ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ: ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ

7

ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ: ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ

Published:
Updated:
Deccan Herald

ಬಾಗಲಕೋಟೆ: ‘ಸಮ್ಮಿಶ್ರ ಸರ್ಕಾರಕ್ಕೆ ದುಡ್ಡು ಹೊಡೆಯುವುದೊಂದೇ ಕೆಲಸ. ಜನರ ಅಭಿವೃದ್ಧಿಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿ ಇಲ್ಲ’ ಎಂದು ಆರೋಪಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ವಿಧಾನಪರಿಷತ್‌ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೂಳಪ್ಪ ಶೆಟಗಾರಗೆ ಮತ ಹಾಕುವಂತೆ ಮನವಿ ಮಾಡಿದರು.

ಇಲ್ಲಿನ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಭಾನುವಾರ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಮುಖಮಂತ್ರಿ ಕುಮಾರಸ್ವಾಮಿಗೆ ರಾಜ್ಯದ ಜನತೆಯ ಬಗ್ಗೆ ಕಾಳಜಿ ಇಲ್ಲ. ಜನರು ಬರಗಾಲದಿಂದ ಸಾಯುತ್ತಿದ್ದಾರೆ ಎಂಬ ಅರಿವು ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಾಂಗ್ಲಾ ದೇಶದಿಂದ ನುಸುಳಿ ಬಂದು ದೇಶದಲ್ಲಿ ಮತಚಲಾಯಿಸುತ್ತಿದ್ದಾರೆ. ದೇಶದಲ್ಲಿ ನಿಜವಾಗಿ ತೆರಿಗೆ ಕಟ್ಟುವವರಿಗೆ ಸೌಲಭ್ಯಗಳಿಲ್ಲ, ಎಲ್ಲಿಂದಲೋ ಬಂದವರಿಗೆ ಹೆಚ್ಚಿನ ಮೀಸಲಾತಿ, ಸೌಲಭ್ಯ ನೀಡಿದ್ದು ಕಾಂಗ್ರೆಸ್‌. ಇಂತಹ ಪಕ್ಷಕ್ಕೆ ಮತ ನೀಡಬಾರದು’ ಎಂದು ಮನವಿ ಮಾಡಿದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ‘ವಿಜಯಪುರ, ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪಕ್ಷದ ಹೆಚ್ಚಿನ ಜನಪ್ರತಿನಿಧಿಗಳಿದ್ದಾರೆ. ಬಿಜೆಪಿ ಅಭ್ಯರ್ಥಿ ಶೆಟಗಾರ ಗೆಲುವು ನಿಶ್ಚಿತ. ಎರಡು ಜಿಲ್ಲೆಗಳ 15 ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಶಾಸಕರು ಅಭಿವೃದ್ಧಿ ಕಾರ್ಯ ಮಾಡಿದ್ದು, ವಿಧಾನ ಪರಿಷತ್‌ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ’ ಎಂದರು.

ಗೂಳಪ್ಪ ಶೆಟಗಾರ್ ಮಾತನಾಡಿ, ‘ಕಾಂಗ್ರೆಸ್‌ ಪಕ್ಷದ ಜೊತೆ ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ. ಕಾಂಗ್ರೆಸ್‌ ಪಕ್ಷದವರಿಂದ ಬಿಜೆಪಿ ಮುಖಂಡರ ಖರೀದಿ ಸಾಧ್ಯವಿಲ್ಲ. ಉಪ ಚುನಾವಣೆಯಲ್ಲಿ ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಮುರುಗೇಶ ನಿರಾಣಿ, ದೊಡ್ಡನಗೌಡ ಪಾಟೀಲ, ಗೋವಿಂದ ಕಾರಜೋಳ, ಹಾಗೂ ಸಿದ್ದು ಸವದಿ, ಮಾಜಿ ಶಾಸಕರಾದ ಲಕ್ಷ್ಮಣ ಸವದಿ, ಎಂ.ಕೆ.ಪಟ್ಟಣಶೆಟ್ಟಿ, ಪಿ.ಎಚ್.ಪೂಜಾರ, ನಾರಾಯಣಸಾ ಭಾಂಡಗೆ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !