ಕೋಚಿಮುಲ್‌ ಎದುರು ರೈತ ಸಂಘ ಪೊರಕೆ ಚಳವಳಿ

7
ಯುಎಚ್‌ಟಿ ಹಾಲು ಮಾರಾಟ ಹಂಚಿಕೆಯಲ್ಲಿ ಅನ್ಯಾಯ: ಆರೋಪ

ಕೋಚಿಮುಲ್‌ ಎದುರು ರೈತ ಸಂಘ ಪೊರಕೆ ಚಳವಳಿ

Published:
Updated:
Deccan Herald

ಕೋಲಾರ: ಭಾರತೀಯ ಸೇನಾಪಡೆಗೆ ಯುಎಚ್‌ಟಿ ಹಾಲು ಪೂರೈಕೆ ಪ್ರಕ್ರಿಯೆಯಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಕೋಚಿಮುಲ್‌) ಅನ್ಯಾಯವಾಗಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಸೋಮವಾರ ಕೋಚಿಮುಲ್‌ ಕೇಂದ್ರ ಕಚೇರಿ ಎದುರು ಪೊರಕೆ ಚಳವಳಿ ನಡೆಸಿದರು.

‘ಕೋಚಿಮುಲ್‌ ಹಲವು ವರ್ಷಗಳಿಂದ ಸೇನಾಪಡೆಗೆ ಯುಎಚ್‌ಟಿ ಹಾಲು ಪೂರೈಸುತ್ತಿತ್ತು. ಆದರೆ, ರಾಜ್ಯ ಹಾಲು ಮಹಾಮಂಡಳವು (ಕೆಎಂಎಫ್‌) ಕೋಚಿಮುಲ್‌ ಪಾಲಿನ ಹಾಲು ಮಾರಾಟ ಕಸಿದುಕೊಂಡು ಜಿಲ್ಲೆಗೆ ದ್ರೋಹ ಬಗೆದಿದೆ’ ಎಂದು ಆರೋಪಿಸಿದ ಸದಸ್ಯರು ಸಚಿವ ಎಚ್‌.ಡಿ.ರೇವಣ್ಣರ ಪ್ರತಿಕೃತಿ ದಹಿಸಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಪೊರಕೆ ಏಟು ಕೊಟ್ಟು ಆಕ್ರೋಶ ವ್ಯಕ್ತಪಡಿಸಿದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಮೇಲ್ಮೈ ನೀರಿನ ಮೂಲವಿಲ್ಲ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬರ ಪರಿಸ್ಥಿತಿ ನಡುವೆಯೂ ಹೈನೋದ್ಯಮ ನಿರ್ವಹಣೆ ಮಾಡುತ್ತಿದ್ದಾರೆ. ಹೈನೋದ್ಯಮವು ರೈತರ ಬೆನ್ನೆಲುಬಾಗಿದೆ. ಸಚಿವ ರೇವಣ್ಣ ಅವರು ಜಿಲ್ಲೆಯ ಹಾಲು ಉತ್ಪಾದಕರನ್ನು ಬೀದಿಗೆ ತಳ್ಳಿ ಕೋಚಿಮುಲ್‌ ಮುಚ್ಚಿಸುವ ಹುನ್ನಾರ ಮಾಡಿದ್ದಾರೆ’ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.

‘ಕೆಎಂಎಫ್‌ ಸೇನಾಪಡೆಗೆ ವರ್ಷಕ್ಕೆ 80 ಲಕ್ಷ ಲೀಟರ್‌ ಯುಎಚ್‌ಟಿ ಹಾಲು ಪೂರೈಸುವ ಟೆಂಡರ್ ಪಡೆದಿದೆ. ರೇವಣ್ಣರ ಕೈಗೊಂಬೆಯಾಗಿರುವ ಕೆಎಂಎಫ್‌ ಆಡಳಿತ ಮಂಡಳಿಯು ಹಾಸನ ಜಿಲ್ಲಾ ಹಾಲು ಒಕ್ಕೂಟದಿಂದ ಸೇನಾಪಡೆಗೆ 40 ಲಕ್ಷ ಲೀಟರ್‌ ಯುಎಚ್‌ಟಿ ಹಾಲು ಪೂರೈಸಲು ಅವಕಾಶ ಮಾಡಿಕೊಟ್ಟಿದೆ’ ಎಂದು ಹೇಳಿದರು.

ಏಕಪಕ್ಷೀಯ ನಿರ್ಧಾರ: ‘ಕೋಚಿಮುಲ್‌ ವ್ಯಾಪ್ತಿಯ ಜಿಲ್ಲೆಗಳಲ್ಲಿ ಹಾಲಿನ ಉತ್ಪಾದನೆ ಗಣನೀಯವಾಗಿ ಹೆಚ್ಚಿದೆ. ಆದರೆ, ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆಯಿಲ್ಲ. ಹೀಗಾಗಿ ನಿತ್ಯವೂ ಸುಮಾರು 3.30 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಪ್ರತಿ ಲೀಟರ್‌ಗೆ ₹ 10 ನಷ್ಟವಾಗುತ್ತಿದೆ. ಕೆಎಂಎಫ್‌ ಆಡಳಿತ ಮಂಡಳಿಯ ಏಕಪಕ್ಷೀಯ ನಿರ್ಧಾರದಿಂದ ಕೋಚಿಮುಲ್‌ಗೆ ವರ್ಷಕ್ಕೆ ₹ 70 ಕೋಟಿ ನಷ್ಟವಾಗಲಿದೆ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ಯುಎಚ್‌ಟಿ ಹಾಲಿನ ಬೇಡಿಕೆ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೂ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳು ತುಟಿ ಬಿಚ್ಚದಿರುವುದು ನಾಚಿಕೆಗೇಡು. ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ರೇವಣ್ಣ ಅವರಿಗೆ ಜಿಲ್ಲೆಯ ರೈತರ ಕಷ್ಟದ ಅರಿವಿಲ್ಲ. ರೇವಣ್ಣ ರಾಜಕೀಯ ಲಾಭಕ್ಕೆ ಜಿಲ್ಲೆಯ ರೈತರ ಹಿತ ಬಲಿ ಕೊಟ್ಟಿದ್ದಾರೆ’ ಎಂದು ದೂರಿದರು.

ನ್ಯಾಯ ಒದಗಿಸಿ: ‘ಹಾಲಿನ ಬೇಡಿಕೆ ಹಂಚಿಕೆ ಸಂಬಂಧ ಮತ್ತೊಮ್ಮೆ ಪರಿಶೀಲನೆ ನಡೆಸಿ ಜಿಲ್ಲೆಗೆ ನ್ಯಾಯ ಒದಗಿಸಬೇಕು. ರೇವಣ್ಣರ ಸರ್ವಾಧಿಕಾರಿ ಧೋರಣೆ ಖಂಡಿಸಿ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳು ರಾಜೀನಾಮೆ ನೀಡಬೇಕು. ಹಾಲು ಖರೀದಿ ದರವನ್ನು ಲೀಟರ್‌ಗೆ ₹ 30 ನಿಗದಿಪಡಿಸಬೇಕು. ಸಬ್ಸಿಡಿ ದರದಲ್ಲಿ ಪಶು ಆಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಸದಸ್ಯರಾದ ಮಂಜುನಾಥ್, ಪ್ರಭಾಕರ್‌, ಆನಂದರೆಡ್ಡಿ, ಹರಿಕುಮಾರ್, ಮಂಜುನಾಥ್, ಗಣೇಶ್, ವೆಂಕಟೇಶ್ ಪಾಲ್ಗೊಂಡಿದ್ದರು.

* 80 ಲಕ್ಷ ಲೀಟರ್‌ ಯುಎಚ್‌ಟಿ ಹಾಲಿನ ಟೆಂಡರ್
* ಹಾಸನ ಒಕ್ಕೂಟಕ್ಕೆ 40 ಲಕ್ಷ ಲೀಟರ್‌ ಹಂಚಿಕೆ
* ದಿನಕ್ಕೆ 3.30 ಲಕ್ಷ ಲೀಟರ್ ಹಾಲು ಪುಡಿಯಾಗಿ ಪರಿವರ್ತನೆ
* ಕೋಚಿಮುಲ್‌ಗೆ ವರ್ಷಕ್ಕೆ ₹ 70 ಕೋಟಿ ನಷ್ಟ

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !