ವಜಾ ಅವಧಿ ಸೇವೆ ಪರಿಗಣಿಸಲು ಒತ್ತಾಯ

7
ಸೇವಾ ಹಿರಿತನ, ವೇತನ ಏರಿಕೆ ವಿಚಾರಗಳಲ್ಲಿ ಕೆಲಸದಿಂದ ತೆಗೆದು ಹಾಕಿದ್ದ ನಾಲ್ಕು ವರ್ಷಗಳ ಸೇವೆ ಪರಿಗಣಿಸುವಂತೆ ಗ್ರಾಮೀಣ ಕೃಪಾಂಕ ನೌಕರರ ಆಗ್ರಹ

ವಜಾ ಅವಧಿ ಸೇವೆ ಪರಿಗಣಿಸಲು ಒತ್ತಾಯ

Published:
Updated:
Deccan Herald

ಚಿಕ್ಕಬಳ್ಳಾಪುರ: ಗ್ರಾಮೀಣ ಕೃಪಾಂಕ ನೌಕರರ ವೇತನ, ಬಡ್ತಿಯ ವಿಚಾರದಲ್ಲಿ 1999ರಿಂದ 2003ರ ವರೆಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಿದ್ದ ಅವಧಿಯನ್ನೂ ಪರಿಗಣಿಸಿ ನೌಕರರಿಗೆ ಸಾಮಾಜಿಕ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೃಪಾಂಕ ನೌಕರರ ಸಂಘದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಗ್ರಾಮೀಣ ಕೃಪಾಂಕ ನೌಕರರ ಸಂಘ ಜಿಲ್ಲಾ ಘಟಕದ ಖಜಾಂಚಿ ಎಂ.ಪುಟ್ಟರಾಜು, ‘ರಾಜ್ಯದಲ್ಲಿ 1998–99ರಲ್ಲಿ ಗ್ರಾಮೀಣ ಕೃಪಾಂಕ ಮೀಸಲಾತಿ ಆಧಾರದಲ್ಲಿ ರಾಜ್ಯ ಸರ್ಕಾರ 5,017 ಜನರನ್ನು ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡಿಕೊಂಡಿತ್ತು. ಇದನ್ನು ಪ್ರಶ್ನಿಸಿ ದಾಖಲಾದ ಅರ್ಜಿ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ 2003ರ ಜೂನ್‌ನಲ್ಲಿ ಆಯ್ಕೆಯಾದ ನೌಕರರ ಪರಿಷ್ಕೃತ ಪಟ್ಟಿ ತಯಾರಿಸಿ ಅರ್ಹರಲ್ಲದವರನ್ನು ತೆಗೆದು ಹಾಕುವಂತೆ ಆದೇಶಿಸಿತ್ತು’ ಎಂದು ಹೇಳಿದರು.

‘ಆದರೆ ರಾಜ್ಯ ಸರ್ಕಾರ 2003ರ ನವೆಂಬರ್‌ನಲ್ಲಿ ತೆಗೆದು ಹಾಕಿದ್ದ ಎಲ್ಲ ನೌಕರರನ್ನು ಮರು ನೇಮಕಾತಿ ಮಾಡಿಕೊಂಡಿತು. ಆದರೆ ಅವರಿಗೆ ಈವರೆಗೆ ಸೇವಾ ಹಿರಿತನ, ಸೇವಾ ಜೇಷ್ಠತೆ ಮತ್ತು ವೇತನ ಏರಿಕೆ ವಿಚಾರಗಳಲ್ಲಿ ಕೆಲಸದಿಂದ ತೆಗೆದು ಹಾಕಿದ್ದ ನಾಲ್ಕು ವರ್ಷಗಳ ಅವಧಿಯನ್ನು ಪರಿಗಣಿಸುತ್ತಿಲ್ಲ. ಇದರಿಂದ ಗ್ರಾಮೀಣ ಕೃಪಾಂಕ ನೌಕರರ ಬದುಕು ಸಂಕಷ್ಟಕ್ಕೆ ಸಿಲುಕಿದೆ’ ಎಂದು ತಿಳಿಸಿದರು.

‘ಗ್ರಾಮೀಣ ಕೃಪಾಂಕ ನೌಕರರ 1998 ರಿಂದ 2003ರ ವರೆಗಿನ ಸೇವೆಯನ್ನು ಸಂರಕ್ಷಿಸುವ ಮತ್ತು ಮರು ನೇಮಕಾತಿ ಮಾಡುವಾಗ ಅವರ ಜಾಗದಲ್ಲಿ ನಗರ ಪ್ರದೇಶದ ಅಭ್ಯರ್ಥಿಗಳು ಬರದೇ ಇದ್ದ ಪಕ್ಷದಲ್ಲಿ ಗ್ರಾಮೀಣ ಅಭ್ಯರ್ಥಿಗಳನ್ನೇ ಮುಂದುವರಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೇಷಪ್ಪ, ಗ್ರಾಮೀಣ ಕೃಪಾಂಕ ನೌಕರರಾದ ರಾಮಾಂಜಿ, ರಾಜಮ್ಮ, ಅಮಾನುಲ್ಲಾಖಾನ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !