ಮಂಗಳವಾರ, ಮೇ 18, 2021
24 °C
ಎನ್‌.ಎಚ್‌. 169 ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಎನ್‌ಎಚ್‌ಎಐ ಮೊದಲ ಹೆಜ್ಜೆ

ಚತುಷ್ಪಥ ಹೆದ್ದಾರಿ ನಿರ್ಮಾಣ: ಭೂಸ್ವಾಧೀನಕ್ಕೆ ನವೆಂಬರ್‌ನಲ್ಲಿ ಅಧಿಸೂಚನೆ

ವಿ.ಎಸ್‌.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಷ್ಟ್ರೀಯ ಹೆದ್ದಾರಿ (ಎನ್‌.ಎಚ್‌.) 169ರಲ್ಲಿ ಕುಲಶೇಖರದಿಂದ ಮೂಡುಬಿದಿರೆ ಮಾರ್ಗವಾಗಿ ಕಾರ್ಕಳದವರೆಗೆ 45 ಕಿ.ಮೀ. ಉದ್ದದ ಚತುಷ್ಪಥ ನಿರ್ಮಾಣಕ್ಕೆ ಪೂರ್ವಭಾವಿ ಕೆಲಸಗಳನ್ನು ಬಹುತೇಕ ಪೂರ್ಣಗೊಳಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), 180 ಹೆಕ್ಟೇರ್‌ ಜಮೀನು ಸ್ವಾಧೀನಕ್ಕೆ ನವೆಂಬರ್‌ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸಿದ್ಧತೆ ಮಾಡಿಕೊಂಡಿದೆ.

ಕುಲಶೇಖರ– ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವ ಐದು ವರ್ಷಗಳಿಂದ ಕುಂಟುತ್ತಾ ಸಾಗಿದೆ. ರಸ್ತೆಯ ಮಾರ್ಗ ನಕ್ಷೆಯನ್ನು ಅಂತಿಮಗೊಳಿಸಲು ನಾಲ್ಕೂವರೆ ವರ್ಷ ಹಗ್ಗಜಗ್ಗಾಟ ನಡೆದಿತ್ತು. 2017ರ ಡಿಸೆಂಬರ್‌ನಲ್ಲಿ ಜಿಲ್ಲಾಡಳಿತ ಮಾರ್ಗನಕ್ಷೆಗೆ ಅನುಮೋದನೆ ನೀಡಿತ್ತು. ಒಂಬತ್ತು ತಿಂಗಳ ಸುದೀರ್ಘ ಸಮಯದ ಬಳಿಕ ಈ ಮಾರ್ಗದ ವಿಸ್ತರಣೆಗೆ ಅಗತ್ಯವಿರುವ ಜಮೀನು ಸ್ವಾಧೀನಕ್ಕೆ ಎನ್‌ಎಚ್‌ಎಐ ಪ್ರಸ್ತಾವ ಅಂತಿಮಗೊಳಿಸಿದೆ.

‘ಕುಲಶೇಖರದಿಂದ ಕಾರ್ಕಳದವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 180 ಹೆಕ್ಟೇರ್‌ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕಿದೆ. ರಸ್ತೆ ವಿಸ್ತರಣೆಗೆ ಅಗತ್ಯವಿರುವ ಎಲ್ಲ ಜಮೀನುಗಳನ್ನು ಗುರುತಿಸಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಮಂಗಳೂರಿನ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಪ್ರಸ್ತಾವ ಕಳುಹಿಸಲು ಸಿದ್ಧತೆ ನಡೆದಿದೆ. ನವೆಂಬರ್‌ ತಿಂಗಳಿನಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುತ್ತದೆ’ ಎಂದು ಎನ್‌ಎಚ್‌ಎಐನ ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣಾ ಯೋಜನೆಯ ಅನುಷ್ಠಾನ ಘಟಕದ ಯೋಜನಾ ನಿರ್ದೇಶಕ ಶಿರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಯೋಜನೆಗೆ ಮಂಗಳೂರು ಉಪ ವಿಭಾಗಾಧಿಕಾರಿಯೇ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 45 ಕಿ.ಮೀ. ಉದ್ದದ ಮಾರ್ಗದಲ್ಲಿ 15 ಕಿ.ಮೀ. ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ವರ್ಷದ ಹಿಂದೆಯೇ ಚಾಲನೆ ದೊರಕಿತ್ತು. ಆದರೆ, 30 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆಯ ಮಾರ್ಗ ನಕ್ಷೆ ಅಂತಿಮಗೊಳಿಸುವಲ್ಲಿ ಉಂಟಾದ ತೊಡಕಿನಿಂದ ಭೂಸ್ವಾಧೀನ ಪ್ರಕ್ರಿಯೆ ಮುಂದಕ್ಕೆ ಸಾಗಿರಲಿಲ್ಲ.

ಡಿಪಿಆರ್‌ ತಯಾರಿ:

ಗುರುಗ್ರಾಮದ ಫೀಡ್‌ ಬ್ಯಾಕ್‌ ಇನ್‌ಫ್ರಾ ಕಂಪೆನಿ ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿದೆ. ಕಂಪೆನಿಯ ಸಿವಿಲ್‌ ಎಂಜಿನಿಯರಿಂಗ್‌ ತಜ್ಞರು, ರಸ್ತೆ ಅಭಿವೃದ್ಧಿ ತಜ್ಞರು ಮತ್ತು ನುರಿತ ಎಂಜಿನಿಯರುಗಳ ತಂಡ 45 ಕಿ.ಮೀ. ಉದ್ದದಲ್ಲೂ ಸ್ಥಳ ಪರಿಶೀಲನೆ ನಡೆಸಿ ವಾಸ್ತವಿಕ ಸ್ಥಿತಿ ಆಧರಿಸಿ ಡಿಪಿಆರ್‌ ತಯಾರಿಸುತ್ತಿದೆ. ಈ ಕೆಲಸವೂ ಅಂತಿಮ ಹಂತದಲ್ಲಿದ್ದು, ಕೆಲವೇ ತಿಂಗಳೊಳಗೆ ಡಿಪಿಆರ್‌ ಎನ್‌ಎಚ್‌ಎಐ ಕೈಸೇರುವ ಸಾಧ್ಯತೆ ಇದೆ.

ಕೈಕಂಬ ಮತ್ತು ಮೂಡುಬಿದಿರೆ ಪಟ್ಟಣ ಪ್ರದೇಶಗಳಲ್ಲಿ ಎರಡು ಬೈಪಾಸ್‌, ಎರಡೂ ಕಡೆಗಳಲ್ಲಿ ಪಟ್ಟಣ ಪ್ರದೇಶದಲ್ಲಿ ಬೃಹತ್‌ ಮೇಲ್ಸೇತುವೆಗಳ ನಿರ್ಮಾಣ, ಹತ್ತು ಸ್ಥಳಗಳಲ್ಲಿ ಬೃಹತ್‌ ವಾಹನಗಳು ಸಂಚರಿಸಬಹುದಾದ ಕೆಳ ಸೇತುವೆಗಳು ಮತ್ತು ಎಂಟು ಸ್ಥಳಗಳಲ್ಲಿ ಲಘು ವಾಹನಗಳು ಸಂಚರಿಸಬಹುದಾದ ಕೆಳಸೇತುವೆಗಳು ಮತ್ತು ಗುರುಪುರ ಬಳಿ ಬೃಹತ್‌ ವಾಹನಗಳು ಸಂಚರಿಸಬಹುದಾದ ಮೇಲ್ಸೇತುವೆ ನಿರ್ಮಾಣದ ಕುರಿತು ಡಿಪಿಆರ್‌ನಲ್ಲಿ ಫೀಡ್‌ ಬ್ಯಾಕ್‌ ಕಂಪೆನಿ ವಿವರಗಳನ್ನು ನೀಡಲಿದೆ. ಗುರುಪುರ ನದಿಗೆ ಬೃಹತ್‌ ಸೇತುವೆ ನಿರ್ಮಾಣದ ಬಗ್ಗೆಯೂ ಅಧ್ಯಯನ ವರದಿಯನ್ನು ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರತ್ಯೇಕ ಯೋಜನಾ ಕಚೇರಿ:

ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣಾ ಕಾಮಗಾರಿಯನ್ನು ಎನ್‌ಎಚ್‌ಎಐನ ಚಿತ್ರದುರ್ಗ ಯೋಜನಾ ಅನುಷ್ಠಾನ ಘಟಕಕ್ಕೆ ಹೆಚ್ಚುವರಿಯಾಗಿ ವಹಿಸಲಾಗಿತ್ತು. ಈಗ ಈ ಯೋಜನೆಗೆ ಪ್ರತ್ಯೇಕವಾದ ಯೋಜನಾ ಅನುಷ್ಠಾನ ಘಟಕವನ್ನು (ಪಿಐಯು) ಅಸ್ತಿತ್ವಕ್ಕೆ ತರಲಾಗಿದೆ. ತುಮಕೂರಿನಲ್ಲಿ ಯೋಜನಾ ಕಚೇರಿಯನ್ನು ತೆರೆಯಲಾಗಿದೆ.

ಈಗ ಭೂಸ್ವಾಧೀನ ಪ್ರಕ್ರಿಯೆ ಮತ್ತು ಡಿಪಿಆರ್‌ ಸಿದ್ಧಪಡಿಸುವ ಕೆಲಸ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಪಿಐಯು ಜವಾಬ್ದಾರಿಗಳು ಕಡಿಮೆ ಇರುತ್ತವೆ. ಆದರೆ, ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾದ ಬಳಿಕ ಪಿಐಯು ಅಧಿಕಾರಿಗಳು ನಿತ್ಯವೂ ಕಾಮಗಾರಿ ಸ್ಥಳದಲ್ಲಿ ಇರಬೇಕಾಗುತ್ತದೆ. ಈ ಕಾರಣದಿಂದ ಕೆಲವು ಸಮಯದ ಬಳಿಕ ಪಿಐಯು ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಎನ್‌ಎಚ್‌ಎಐ ಅಧಿಕಾರಿಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು