ಮಾರುಕಟ್ಟೆ ಸ್ಥಾಪನೆಗೆ ಭೂಮಿ ಕೊರತೆ: ಎಪಿಎಂಸಿ ಅಧ್ಯಕ್ಷ

7
ಭೂಮಿ ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ಎಪಿಎಂಸಿ ಸದಸ್ಯರ ಆಗ್ರಹ, ಸರ್ಕಾರಿ ಬೆಲೆಯಲ್ಲಿ ಕೊಟ್ಟರೆ ಮಾರುಕಟ್ಟೆಗೆ ಭೂಮಿ ಖರೀದಿಸಲು ಸಿದ್ಧ – ಅಧ್ಯಕ್ಷ

ಮಾರುಕಟ್ಟೆ ಸ್ಥಾಪನೆಗೆ ಭೂಮಿ ಕೊರತೆ: ಎಪಿಎಂಸಿ ಅಧ್ಯಕ್ಷ

Published:
Updated:

ಚಿಕ್ಕಬಳ್ಳಾಪುರ: ‘ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಶಿಡ್ಲಘಟ್ಟದಲ್ಲಿ ಉಪ ಕೃಷಿ ಮಾರುಕಟ್ಟೆ ಸ್ಥಾಪಿಸಲು ಸಿದ್ಧವಿದೆ. ಆದರೆ ಮಾರುಕಟ್ಟೆಗೆ ಭೂಮಿ ಲಭ್ಯವಿಲ್ಲದ ಕಾರಣ ಆ ಯೋಜನೆ ನನೆಗುದಿಗೆ ಬಿದ್ದಿದೆ’ ಎಂದು ಎಪಿಎಂಸಿ ಅಧ್ಯಕ್ಷ ಎಚ್.ವಿ.ಗೋವಿಂದಸ್ವಾಮಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿಡ್ಲಘಟ್ಟದಲ್ಲಿ ಉಪ ಕೃಷಿ ಮಾರುಕಟ್ಟೆ ಸ್ಥಾಪನೆಗೆ ಭೂಮಿ ಮಂಜೂರು ಮಾಡಿ ಎಂದು ಕಳೆದ ವರ್ಷ ಫೆ.21ರಂದು ಉಪ ವಿಭಾಗಾಧಿಕಾರಿ ಅವರಿಗೆ ಪತ್ರ ಬರೆಯಲಾಗಿದೆ. ಆದರೆ ಈವರೆಗೆ ಭೂಮಿ ದೊರೆತಿಲ್ಲ. ಉಪ ಮಾರುಕಟ್ಟೆ ಅಭಿವೃದ್ದಿಗೆ ಹಣದ ಕೊರತೆ ಇಲ್ಲ. ಭೂಮಿ ಕೊರತೆ ಇದೆ’ ಎಂದು ಹೇಳಿದರು.

‘ರೈತರ ಕಲ್ಯಾಣಕ್ಕಾಗಿ ಯಾರು ಬೇಕಾದರೂ ಹೋರಾಟ ಮಾಡಲಿ ಚಿಂತೆಯಿಲ್ಲ. ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇರುವುದೇ ರೈತರ ಕಲ್ಯಾಣಕ್ಕಾಗಿ ಎಂಬುದನ್ನು ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕಿದೆ. ಸರ್ಕಾರಿ ಬೆಲೆಯಲ್ಲಿ ಯಾರಾದರೂ ಭೂಮಿ ಮಾರಾಟ ಮಾಡಲು ಮುಂದೆ ಬಂದರೆ ನಾವು ಮಾರುಕಟ್ಟೆ ಸ್ಥಳಕ್ಕಾಗಿ ಸುಮಾರು೩೦ ಎಕರೆ ಭೂಮಿ ಖರೀದಿಸಲು ಸಿದ್ಧರಿದ್ದೇವೆ’ ಎಂದರು.

ಸದಸ್ಯ ಮುರುಳಿ ಮಾತನಾಡಿ, ‘ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಬಳಿ ಇರುವ ಸರ್ವೇ ನಂ. ೧೧೭ರಲ್ಲಿ ೩೩ ಎಕರೆ ಜಮೀನು ಇದೆ. ಅದರಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣಕ್ಕಾಗಿ ನಾಲ್ಕು ಎಕರೆ ಮಂಜೂರು ಮಾಡಲಾಗಿದೆ. ಉಳಿದ ಜಮೀನನ್ನು ಜಿಲ್ಲಾಡಳಿತ ಉಪ ಮಾರುಕಟ್ಟೆ ಅಭಿವೃದ್ಧಿಗೆ ನೀಡಲಿ. ಉಚಿತವಾಗಿ ಭೂಮಿ ನೀಡಲು ಸಾಧ್ಯವಿಲ್ಲದಿದ್ದರೆ ಖರೀದಿಗಾದರೂ ನೀಡಲಿ’ ಎಂದು ತಿಳಿಸಿದರು.

ಸದಸ್ಯ ದೊಗರನಾಯಕನಹಳ್ಳಿ ವೆಂಕಟೇಶ್ ಮಾತನಾಡಿ, ‘ಶಿಡ್ಲಘಟ್ಟದ ಕೃಷಿ ಉಪ ಮಾರುಕಟ್ಟೆಗೆ ಶಾಶ್ವತವಾಗಿ ಭೂಮಿ ಮಂಜೂರು ಆಗುವವರೆಗೆ ನಗರ ಸಭೆ ವಾರದ ಸಂತೆ ಮೈದಾನವನ್ನು ಸಮಿತಿ ವಶಕ್ಕೆ ನೀಡಬೇಕು.ಪಟ್ಟಣ ಪಂಚಾಯಿತಿ ಇದ್ದಾಗ ಈ ಜಾಗವನ್ನು ಎಪಿಎಂಸಿ ವಶಕ್ಕೆ ನೀಡಿದ್ದು ನಂತರ ದಿನಗಳಲ್ಲಿ ನಗರಸಭೆ ತನ್ನ ವಶಕ್ಕೆ ಪಡೆದಿದೆ. ಇದನ್ನು ತಾತ್ಕಾಲಿಕವಾಗಿಯಾದರೂ ಸಮಿತಿಗೆ ನೀಡಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಲಿ’ ಎಂದು ಹೇಳಿದರು.

‘ದಿಬ್ಬೂರಹಳ್ಳಿ ಭಾಗದಲ್ಲಿ ಹೆಚ್ಚಿನ ರೈತರು ಹೂವು ಹಣ್ಣು ತರಕಾರಿ ಬೆಳೆಯುತ್ತಾರೆ. ಆದ್ದರಿಂದ ಜಿಲ್ಲಾಡಳಿತ ಆ ಭಾಗದಲ್ಲಿ ಮಾರುಕಟ್ಟೆಗೆ ಭೂಮಿ ಒದಗಿಸಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ’ ಎಂದರು. ಸದಸ್ಯರಾದ ಬೆಳ್ಳೂಟಿ ವೆಂಕಟೇಶ್, ಕೋಟಗಲ್ ಹನುಮಪ್ಪ, ಬಳುವನಹಳ್ಳಿ ನಾರಾಯಣಸ್ವಾಮಿ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !