ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬರ ಎದುರಿಸಲು ಎಲ್ಲರೂ ಸನ್ನದ್ಧರಾಗಲು ಸೂಚನೆ

7
ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಅಧ್ಯಕ್ಷ ಎಚ್‌.ವಿ.ಮಂಜುನಾಥ್ ಸೂಚನೆ, ನರೇಗಾ ಅಡಿ ಕೆಲಸ ಹೆಚ್ಚಿಸಲು ಸಲಹೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬರ ಎದುರಿಸಲು ಎಲ್ಲರೂ ಸನ್ನದ್ಧರಾಗಲು ಸೂಚನೆ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಈ ವರ್ಷವೂ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗಲಿವೆ. ಆದ್ದರಿಂದ ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಸಮರೋಪಾದಿಯಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಕೊರತೆಯಾಗಿದೆ. ಬರ ಅಧಿಕೃತವಾಗಿ ಘೋಷಣೆಯಾಗುವುದಷ್ಟೇ ಬಾಕಿ ಇದೆ. ಆದ್ದರಿಂದ ಜನರಿಗೆ ಉದ್ಯೋಗಾವಕಾಶಗಳನ್ನು ನೀಡುವಂತಹ ಯೋಜನೆಗಳನ್ನು ಆದ್ಯತೆ ಮೆರೆಗೆ ಕೈಗೆತ್ತಿಕೊಳ್ಳಬೇಕು’ ಎಂದು ತಿಳಿಸಿದರು.

‘ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ರೈತರ ಗ್ರಾಮ ಸಭೆ ಕಡ್ಡಾಯವಾಗಿ ನಡೆಸಬೇಕು. ರೈತರು, ಕೂಲಿಕಾರರು ವಲಸೆ ಹೋಗಬಾರದು. ಅದಕ್ಕಾಗಿ ನರೇಗಾದಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಬೇಕು. ಬರ ಘೋಷಣೆಯಾದರೆ ಜನರಿಗೆ ಕೂಲಿ ಕೆಲಸ ಕೊಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತದೆ’ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ಅವರಿಂದ ಮಳೆ, ಬಿತ್ತನೆ, ಬೆಳೆ ವಿಮೆ ವಿವರ ಪಡೆದ ಅಧ್ಯಕ್ಷರು, ‘ಕಳೆದ ವರ್ಷ ಜಿಲ್ಲೆಯಲ್ಲಿ 800 ರೈತರಿಗೆ ಬೆಳೆ ವಿಮೆ ಪರಿಹಾರ ದೊರೆತಿಲ್ಲ ಎನ್ನುವ ದೂರಿದೆ. ಆದ್ದರಿಂದ ಈ ವರ್ಷ ಕೂಡ ಅಂತಹ ಸಮಸ್ಯೆಯಾಗುವುದು ಬೇಡ. ಅದಕ್ಕಾಗಿ ಜಿಲ್ಲಾಧಿಕಾರಿ, ಸಿಇಒ ಮತ್ತು ವಿಮಾ ಕಂಪೆನಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆಗಳಿದ್ದರೆ ಮೊದಲೇ ಬಗೆಹರಿಸಿಕೊಳ್ಳಿ’ ಎಂದು ಸೂಚನೆ ನೀಡಿದರು.

ರೇಷ್ಮೆ ಇಲಾಖೆ ಅಧಿಕಾರಿಯನ್ನು ಕುರಿತು, ‘ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಗೃಹದಂತಹ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ನರೇಗಾ ಕಾಮಗಾರಿ ಅಡಿ ಎಲ್ಲ ತಾಲ್ಲೂಕುಗಳಲ್ಲಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು’ ಎಂದರು.

‘ರೀಲರ್‌ಗಳು ಗೂಡಿನಿಂದ ದಾರ ತೆಗೆದ ನಂತರ ಉಳಿಯುವ ಪ್ಯೂಪಾ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಹೀಗಾಗಿ ದುರ್ವಾಸನೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರುಗಳು ಬರುತ್ತಿವೆ. ಆದ್ದರಿಂದ ಶಿಡ್ಲಘಟ್ಟ ನಗರಸಭೆ ಆಯುಕ್ತರು, ತಾಲ್ಲೂಕು ಪಂಚಾಯಿತಿ ಇಒ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಸಭೆ ಕರೆದು ರೀಲರ್‌ಗಳಿಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ತಾಕೀತು ಮಾಡಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ ಅವರನ್ನು ಕುರಿತು, ‘ಪಾಲಿಹೌಸ್ ವಿತರಣೆಯಲ್ಲಿ ಹಿಂದೆ ಅವ್ಯವಹಾರ ನಡೆದಿರುವ ಬಗ್ಗೆ ದೂರುಗಳಿವೆ. ಆದರಿಂದ ಪಾಲಿಹೌಸ್‌ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳು ನಿಗದಿತ ಗಡುವಿನೊಳಗೆ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಅವರ ಹೆಸರು ರದ್ದುಪಡಿಸಿ ಅರ್ಹರಿಗೆ, ಆಸಕ್ತಿ ಇರುವವರಿಗೆ ನೀಡಿ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಮೇವು ಬೀಜದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆದ್ಯತೆಯ ಮೆರೆಗೆ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಮತ್ತು ಶೌಚಾಲಯ ನಿರ್ಮಿಸಲು ಕ್ರಮಗೊಳ್ಳಬೇಕು. ರೈತರಿಗೆ, ಸಾರ್ವಜನಿಕರಿಗೆ, ಯುವಜನರಿಗೆ ಉಪಯುಕ್ತವಾಗುಂತಹ ಕಾರ್ಯಾಗಾರ, ಕಾರ್ಯಕ್ರಮಗಳನ್ನು ನಡೆಸಲು ಇನೋವೇಟಿವ್‌ ಫಂಡ್ ಹೆಸರಿನಲ್ಲಿ ಸಾಕಷ್ಟು ಹಣವಿದೆ. ಅದನ್ನು ಎಲ್ಲ ಇಲಾಖೆ ಅಧಿಕಾರಿಗಳು ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳ ಅಧಿಕಾರಿಗಳು ವಿದ್ಯಾರ್ಥಿ ನಿಲಯಗಳಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗಳಿಗೆ ಸಮವಸ್ತ್ರ ಒದಗಿಸಬೇಕು. ಚಿಂತಾಮಣಿ ಕ್ರೀಡಾಂಗಣದ ಮಳಿಗೆಗಳ ಹರಾಜಿನಲ್ಲಿ ಭಾರಿ ಅಕ್ರಮಗಳು ನಡೆದಿವೆ. ಅನುದಾನ ದುರ್ಬಳಕೆಯಾಗಿದೆ. ಆದ್ದರಿಂದ ಜಿಲ್ಲಾ ಪಂಚಾಯಿತಿ ವತಿಯಿಂದಲೇ ಒಂದು ವಿಶೇಷ ಸಭೆ ನಡೆಸಿ ಆ ಬಗ್ಗೆ ಚರ್ಚೆ ನಡೆಸೋಣ’ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಮುಖ್ಯ ಯೋಜನಾಧಿಕಾರಿ ಎನ್.ಮಾಧುರಾವ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !