ನ್ಯಾಯ ಒದಗಿಸುವಂತೆ ಸಚಿವರಿಗೆ ಅಶ್ರಫ್‌ ಆಗ್ರಹ

7
ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆ

ನ್ಯಾಯ ಒದಗಿಸುವಂತೆ ಸಚಿವರಿಗೆ ಅಶ್ರಫ್‌ ಆಗ್ರಹ

Published:
Updated:

ಮಂಗಳೂರು: ಮೂಢನಂಬಿಕೆಯನ್ನು ಪ್ರಶ್ನಿಸುವ ಪೋಸ್ಟ್‌ ಅನ್ನು ಫೇಸ್‌ ಬುಕ್‌ನಲ್ಲಿ ಹಾಕಿದ್ದಕ್ಕಾಗಿ ಬಂಧಿತರಾಗಿದ್ದ ಯುವಕ ಅಶ್ರಫ್ ಎಂ. ಸಾಲೆತ್ತೂರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರನ್ನು ಬುಧವಾರ ಭೇಟಿ ಮಾಡಿ, ತನಗೆ ಪೊಲೀಸರಿಂದ ಅನ್ಯಾಯವಾಗಿದ್ದು, ನ್ಯಾಯ ದೊರಕಿಸುವಂತೆ ಮನವಿ ಸಲ್ಲಿಸಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮತ್ತು ಕಾರ್ಯದರ್ಶಿ ಸಂತೋಷ್ ಬಜಾಲ್‌ ಅವರೊಂದಿಗೆ ಸಚಿವರನ್ನು ಭೇಟಿ ಮಾಡಿದ ಅಶ್ರಫ್‌, ಫೇಸ್‌ ಬುಕ್‌ ಪೋಸ್ಟ್‌, ಪೊಲೀಸರಿಂದ ಪ್ರಕರಣ ದಾಖಲು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಮತ್ತು ಜಾಮೀನಿನಿಂದ ಬಿಡುಗಡೆಯಾದ ಬಳಿಕವೂ ಪೊಲೀಸರು ನೋಟಿಸ್ ಜಾರಿ ಮಾಡಿರುವ ಕುರಿತು ವಿವರಿಸಿದರು.

‘ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಾನು ಯಾವುದೇ ಬರಹವನ್ನೂ ಹಾಕಿಲ್ಲ. ಆದರೆ, ಪೊಲೀಸರು ದುರುದ್ದೇಶದಿಂದ ನನ್ನ ವಿರುದ್ಧ ಪ್ರಕರಣ ದಾಖಲಿಸಿದರು. ಬೆದರಿಸಿ, ಠಾಣೆಗೆ ಕರೆಸಿಕೊಂಡು ಮಾನಸಿಕ ಹಿಂಸೆ ನೀಡಿದರು. ಬಟ್ಟೆ ಕಳಚಿ ಇಡೀ ರಾತ್ರಿ ಲಾಕಪ್‌ನಲ್ಲಿ ಇರಿಸಿದ್ದರು. ಬಕ್ರೀದ್‌ ಹಬ್ಬ ಆಚರಣೆಗೂ ಅವಕಾಶ ನೀಡದೇ ಬಂಧಿಸಿ, ಜೈಲಿಗೆ ಕಳುಹಿಸಿದರು. ನನ್ನ ಎಲ್ಲ ಹಕ್ಕುಗಳನ್ನೂ ದಮನ ಮಾಡಿದರು’ ಎಂದು ದೂರಿದರು.

ಮಂಗಳೂರು ಉತ್ತರ (ಬಂದರು) ಠಾಣೆಯ ಇನ್‌ಸ್ಪೆಕ್ಟರ್ ಸುರೇಶ್‌ ಕುಮಾರ್ ಮತ್ತು ಸಬ್‌ ಇನ್‌ಸ್ಪೆಕ್ಟರ್ ಸುಂದರ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡರು. ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾದ ಬಳಿಕವೂ ಫೇಸ್‌ ಬುಕ್‌ನಲ್ಲಿ ಬರಹ ಹಾಕದಂತೆ ಬೆದರಿಸಿದರು. ಜಾಮೀನು ರದ್ದು ಮಾಡುವಂತೆ ವರದಿ ಸಲ್ಲಿಸುವುದಾಗಿ ನೋಟಿಸ್ ನೀಡಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

‘ಬಂಧನದಲ್ಲಿದ್ದ ಅವಧಿಯಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಪರಿಚಿತ ವಕೀಲರ ನೆರವು ಪಡೆಯಲು ಬಯಸಿದ್ದೆ. ಆದರೆ, ಮಂಗಳೂರು ಉತ್ತರ ಠಾಣೆಯ ಪೊಲೀಸರೇ ವಕೀಲರನ್ನು ಗೊತ್ತು ಮಾಡಿದರು. ಅವರು ತನ್ನಿಂದ ₹ 16,000 ಶುಲ್ಕ ಪಡೆದರು. ಪೊಲೀಸರಿಂದ ಸಂಪೂರ್ಣವಾಗಿ ನನಗೆ ಅನ್ಯಾಯವಾಗಿದೆ. ಕ್ರಿಮಿನಲ್‌ ರೀತಿ ಬಿಂಬಿಸಿದ್ದು, ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ನನಗೆ ನ್ಯಾಯ ದೊರಕಿಸಿಕೊಡಿ’ ಎಂದು ಆಗ್ರಹಿಸಿದರು.

ನ್ಯಾಯದ ಭರವಸೆ:

‘ಪ್ರಕರಣದ ಕುರಿತು ಪೊಲೀಸ್ ಕಮಿಷನರ್‌ ಜೊತೆ ಚರ್ಚಿಸಿದ್ದೇನೆ. ಸಂಪೂರ್ಣವಾಗಿ ವರದಿ ತರಿಸಿಕೊಂಡು, ನ್ಯಾಯ ದೊರಕಿಸಿಕೊಡುತ್ತೇನೆ. ಪೊಲೀಸರು ತಪ್ಪು ಮಾಡಿರುವುದು ಸಾಬೀತಾದರೆ ಕ್ರಮ ಜರುಗಿಸಲಾಗುವುದು. ಪೊಲೀಸರು ತಾರತಮ್ಯದಿಂದ ವರ್ತಿಸುವುದಕ್ಕೂ ಅವಕಾಶ ನೀಡುವುದಿಲ್ಲ’ ಎಂದು ಸಚಿವರು ಭರವಸೆ ನೀಡಿದರು.

ಡಿವೈಎಫ್‌ಐ ಮನವಿ:

ಪ್ರಕರಣದಲ್ಲಿ ಅಶ್ರಫ್ ಅವರಿಗೆ ನ್ಯಾಯ ಒದಗಿಸಬೇಕು ಮತ್ತು ತಪ್ಪು ಮಾಡಿರುವ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ವತಿಯಿಂದ ಪ್ರತ್ಯೇಕವಾದ ಮನವಿಯಲ್ಲಿ ಸಚಿವರಿಗೆ ಸಲ್ಲಿಸಲಾಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !