ಸಚಿವರೇ, ಹಗುರ ಮಾತು ನಿಲ್ಲಿಸಿ: ಮಾಜಿ ಶಾಸಕ ಎಚ್.ಬಿ.ರಾಮು

7

ಸಚಿವರೇ, ಹಗುರ ಮಾತು ನಿಲ್ಲಿಸಿ: ಮಾಜಿ ಶಾಸಕ ಎಚ್.ಬಿ.ರಾಮು

Published:
Updated:

ಮಂಡ್ಯ: ‘ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ ವಿರುದ್ಧ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದು ಮಾಜಿ ಶಾಸಕ ಎಚ್.ಬಿ.ರಾಮು ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಚಿವ ಸಿ.ಎಸ್.ಪುಟ್ಟರಾಜು ಚಲುವರಾಯಸ್ವಾಮಿ ವಿರುದ್ಧ ಸತ್ತ ಕುದುರೆ ಎಂಬ ಪದ ಬಳಕೆ ಮಾಡಿದ್ದು, ಇದು ರಾಜ್ಯದ ಎಲ್ಲಾ ಸೋತ ನಾಯಕರಿಗೆ ಅನ್ವಯಿಸುತ್ತದೆ. ರಾಜಕಾರಣದಲ್ಲಿ ಸೋಲು ಗೆಲುವು ಸಾಮಾನ್ಯ. ಸೋತವರನ್ನು ಹೀಯಾಳಿಸುವ ಕೆಟ್ಟ ಚಾಳಿ ಬಿಡಬೇಕು. 1999ರಿಂದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದೀರಿ. ಆ ಸಂದರ್ಭದಲ್ಲಿ ಚಲುವರಾಯಸ್ವಾಮಿ ಅವರು ನಿಮ್ಮ ನೆರವಿಗೆ ಬಂದಿದ್ದರು. ಅವರ ಸಹಾಯ ಮರೆತು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದರು.

‘ಜಿಲ್ಲೆಯಲ್ಲಿ ಕೆ.ವಿ.ಶಂಕರಗೌಡ, ಎಚ್.ಡಿ.ಚೌಡಯ್ಯ, ಜಿ.ಮಾದೇಗೌಡ, ಲಿಂಗಪ್ಪ, ಮಂಚೇಗೌಡ ಹಾಗೂ ಎಚ್.ಕೆ.ವೀರಣ್ಣಗೌಡ ಅವರಂತಹ ಅನೇಕರು ಪ್ರಾಮಾಣಿಕ ರಾಜಕಾರಣ ಮಾಡಿದ್ದಾರೆ. ಅವರಂತೆ ಎನ್.ಚಲುವರಾಯಸ್ವಾಮಿ ಕೂಡ ಬದ್ಧತೆ, ಸ್ಥಿರತೆ ಉಳಿಸಿಕೊಂಡು ರಾಜಕಾರಣ ಮಾಡಿಕೊಂಡು ಬರುತ್ತಿದ್ದು ಜಿಲ್ಲೆಯ ಶಕ್ತಿಯಾಗಿದ್ದಾರೆ. ಯಾರನ್ನೋ ಓಲೈಸಲು ಇಂಥ ಹೇಳಿಕೆ ನೀಡುವುದು ಸರಿಯಲ್ಲ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಆಡಳಿತದಿಂದ ಬಿಜೆಪಿಯನ್ನು ದೂರ ಇಡುವ ಸಲುವಾಗಿ ಮೈತ್ರಿ ಏರ್ಪಟ್ಟಿದೆ. ಜೆಡಿಎಸ್‌ಗೆ ಅಧಿಕಾರ ಬಿಟ್ಟುಕೊಟ್ಟಿರುವ ಕಾಂಗ್ರೆಸ್ ನಾಯಕರಿಗೂ ಗೌರವ ಸಿಗಬೇಕು. ಅದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಕಾಂಗ್ರೆಸ್ ಮುಖಂಡ ವಿ.ಕೆ.ಜಗದೀಶ್ ಮಾತನಾಡಿ ‘2014ರ ಲೋಕಸಭಾ ಚುನಾವಣೆ ವೇಳೆ ಪುಟ್ಟರಾಜು ಅವರಿಗೆ ದೇವೇಗೌಡ ಕುಟುಂಬ ಟಿಕೆಟ್ ನಿರಾಕರಿಸುವ ಸಂದರ್ಭ ಎದುರಾಗಿತ್ತು. ಆಗ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಹೇಗಾದರೂ ಮಾಡಿ ಟಿಕೆಟ್ ಕೊಡಿಸಬೇಕು ಎಂದು ಎನ್.ಚಲುವರಾಯಸ್ವಾಮಿ ಅವರನ್ನು ಪುಟ್ಟರಾಜು ಬೇಡಿಕೊಂಡಿದ್ದರು. ಚಲುವರಾಯಸ್ವಾಮಿ ಅವರ ನಾಯಕತ್ವದಲ್ಲಿಯೇ ರಾಜಕೀಯ ಮಾಡುವುದಾಗಿ ಹೇಳಿದ್ದರು. ಈಗ ಅವರ ವಿರುದ್ಧವೇ ಹಗುರ ಮಾತುಗಳನ್ನಾಡುತ್ತಿದ್ದಾರೆ. ನಿಮ್ಮ ಮಾತು ಹೀಗೆಯೇ ಮುಂದುವರಿದರೆ, ನಿಮ್ಮ ಎಲ್ಲಾ ವಿಚಾರಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಪುಟ್ಟಸ್ವಾಮಿ, ಎಂ.ಸಿ.ಬಸವರಾಜು, ಮಂಜೇಗೌಡ, ಸುರೇಶ್‌ಕಂಠಿ, ರಾಮಕೃಷ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !