ಅರಿವಿನ ಕೊರತೆ: ಪರಿಸರದ ಮೇಲೆ ದಾಳಿ

7

ಅರಿವಿನ ಕೊರತೆ: ಪರಿಸರದ ಮೇಲೆ ದಾಳಿ

Published:
Updated:
Deccan Herald

ಕೋಲಾರ: ‘ಅರಿವಿನ ಕೊರತೆಯಿಂದ ಮನುಷ್ಯ ಪರಿಸರದ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಪ್ರಾಕೃತಿಕ ಅಸಮತೋಲನವಾಗುತ್ತಿದೆ’ ಎಂದು ತಾಲ್ಲೂಕಿನ ಹುನ್ಕಂದ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಶಂಕರಪ್ಪ ಅಭಿಪ್ರಾಯಪಟ್ಟರು.

ಅರಣ್ಯ ಇಲಾಖೆ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಸಹಯೋಗದಲ್ಲಿ ಶಾಲೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ದುರಾಸೆಯ ಫಲವಾಗಿ ಪರಿಸರ ನಾಶವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಹಿಂದಿನ ಕಾಲದಲ್ಲಿ ಖಾಲಿ ಜಾಗದಲ್ಲಿ ಗಿಡ ಮರ ಕಾಣುತ್ತಿದ್ದೆವು. ಅರಣ್ಯ ಸಂಪತ್ತು ಸಮೃದ್ಧವಾಗಿತ್ತು. ಹೀಗಾಗಿ ಸಕಾಲಕ್ಕೆ ಮಳೆಯಾಗಿ ಕೆರೆ ಕುಂಟೆಗಳಲ್ಲಿ ನೀರು ಸಂಗ್ರಹವಾಗುತ್ತಿತ್ತು. ಆದರೆ, ಈಗ ಗಿಡ ಮರ ನಾಶದಿಂದ ವಾತಾವರಣ ಕಲುಷಿತಗೊಂಡು ಆರೋಗ್ಯ ಸಮಸ್ಯೆ ಎದುರಾಗಿದೆ. ಜತೆಗೆ ಪ್ರಾಕೃತಿಕ ವಿಕೋಪ ಸಂಭವಿಸುತ್ತಿವೆ’ ಎಂದು ವಿಷಾದಿಸಿದರು.

‘ಖಾಸಗಿ ಕಂಪನಿಗಳು ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮೂಲಸೌಕರ್ಯ ಕಲ್ಪಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕೈಜೋಡಿಸಬೇಕು. ಶಾಲೆ ಆವರಣ ಹಾಗೂ ಸರ್ಕಾರಿ ಖಾಲಿ ಜಾಗದಲ್ಲಿ ಗಿಡ ನೆಟ್ಟು ಬೆಳೆಸಬೇಕು. ಪರಿಸರ ಸಂರಕ್ಷಣೆಗೆ ಸಂಘ ಸಂಸ್ಥೆಗಳು, ಸಾರ್ವಜನಿಕರ ಸರ್ಕಾರದೊಂದಿಗೆ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.

ಜಾಗೃತಿ ಮೂಡಿಸಿ: ‘ಈಗ ಖಾಲಿ ಜಾಗದಲ್ಲೆಲ್ಲಾ ಗಗನಚುಂಬಿ ಕಟ್ಟಡಗಳು ತಲೆ ಎತ್ತಿವೆ. ಮರ ಗಿಡ ಕಡಿದಿರುವುದರಿಂದ ಪ್ರಾಣಿ ಪಕ್ಷಿ ಸಂಕುಲ ನಾಶವಾಗುತ್ತಿದೆ. ಪರಿಸರ ಹಾಗೂ ಸಾರ್ವಜನಿಕ ಆಸ್ತಿ ರಕ್ಷಣೆಗೆ ಸರ್ಕಾರ ಅನೇಕ ಕಾರ್ಯಕ್ರಮ ರೂಪಿಸಿದೆ. ಪರಿಸರ ನಾಶದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದು ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು ಕಿವಿಮಾತು ಹೇಳಿದರು.

‘ಜನಸಂಖ್ಯೆಗೆ ಹೋಲಿಸಿದರೆ ಮರಗಳ ಸಂಖ್ಯೆ ಕಡಿಮೆಯಿದ್ದು, ಶುದ್ಧ ಗಾಳಿ ಸಿಗುತ್ತಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಶುದ್ಧ ಗಾಳಿಗಾಗಿ ರಸ್ತೆಗಳ ಅಕ್ಕಪಕ್ಕ ಗಿಡ ನೆಟ್ಟು ಬೆಳೆಸಬೇಕು. ನಮ್ಮ ಸಂಸ್ಥೆ ಸೇವೆಗೆ ಹೆಸರಾಗಿದ್ದು, ಜಿಲ್ಲೆಯನ್ನು ಹಸಿರುಮಯ ಜಿಲ್ಲೆಯಾಗಿಸಲು ಪಣ ತೊಟ್ಟಿದೆ. ಸರ್ಕಾರಿ ಕಚೇರಿ, ಶಾಲೆ ಆವರಣದಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಸಸಿ ನೆಡಲಾಗುತ್ತಿದೆ’ ಎಂದರು.

ಶಾಲೆ ಮುಖ್ಯ ಶಿಕ್ಷಕಿ ವನಿತಾ ಕುಮಾರಿ, ಶಿಕ್ಷಕರರಾದ ಲೋಕೇಶ್, ಛಾಯಾದೇವಿ, ಅಭಿರಾಮಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !