ಆರೋಪಿಗಳ ಗಡಿಪಾರಿಗೆ ಒತ್ತಾಯಿಸಿ ಧರಣಿ

7
ಸಂವಿಧಾನದ ಪ್ರತಿ ಸುಟ್ಟ ಪ್ರಕರಣಕ್ಕೆ ಖಂಡನೆ: ರಸ್ತೆ ತಡೆ

ಆರೋಪಿಗಳ ಗಡಿಪಾರಿಗೆ ಒತ್ತಾಯಿಸಿ ಧರಣಿ

Published:
Updated:
Deccan Herald

ಕೋಲಾರ: ಸಂವಿಧಾನದ ಪ್ರತಿ ಸುಟ್ಟು ಅಂಬೇಡ್ಕರ್ ವಿರುದ್ಧ ಘೋಷಣೆ ಕೂಗಿದ ಪ್ರಕರಣ ಖಂಡಿಸಿ ದಲಿತ ಮತ್ತು ಅಲ್ಪಸಂಖ್ಯಾತರ ಒಕ್ಕೂಟದ ಸದಸ್ಯರು ಇಲ್ಲಿ ಶನಿವಾರ ಧರಣಿ ನಡೆಸಿದರು.

ಕ್ಲಾಕ್‌ ಟವರ್‌ನಿಂದ ಮೆಕ್ಕೆ ವೃತ್ತದವರೆಗೆ ಮೆರವಣಿಗೆ ನಡೆಸಿದ ಸದಸ್ಯರು ಕೆಲ ಕಾಲ ರಸ್ತೆ ತಡೆ ಮಾಡಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ದೇಶದಲ್ಲಿ ದಲಿತರು, ಹಿಂದುಳಿದ ವರ್ಗಗಳು ಹಾಗೂ ಮತೀಯ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಗಿದೆ. ಕೇಂದ್ರದ ದುರಾಡಳಿತದಿಂದ ದಲಿತರು ಜೀವ ಭಯದಲ್ಲಿ ಬದುಕುವಂತಾಗಿದೆ. ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಬಿಜೆಪಿ ಸರ್ಕಾರವೇ ದಲಿತರ ಮೇಲಿನ ದಬ್ಬಾಳಿಕೆಗೆ ಕುಮ್ಮುಕ್ಕು ನೀಡುತ್ತಿದೆ. ದಲಿತರ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ’ ಎಂದು ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಜಮೀರ್ ಅಹಮ್ಮದ್‌ ಕಳವಳ ವ್ಯಕ್ತಪಡಿಸಿದರು.

‘ದೇಶದಲ್ಲಿ ಶಾಂತಿ ಕದಡುವ ದುರುದ್ದೇಶದಿಂದ ಕೇಂದ್ರ ಸರ್ಕಾರವೇ ಯೂತ್‌ ಫಾರ್‌ ಇಕ್ವಾಲಿಟಿ ಸಂಘಟನೆ ಸದಸ್ಯರನ್ನು ಎತ್ತಿಕಟ್ಟಿ ಈ ದುಷ್ಕೃತ್ಯ ಮಾಡಿಸಿದೆ. ಅಲ್ಲದೇ, ಪೊಲೀಸರ ಮೇಲೆ ಒತ್ತಡ ತಂದು ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದೆ’ ಎಂದು ಆರೋಪಿಸಿದರು.

ಕೋಮುಶಕ್ತಿಗಳ ಕೈಗೊಂಬೆ: ‘ಅಂಬೇಡ್ಕರ್ ರಚಿಸಿದ ಸಂವಿಧಾನದ ತಳಹದಿಯ ಮೇಲೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಸಂವಿಧಾನದ ಅಡಿಯಲ್ಲೇ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಕೋಮುಶಕ್ತಿಗಳ ಕೈಗೊಂಬೆಯಾಗಿದ್ದಾರೆ. ಕೇಂದ್ರ ಸರ್ಕಾರದ ಭಾಗವಾಗಿರುವ ಸಚಿವರು ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿದ್ದಾರೆ. ಕೋಮುವಾದಿ ಬಿಜೆಪಿಯು ದಲಿತರನ್ನು ಮೂರನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತಿದೆ’ ಎಂದು ಧರಣಿನಿರತರು ಕಿಡಿಕಾರಿದರು.

‘ಕೇಂದ್ರವೇ ಯೋಜಿತ ರೀತಿಯಲ್ಲಿ ಸಂಚು ರೂಪಿಸಿ ಸಂವಿಧಾನದ ಪ್ರತಿಗೆ ಬೆಂಕಿ ಹಚ್ಚಿಸುವ ಕೆಲಸ ಮಾಡಿಸಿದೆ. ಆ ಮೂಲಕ ದಲಿತ ಸಮುದಾಯವನ್ನು ಅವಮಾನಿಸಿದೆ. ರಾಜಕೀಯ ಲಾಭಕ್ಕೆ ದಲಿತರ ಹಕ್ಕುಗಳನ್ನು ಹತ್ತಿಕ್ಕುವ ಹುನ್ನಾರ ಮಾಡಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಕೋಮುಶಕ್ತಿಗಳ ಅಟ್ಟಹಾಸ ಮೇರೆ ಮೀರಿದೆ’ ಎಂದು ದೂರಿದರು.

ಗಡಿಪಾರು ಮಾಡಬೇಕು: ‘ಸಂವಿಧಾನದ ಪ್ರತಿ ಸುಟ್ಟ ಪ್ರಕರಣದ ಆರೋಪಿಗಳನ್ನು ಬಂಧಿಸಿ ದೇಶದಿಂದ ಗಡಿಪಾರು ಮಾಡಬೇಕು. ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯದೆ ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ದಲಿತರಿಗೆ ರಕ್ಷಣೆ ನೀಡಬೇಕು. ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ಸದಸ್ಯರಾದ ನಾರಾಯಣಸ್ವಾಮಿ, ರಾಜ್‌ಕುಮಾರ್, ಪ್ರಕಾಶ್, ಎಚ್.ಎನ್.ಮೂರ್ತಿ, ಆಸಿಫ್‌, ಸೋಮಶೇಖರ್, ಮಂಜುಳಾ, ವೆಂಕಟೇಶ್, ಕೃಷ್ಣ, ನಾಗೇಶ್ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !