ಬಿಡುಗಡೆಯಾಗದ ಪ್ರೋತ್ಸಾಹಧನ: ಮಾವು ಬೆಳೆಗಾರರ ಅಲೆದಾಟ

7

ಬಿಡುಗಡೆಯಾಗದ ಪ್ರೋತ್ಸಾಹಧನ: ಮಾವು ಬೆಳೆಗಾರರ ಅಲೆದಾಟ

Published:
Updated:
Deccan Herald

ಕೋಲಾರ: ಬೆಲೆ ಕುಸಿತದ ಸುಳಿಗೆ ಸಿಲುಕಿ ನಲುಗಿದ್ದ ಜಿಲ್ಲೆಯ ಮಾವು ಬೆಳೆಗಾರರು ಸರ್ಕಾರದ ಬೆಂಬಲ ಬೆಲೆ ಹಣಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ.

ಸರ್ಕಾರ ಮಾವಿಗೆ ಬೆಂಬಲ ಬೆಲೆ ಘೋಷಿಸಿ 2 ತಿಂಗಳಾಗಿದ್ದು, ಈವರೆಗೂ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗಿಲ್ಲ. ಜಿಲ್ಲೆಯ ಶ್ರೀನಿವಾಸಪುರ ಹಾಗೂ ಮುಳಬಾಗಿಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧಿಕಾರಿಗಳ ಎಡವಿಟ್ಟಿನಿಂದಾಗಿ ಬೆಂಬಲ ಬೆಲೆ ಹಣ ಪಾವತಿಯಲ್ಲಿ ವಿಳಂಬವಾಗಿದೆ.

ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನ ಹಣ್ಣಿಗೆ ಪ್ರಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಈ ಬಾರಿ ಭರ್ಜರಿ ಮಾವಿನ ಫಸಲು ಬಂದಿತ್ತು. ಆದರೆ, ಬೆಲೆ ಕುಸಿತದಿಂದಾಗಿ ಸಾಕಷ್ಟು ರೈತರು ಮಾವು ಕಟಾವು ಮಾಡಲೇ ಇಲ್ಲ. ಮಾವಿನ ಹಣ್ಣು ಮರದಲ್ಲೇ ಕೊಳೆತು ರೈತರಿಗೆ ಹೆಚ್ಚಿನ ನಷ್ಟವಾಯಿತು.

ಬೆಲೆ ಕುಸಿತದ ನಡುವೆಯೂ ಕೆಲ ರೈತರು ಮೇ ಮತ್ತು ಜೂನ್‌ ತಿಂಗಳಲ್ಲಿ ಮಾವು ಕಟಾವು ಮಾಡಿ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಿದರು. ಎರಡು ತಿಂಗಳಲ್ಲಿ ಸುಮಾರು ಶೇ 80ರಷ್ಟು ಮಾವು ಕಟಾವು ಆಗಿತ್ತು. ಬೆಲೆ ಕುಸಿತದಿಂದ ಕಂಗೆಟ್ಟಿದ್ದ ರೈತರು ಬೆಂಬಲ ಬೆಲೆ ಘೋಷಣೆಗಾಗಿ ಜೂನ್ ಅಂತ್ಯದಲ್ಲಿ ಬೀದಿಗಿಳಿದು ಹೋರಾಟ ನಡೆಸಿದರು. ಹೋರಾಟಕ್ಕೆ ಮಣಿದ ಸರ್ಕಾರ ಜುಲೈನಲ್ಲಿ ಮಾವಿಗೆ ಬೆಂಬಲ ಬೆಲೆ ಘೋಷಿಸಿತು.

₹ 5 ಕೋಟಿ ಬಿಡುಗಡೆ: ಆಂಧ್ರಪ್ರದೇಶ ಮಾದರಿಯಲ್ಲಿ ಎಪಿಎಂಸಿಯಲ್ಲಿ ಮಾರಾಟವಾದ ಪ್ರತಿ ಕಿ.ಲೋ ಮಾವಿನ ಕಾಯಿಗೆ ₹ 2.50 ಬೆಂಬಲ ಬೆಲೆ ನಿಗದಿಪಡಿಸಿದ ಸರ್ಕಾರ ಒಟ್ಟಾರೆ ರಾಜ್ಯದ ಮಾವು ಬೆಳೆಗಾರರ ಹಿತರಕ್ಷಣೆಗಾಗಿ ₹ 27.50 ಕೋಟಿ ನೀಡುವುದಾಗಿ ಘೋಷಿಸಿತು. ಈ ಪೈಕಿ ರಾಜ್ಯದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಅವಿಭಜಿತ ಕೋಲಾರ ಜಿಲ್ಲೆಗೆ ₹ 23 ಕೋಟಿ ಘೋಷಿಸಲಾಗಿತ್ತು.

ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ (ಹಾಪ್‌ಕಾಮ್ಸ್) ಮೂಲಕ ಮಾವು ಬೆಳೆಗಾರರಿಗೆ ಪ್ರೋತ್ಸಾಹಧನ ನೀಡಲು ನಿರ್ಧಾರ ಕೈಗೊಂಡ ಸರ್ಕಾರ ಮೊದಲ ಹಂತದಲ್ಲಿ ಹಾಪ್‌ಕಾಮ್ಸ್‌ಗೆ ₹ 5 ಕೋಟಿ ಬಿಡುಗಡೆ ಮಾಡಿದೆ.

2 ಎಪಿಎಂಸಿಯಲ್ಲಿ ಖರೀದಿ: ಶ್ರೀನಿವಾಸಪುರ ಮತ್ತು ಮುಳಬಾಗಿಲು ಎಪಿಎಂಸಿಯಲ್ಲಿ ಬೆಂಬಲ ಬೆಲೆ ಜಾರಿಗೊಳಿಸಿದ ಜಿಲ್ಲಾಡಳಿತವು ಎಪಿಎಂಸಿಯಲ್ಲಿನ ನೋಂದಾಯಿತ ಮಂಡಿ ಮಾಲೀಕರ ಮೂಲಕ ಜುಲೈ 13ರಿಂದ ಜುಲೈ 25ರವರೆಗಿನ ಅವಧಿಯಲ್ಲಿ ಖರೀದಿಯಾದ ಮಾವಿನ ಕಾಯಿಗೆ ಬೆಂಬಲ ಬೆಲೆ ನೀಡುವುದಾಗಿ ಹೇಳಿತ್ತು.

ಈ ಅವಧಿಯಲ್ಲಿ ಶ್ರೀನಿವಾಸಪುರ ಎಪಿಎಂಸಿಯಲ್ಲಿ 6,500 ಮಂದಿ ಹಾಗೂ ಮುಳಬಾಗಿಲು ಎಪಿಎಂಸಿಯಲ್ಲಿ 1,200 ಬೆಳೆಗಾರರು ಮಾವಿನ ಕಾಯಿ ಮಾರಾಟ ಮಾಡಿದ್ದಾರೆ. 2 ಎಪಿಎಂಸಿಗಳಿಂದ ಸುಮಾರು 40 ಸಾವಿರ ಟನ್‌ ಮಾವು ಖರೀದಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಮಾವು ವಹಿವಾಟಿನ ಸಂಬಂಧ ಬೆಳೆಗಾರರು ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್‌, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಮಾರಾಟವಾದ ಮಾವಿನ ಕಾಯಿ ತೂಕದ ವಿವರವನ್ನು ಅರ್ಜಿ ಜತೆ ಎಪಿಎಂಸಿ ಅಧಿಕಾರಿಗಳಿಗೆ ಸಲ್ಲಿಸಿದ್ದರು. ಆದರೆ, ಎಪಿಎಂಸಿ ಅಧಿಕಾರಿಗಳು 2 ತಿಂಗಳ ಕಾಲ ರೈತರ ಅರ್ಜಿ ಮತ್ತು ದಾಖಲೆಪತ್ರ ಪರಿಶೀಲಿಸಿಲ್ಲ. ಅಕ್ಟೋಬರ್‌ ಮೊದಲ ವಾರದಲ್ಲಿ ಅರ್ಜಿ ಮತ್ತು ದಾಖಲೆಪತ್ರಗಳನ್ನು ಪರಿಶೀಲಿಸಿ ತೋಟಗಾರಿಕೆ ಇಲಾಖೆಗೆ ರವಾನಿಸಿದ್ದಾರೆ.

ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರಿಗೆ ಪ್ರೋತ್ಸಾಹಧನ ವಿಳಂಬವಾಗಿದೆ. ಮತ್ತೊಂದೆಡೆ ಮಾವು ಖರೀದಿಸಿದ ಮಂಡಿ ಮಾಲೀಕರು ಸಹ ಹಣ ಪಾವತಿಸಿಲ್ಲ. ತೋಟಗಾರಿಕೆ ಇಲಾಖೆಯಲ್ಲಿ ಅರ್ಜಿ ಮತ್ತು ದಾಖಲೆಪತ್ರಗಳ ಪರಿಶೀಲನೆಗೆ ಹೆಚ್ಚಿನ ತಿಂಗಳ ಕಾಲಾವಕಾಶ ಬೇಕಿದ್ದು, ಫಲಾನುಭವಿ ರೈತರು ಪ್ರೋತ್ಸಾಹಧನಕ್ಕೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಅಂಕಿ ಅಂಶಗಳು.....
* 50,432 ಹೆಕ್ಟೇರ್ ಮಾವು ಬೆಳೆ
* 7,700 ಮಂದಿ ಫಲಾನುಭವಿಗಳು
* ₹ 2.50 ಕೆ.ಜಿ ಮಾವಿಗೆ ಬೆಂಬಲ ಬೆಲೆ
* 40 ಸಾವಿರ ಟನ್‌ ಮಾವಿಗೆ ಪ್ರೋತ್ಸಾಹಧನ
* ₹ 23 ಕೋಟಿ ಅವಿಭಜಿತ ಜಿಲ್ಲೆಗೆ ನಿಗದಿ
* ₹ 5 ಕೋಟಿ ಅನುದಾನ ಬಿಡುಗಡೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !