ಪ್ರಾಂಶುಪಾಲರ ಮೇಲೆ ಹಲ್ಲೆ: ವಿದ್ಯಾರ್ಥಿ ಅಪರಾಧ ಸಾಬೀತು

7

ಪ್ರಾಂಶುಪಾಲರ ಮೇಲೆ ಹಲ್ಲೆ: ವಿದ್ಯಾರ್ಥಿ ಅಪರಾಧ ಸಾಬೀತು

Published:
Updated:

ಮಂಗಳೂರು: ದುರ್ವರ್ತನೆ ಮತ್ತು ಹಾಜರಾತಿ ಕೊರತೆ ಕಾರಣಕ್ಕೆ ಪರೀಕ್ಷಾ ಪ್ರವೇಶಪತ್ರ ತಡೆಹಿಡಿದಿದ್ದ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲ ಫಾದರ್‌ ಮೈಕಲ್‌ ಸಾಂತುಮಾಯೆರ್‌ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದ, ಪಾಂಡೇಶ್ವರ ನಿವಾಸಿ ಮೊಹಮ್ಮದ್ ಶಾನವಾಝ್ (22) ಅಪರಾಧಿ ಎಂದು ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಮಾನಿಸಿದೆ.

2016ರಲ್ಲಿ ಶಾನವಾಝ್‌ ಮಿಲಾಗ್ರಿಸ್‌ ಕಾಲೇಜಿನಲ್ಲಿ ಬಿಬಿಎ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದ. ಆಗ ನಿತ್ಯವೂ ತರಗತಿಗೆ ವಿಳಂವಾಗಿ ಬರುತ್ತಿದ್ದ. ಪ್ರಾಂಶುಪಾಲರು ಎಚ್ಚರಿಕೆಯನ್ನೂ ನೀಡಿದ್ದರು. ಆ ಬಳಿಕವೂ ವಿಳಂಬವಾಗಿ ಬಂದ ಕಾರಣ ಉಪನ್ಯಾಸಕರು ಆತನಿಗೆ ಹಾಜರಿ ನೀಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿ ಉಪನ್ಯಾಸಕರ ಎದುರಿನಲ್ಲೇ ಹಾಜರಿ ಪುಸ್ತಕವನ್ನು ಹರಿದುಹಾಕಿದ್ದ. ಈ ಬಗ್ಗೆ ಉಪನ್ಯಾಸಕರು ಪ್ರಾಂಶುಪಾಲರಿಗೆ ದೂರು ನೀಡಿದ್ದರು.

ಪೋಷಕರನ್ನು ಕರೆತರುವಂತೆ ಪ್ರಾಂಶುಪಾಲರು ಶಾನವಾಝ್‌ಗೆ ಸೂಚಿಸಿದ್ದರು. ಆದರೆ, ಆತ ಅದನ್ನು ಪಾಲಿಸಿರಲಿಲ್ಲ. ವಿಶ್ವವಿದ್ಯಾಲಯದ ನಿಯಾಮವಳಿ ಅನುಸಾರ ಪರೀಕ್ಷೆಗೆ ಪ್ರವೇಶಪತ್ರ ನೀಡಲಾಗದು ಎಂದು ಪ್ರಾಂಶುಪಾಲರು ವಿದ್ಯಾರ್ಥಿಗೆ ತಿಳಿಸಿದ್ದರು. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿ 2016ರ ಅಕ್ಟೋಬರ್‌ 20ರಂದು ಮಧ್ಯಾಹ್ನ ಮೈಕಲ್ ಸಾಂತುಮಾಯೆರ್ ಊಟಕ್ಕೆ ಹೋಗುತ್ತಿದ್ದಾಗ ಹಿಂಬಾಲಿಸಿ ಹಲ್ಲೆ ನಡೆಸಿದ್ದ.

ಪುಸ್ತಕವ‌ನ್ನು ಸುರುಳಿ ಸುತ್ತಿ ಹೊಡೆದಿದ್ದರಿಂದ ಪ್ರಾಂಶುಪಾಲರ ಕಿವಿಗೆ ಹಾನಿಯಾಗಿತ್ತು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಆಗಿನ್ ಸಬ್‌ ಇನ್‌ಸ್ಪೆಕ್ಟರ್ ಮದನ್‌, ವಿದ್ಯಾರ್ಥಿ ವಿರುದ್ಧ ಕೊಲೆಯತ್ನ ಮತ್ತು ಜೀವ ಬೆದರಿಕೆ ಹಾಕಿದ ಆರೋಪದಡಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಮಂಗಳವಾರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ, ಈ ಪ್ರಕರಣದಲ್ಲಿ ವಿದ್ಯಾರ್ಥಿ ಮೊಹಮ್ಮದ್ ಶಾನವಾಝ್ ಅಪರಾಧಿ ಎಂದು ಪ್ರಕಟಿಸಿದರು.

ನಡತೆ ಆಧರಿಸಿ ಶಿಕ್ಷೆ:

ಅಪರಾಧಿಯ ಭವಿಷ್ಯದ ದೃಷ್ಟಿಯಿಂದ ಆತನ ನಡವಳಿಕೆಯ ಕುರಿತು ವರದಿ ಪಡೆದು ಅಕ್ಟೋಬರ್‌ 22ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಹೇಳಿರುವ ನ್ಯಾಯಾಲಯ, ಇದಕ್ಕಾಗಿ ಪರಿವೀಕ್ಷಣಾಧಿಕಾರಿಯನ್ನು ನೇಮಕ ಮಾಡಿದೆ. ಅಪರಾಧಿಯ ಮನೆಯ ಪರಿಸರ, ಆತನಿಗೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿಗಳ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಪರಿವೀಕ್ಷಣಾಧಿಕಾರಿಗೆ ಸೂಚಿಸಲಾಗಿದೆ.

‘ಆತನ ನಡತೆ ಈಗ ಉತ್ತಮವಾಗಿದೆ ಎಂಬ ವರದಿ ಬಂದರೆ ಭದ್ರತಾ ಬಾಂಡ್‌ ಪಡೆದು, ನಿಗಾ ಅವಧಿ ಘೋಷಿಸಬಹುದು. ಆ ಅವಧಿಯಲ್ಲಿ ಮತ್ತೆ ಅಪರಾಧ ಎಸಗಿದರೆ ಈ ಪ್ರಕರಣದಲ್ಲೂ ಶಿಕ್ಷೆ ಅನುಭವಿಸಬೇಕಾಗುತ್ತದೆ. ಶಾನವಾಝ್ ವಿರುದ್ಧ ಕೊಲೆಯತ್ನ ಮತ್ತು ಜೀವಬೆದರಿಕೆ ಆರೋಪವೂ ದಾಖಲಾಗಿತ್ತು. ಆದರೆ, ಹಲ್ಲೆ, ತಡೆಯೊಡ್ಡಿರುವುದು ಮತ್ತು ನಿಂದನೆ ಆರೋಪ ಮಾತ್ರ ಸಾಬೀತಾಗಿದೆ’ ಎಂದು ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಪರ ವಾದಿಸಿದ್ದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹರೀಶ್ಚಂದ್ರ ಉದ್ಯಾವರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !