿರುವ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಆ.14ರ ಸಂಜೆ 6.30ಕ್ಕೆ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಗೌರವಾಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶೋಷಿತ ದಲಿತ ಸಮುದಾಯದ ಮೇಲೆ ಕೇಂದ್ರವು ದೌರ್ಜನ್ಯ ನಡೆಸುತ್ತಿದೆ. ದಲಿತರ ಹಕ್ಕುಗಳನ್ನು ದಮನ ಮಾಡಲು ಸಂಚು ರೂಪಿಸಿದೆ’ ಎಂದು ದೂರಿದರು.

‘ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರತಿಯನ್ನು ಜಂತರ್ ಮಂತರ್‌ನಲ್ಲಿ ಯೂತ್ ಫಾರ್ ಇಕ್ವಾಲಿಟಿ ಮನುವಾದಿಗಳ ಪ್ರತಿಗಾಮಿ ಸಂಘಟನೆಯವರು ಸುಟ್ಟು ಹಾಕಿದ್ದು, ದಲಿತ ಮೀಸಲಾತಿ ವಿರೋಧಿಸಿ ಘೋಷಣೆ ಹಾಕಿದ್ದಾರೆ. ಈ ದುಷ್ಕೃತ್ಯ ಎಸಗಿರುವವರ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಬಂಧಿಸಿಲ್ಲ’ ಎಂದು ಆರೋಪಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಕೋಮುವಾದಿಗಳು ಆಟ್ಟಹಾಸ ಮೇರೆ ಮಿರಿದೆ. ಹಿಂದುತ್ವದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮತ್ತು ದಲಿತರ ಹತ್ಯೆ, ಶೋಷಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ತಳ ಸಮುದಾಯಗಳಿಗೆ ರಕ್ಷಣೆ ನೀಡುವಲ್ಲಿ ಕೇಂದ್ರ ವಿಫಲವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕೇಂದ್ರದ ಸಚಿವರೇ ಸಂವಿಧಾನ ಬದಲಿಸುವ, ಮೀಸಲಾತಿ ರದ್ದುಪಡಿಸುವ ವಿಷಯ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ, ಅಹಿಂದ ವರ್ಗಗಳ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ದಲಿತರು, ಕಾರ್ಮಿಕರು, ಮಹಿಳೆಯರ, ರೈತರ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಲು ಸಂಚು ರೂಪಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ಕಾರ್ಮಿಕ ಸಂಹಿತೆ: ‘ಕೇಂದ್ರವು ಬಂಡವಾಳಶಾಹಿಗಳ ಹಿತರಕ್ಷಣೆಗಾಗಿ 44 ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ, 4 ಕಾರ್ಮಿಕ ಸಂಹಿತೆ ರೂಪಿಸಲು ಹೊರಟಿದೆ. ವೇತನ ಸಂಬಂಧ ಸಂಸತ್ತಿನಲ್ಲಿ ಕಾರ್ಮಿಕ ಸಂಹಿತೆ ಮಸೂದೆ ಮಂಡಿಸಿದೆ. ಔದ್ಯೋಗಿಕ ಕಾಯ್ದೆಗೆ ತಿದ್ದುಪಡಿ ತಂದು ನಿಗದಿತ ಅವಧಿಯ ಉದ್ಯೋಗವನ್ನು ಎಲ್ಲಾ ಕ್ಷೇತ್ರಗಳಲ್ಲಿ ಜಾರಿಗೊಳಿಸಲು ಮಾಲೀಕರಿಗೆ ಮುಕ್ತ ಅವಕಾಶ ನೀಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ದೇಶದಲ್ಲಿ ಮನೆ ಸ್ವಚ್ಛತಾ ಕೆಲಸಗಾರರು, ಕಟ್ಟಡ ನಿರ್ಮಾಣ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಆಟೊ ಚಾಲಕರು, ಹಮಾಲಿಗಳು ಹಾಗೂ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯಿಲ್ಲ. ಈ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕೇಂದ್ರವು ಬಜೆಟ್‌ನಲ್ಲಿ ಅನುದಾನ ಮೊಟಕುಗೊಳಿಸಿದೆ. ಕಾರ್ಮಿಕರಿಗೆ ರಕ್ಷಣೆ ಸಿಗಬೇಕಾದರೆ ಹೋರಾಟ ಅನಿವಾರ್ಯ’ ಎಂದರು.

ನಾಚಿಕೆಗೇಡು: ‘ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕವಾದ ನಂತರ ಬಿಜೆಪಿಯವರಿಗೆ ಸ್ವಚ್ಛ ಭಾರತ್‌ ಪರಿಕಲ್ಪನೆ ಬಂದಿರುವುದು ನಾಚಿಕಗೇಡು. ಈ ಹಿಂದೆಯೂ ದಲಿತರೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಮರೆತಿದ್ದಾರೆ. ದಲಿತರ ಸಹಕಾರವಿಲ್ಲದೆ ದೇಶ ಸ್ವಚ್ಛ ಮಾಡಲು ಸಾಧ್ಯವೆ?’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಘಟನಾ ಸಂಚಾಲಕ ಟಿ.ವಿಜಯ್‌ಕುಮಾರ್ ಪ್ರಶ್ನಿಸಿದರು.

ಎಸ್ಎಫ್ಐ ರಾಜ್ಯ ಘಟಕದ ಅಧ್ಯಕ್ಷ ವಿ.ಅಂಬರೀಷ್, ಸಿಪಿಎಂ ಮುಖಂಡ ಟಿ.ಎಂ.ವೆಂಕಟೇಶ್, ಡಿಎಸ್ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಾಗೇಶ್, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಅಂಜನಪ್ಪ, ಕರ್ನಾಟಕ ಬಹುಜನ ಸಂಘದ ಅಧ್ಯಕ್ಷ ನಾಗರಾಜ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !