ನೂತನ ಪದಾಧಿಕಾರಿಗಳ ಪದಗ್ರಹಣ

7
ಚಿಕ್ಕಬಳ್ಳಾಪುರ ಲಯನ್ಸ್ ಕ್ಲಬ್‌ನ 2018-19 ನೇ ಸಾಲಿಗೆ ಆಯ್ಕೆ

ನೂತನ ಪದಾಧಿಕಾರಿಗಳ ಪದಗ್ರಹಣ

Published:
Updated:
Deccan Herald

ಚಿಕ್ಕಬಳ್ಳಾಪುರ: ನಗರ ಹೊರವಲಯದ ವಿಷ್ಣುಪ್ರಿಯ ಕಾಲೇಜಿನಲ್ಲಿ ಬುಧವಾರ ಚಿಕ್ಕಬಳ್ಳಾಪುರ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ಕ್ಲಬ್‌ನ 2018-19 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ವಿಷ್ಣುಪ್ರಿಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈ.ಎನ್.ರಾಮಚಂದ್ರರೆಡ್ಡಿ, ಕಾರ್ಯದರ್ಶಿಯಾಗಿ ಎನ್.ಬ್ರಹ್ಮಚಾರಿ, ಖಜಾಂಚಿಯಾಗಿ ಟಿ.ಸಿ.ಲಕ್ಷ್ಮಣ್, ಉಪಾಧ್ಯಕ್ಷರಾಗಿ ಭದ್ರಾಚಲಂ, ಪ್ರಶಾಂತ್, ಕೆ.ಕೇಶವರೆಡ್ಡಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ಜಿಲ್ಲಾ ಗರ್ವನರ್ ದೀಪಕ್ ಸುಮನ್, ‘ವಿದ್ಯಾರ್ಥಿ ಹಂತದಿಂದಲೇ ದೇಶಪ್ರೇಮ ಮತ್ತು ಸೇವಾ ಮನೋಭಾವ ಮೈಗೂಡಿಸಿಕೊಂಡಾಗ ಮಾತ್ರ ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ನಿಜವಾದ ಅರ್ಥ ಬರುತ್ತದೆ’ ಎಂದು ಹೇಳಿದರು.

‘ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನದಿಂದಾಗಿ ನಮಗೆ ಸ್ವತಂತ್ರ್ಯ ದೊರೆಕಿದೆ. ಅದನ್ನು ಸ್ವೇಚ್ಛೆಯಾಗಿ ಬಳಸಿಕೊಳ್ಳದೆ ಅವರ ಮೌಲ್ಯ ಅರಿತು ಸ್ವಾತಂತ್ರ್ಯವನ್ನು ಉಳಿಸುವುದು ನಮ್ಮೆಲ್ಲರ ಮೊದಲ ಕರ್ತವ್ಯವಾಗಬೇಕು. ಸಮಾಜ ಸೇವಾಕಾರ್ಯಗಳನ್ನು ಮಾಡುವ ಮೂಲಕ ಪ್ರಾಮಾಣಿಕವಾಗಿ ದೇಶಸೇವೆ ಮಾಡುವ ಕಾರ್ಯವನ್ನು ಲಯನ್ಸ್ ಸಂಸ್ಥೆ ಮಾಡುತ್ತಾ ಬಂದಿದೆ’ ಎಂದು ತಿಳಿಸಿದರು.

‘102 ವರ್ಷಗಳ ಇತಿಹಾಸವಿರುವ ಲಯನ್ಸ್ ಸಂಸ್ಥೆ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು, ನೇತ್ರದಾನ ಶಿಬಿರಗಳು, ಅಂಗಾಂಗ ಮತ್ತು ದೇಹದಾನ ಶಿಬಿರಗಳನ್ನು ಮಾತ್ರವಲ್ಲದೆ ಸಸಿ ನೆಡುವುದು, ಪರಿಸರ ಸಂರಕ್ಷಣೆ. ಪ್ರತಿಭಾ ಪುರಸ್ಕಾರ ಹಾಗೂ ಬಡವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವನ್ನು ನೀಡುತ್ತಾ ಬಂದಿದೆ’ ಎಂದರು.

ಲಯನ್ಸ್ ಸಂಸ್ಥೆಗೆ ನೂತನ ಸದಸ್ಯರಾಗಿ ಬಿ.ಮಹೇಶ್, ವಿಜಯ ಬ್ಯಾಂಕ್ ಸ್ಥಳೀಯ ಶಾಖಾ ವ್ಯವಸ್ಥಾಪಕ ಅಬ್ದುಲ್ ರಹೀಂ, ಎಸ್‌ಬಿಐ ಜಿಲ್ಲಾಡಳಿತ ಭವನ ಶಾಖೆ ವ್ಯವಸ್ಥಾಪಕ ಭಾರ್ಗವ್ ದಾಸ್, ಬಿ.ಸತೀಶ್ ಹಾಗೂ ವಿಷ್ಣುಪ್ರಿಯ ಪಿ.ಯು.ಕಾಲೇಜಿನ ಪ್ರಾಂಶುಪಾಲ ಎನ್.ಚಂದ್ರಶೇಖರ್ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ನೂತನ ಸದಸ್ಯರಿಗೆ ಲಯನ್ಸ್ ಸಂಸ್ಥೆಯ ವಿಭಾಗೀಯ ಅಧ್ಯಕ್ಷ ಪ್ರಸನ್ನಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಯೋಜನೆಯಡಿ ಕಾರ್ಯಕ್ರಮದಲ್ಲಿ ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು. ಕಾಲೇಜಿನ ಹಳೆಯ ವಿದ್ಯಾರ್ಥಿ ಹೂನೇಗಲ್ ಗ್ರಾಮದ ಎಸ್.ಪ್ರತಿಭಾ ಅವರನ್ನು ಸನ್ಮಾನಿಸಲಾಯಿತು.

ಲಯನ್ಸ್ ಸಂಸ್ಥೆಯ ಹಿರಿಯ ಸದಸ್ಯರಾದ ಲಯನ್ ಡಾ.ಕೆ.ಪಿ.ಶ್ರೀನಿವಾಸಮೂರ್ತಿ, ಮಾಜಿ ಅಧ್ಯಕ್ಷ ಮಲ್ಲಣ್ಣ, ಮುಖಂಡರಾದ ಭದ್ರಾಚಲಂ, ಕೆ.ಎಚ್.ವೆಂಕಟಪ್ಪ, ಹಿರಿಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಸುನಿಲ್, ವಿಷ್ಣುಪ್ರಿಯಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಶ್ಯಾಮಲಾ ಹಾಗೂ ಬಿ.ಬಿ.ಎಂ.ಕಾಲೇಜಿನ ಪ್ರಾಂಶುಪಾಲೆ ಸಿಂಧು ಹಾಜರಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !