ತೈಲೋತ್ಪನ್ನ ಬೆಲೆ ಏರಿಕೆ: 10ಕ್ಕೆ ಭಾರತ ಬಂದ್‌ಗೆ ಕಾಂಗ್ರೆಸ್‌ ಕರೆ

7
ಬಂದ್‌ ಬೆಂಬಲಿಸುವಂತೆ ಕಾಂಗ್ರೆಸ್‌ ಮುಖಂಡರ ಮನವಿ

ತೈಲೋತ್ಪನ್ನ ಬೆಲೆ ಏರಿಕೆ: 10ಕ್ಕೆ ಭಾರತ ಬಂದ್‌ಗೆ ಕಾಂಗ್ರೆಸ್‌ ಕರೆ

Published:
Updated:

ಕೋಲಾರ: ‘ತೈಲೋತ್ಪನ್ನ ಬೆಲೆ ಏರಿಕೆ ಖಂಡಿಸಿ ಸೆ.10ರಂದು ಪಕ್ಷದಿಂದ ಭಾರತ ಬಂದ್‌ಗೆ ಕರೆ ನೀಡಿದ್ದು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ನೀಡಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮನವಿ ಮಾಡಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರವು ತೈಲೋತ್ಪನ್ನಗಳ ಬೆಲೆ ಏರಿಕೆ ಮಾಡಿ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ’ ಎಂದು ಟೀಕಿಸಿದರು.

‘ಮೋದಿ ಅವರು ಲೋಕಸಭಾ ಚುನಾವಣೆಗೂ ಮುನ್ನ ಕೊಟ್ಟ ಆಶ್ವಾಸನೆಗಳು ಹುಸಿಯಾಗಿವೆ. ಅವರು ಅವೈಜ್ಞಾನಿಕ ಆರ್ಥಿಕ ಸಲಹೆ ನೀಡುವ ತಜ್ಞರನ್ನು ಜತೆಗಿಟ್ಟುಕೊಂಡು ದೇಶದ ಸಂಪತ್ತು ಲೂಟಿ ಮಾಡುತ್ತಿದ್ದಾರೆ. ಬ್ಯಾಂಕ್‌ಗಳಿಗೆ ವಂಚಿಸಿ ಕೋಟಿಗಟ್ಟಲೆ ಹಣದೊಂದಿಗೆ ವಿದೇಶಕ್ಕೆ ಪರಾರಿಯಾಗಿರುವ ಬಂಡವಾಳಶಾಹಿಗಳನ್ನು ಮೋದಿ ರಕ್ಷಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಸಂಕಷ್ಟಕ್ಕೆ ದೂಡಿದೆ: ‘ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಕೇಂದ್ರವು ಹೆಚ್ಚಿನ ತೆರಿಗೆ ವಿಧಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ. ಪೆಟ್ರೋಲ್‌ ಬೆಲೆ ಲೀಟರ್‌ಗೆ ₹ 79.51 ಹಾಗೂ ಡೀಸೆಲ್ ₹ 71.55ಕ್ಕೆ ತಲುಪಿದ್ದು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತೈಲೋತ್ಪನ್ನಗಳ ಬೆಲೆ ಶೇ 16.06ರಷ್ಟು ಏರಿಕೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಡುಗೆ ಅನಿಲ ಸಿಲಿಂಡರ್‌ ಬೆಲೆ ನಾಲ್ಕೂವರೆ ವರ್ಷದಲ್ಲಿ ₹ 414ರಿಂದ ₹ 800ಕ್ಕೆ ಏರಿಕೆಯಾಗಿದೆ. ಕೇಂದ್ರದ ಜನವಿರೋಧಿ ನೀತಿ ವಿರುದ್ಧ ಹೋರಾಟ ನಡೆಸದಿದ್ದರೆ ಮೋದಿ ಮತ್ತು ಬಿಜೆಪಿ ಮುಖಂಡರನ್ನು ಜನರನ್ನು ದೇಶ ಬಿಟ್ಟು ಓಡಿಸುವ ದಿನಗಳು ದೂರವಿಲ್ಲ’ ಎಂದು ವ್ಯಂಗ್ಯವಾಡಿದರು.

ನಿರುದ್ಯೋಗ ಸಮಸ್ಯೆ: ‘ಮೋದಿ ವಿದೇಶದಲ್ಲಿರುವ ಕಪ್ಪು ಹಣ ದೇಶಕ್ಕೆ ತರುವ ನೆಪ ಹೇಳಿ ನೋಟು ಅಮಾನ್ಯೀಕರಣಗೊಳಿಸಿ ಅರ್ಥ ವ್ಯವಸ್ಥೆ ಬುಡಮೇಲು ಮಾಡಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ಜನರ ಮೇಲೆ ತೆರಿಗೆ ಭಾರ ಹೆಚ್ಚಿದೆ. ಕೇಂದ್ರವು ಉದ್ಯೋಗಾವಕಾಶ ಸೃಷ್ಟಿಸುವ ಬದಲು ನಿರುದ್ಯೋಗ ಸಮಸ್ಯೆ ಹೆಚ್ಚಿಸಿದೆ’ ಎಂದು ದೂರಿದರು.

‘ಬಿಜೆಪಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಬಂದ್‌ಗೆ ಕರೆಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು. ಒತ್ತಾಯ ಪೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿಸುವುದಿಲ್ಲ. ಸೈಕಲ್, ಎತ್ತಿನ ಬಂಡಿ ಜಾಥಾ ನಡೆಸಿ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ’ ಎಂದು ವಿವರಿಸಿದರು.

ಮಾಜಿ ಸಚಿವ ಕೆ.ಎ.ನಿಸಾರ್‌ ಅಹಮ್ಮದ್‌, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ವೇಮಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್‌ಶಂಕರ್, ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !