ಮಂಗಳವಾರ, ಆಗಸ್ಟ್ 3, 2021
21 °C
ಬೆಂಗಳೂರು ಮೂಲದ ವ್ಯಕ್ತಿಗಳ ರಕ್ತದ ಮಾದರಿಯಲ್ಲಿ ಕಂಡುಬಂದ ರೋಗಾಣು, ಜಿಲ್ಲೆಯ ಜನರು ಆತಂಕಪಡಬೇಕಿಲ್ಲ ಎಂದ ಆರೋಗ್ಯ ಇಲಾಖೆ ಅಧಿಕಾರಿಗಳು

ಚಿಕ್ಕಬಳ್ಳಾಪುರ: ಎರಡು ಎಚ್‌1ಎನ್‌1 ಪ್ರಕರಣ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಈವರೆಗೆ ಎರಡು ಎಚ್‌1ಎನ್‌1 ಪ್ರಕರಣಗಳು ವರದಿಯಾಗಿವೆ. ಎಚ್‌1ಎನ್‌1 ಪೀಡಿತ ಇಬ್ಬರೂ ಬೆಂಗಳೂರು ಮೂಲದ ವ್ಯಕ್ತಿಗಳಾಗಿದ್ದಾರೆ. ಆದ್ದರಿಂದ ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ರವಿಶಂಕರ್.

‘ಜಿಲ್ಲೆಯಲ್ಲಿ ಎಚ್‌1ಎನ್‌1 ಶಂಕಿತ 16 ಜನರ ರಕ್ತದ ಮಾದರಿಯನ್ನು ರಾಷ್ಟ್ರೀಯ ವೈರಾಣು ವಿಜ್ಞಾನ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಪೈಕಿ ಇಬ್ಬರಲ್ಲಿ ಎಚ್‌1ಎನ್‌1 ದೃಢಪಟ್ಟಿತ್ತು. ಅವರಿಬ್ಬರೂ ಬೆಂಗಳೂರಿನ ಆಡುಗೋಡು, ಕೆ.ಆರ್.ಪುರದ ನಿವಾಸಿಗಳು. ಅವರು ಚಿಂತಾಮಣಿಗೆ ನೆಂಟರ ಮನೆಗೆ ಬಂದ ವೇಳೆ ಅನ್ಯಾರೋಗ್ಯಕ್ಕೆ ಈಡಾಗಿ ಚಿಕಿತ್ಸೆ ಪಡೆಯಲು ಹೋದಾಗ ಇದು ಪತ್ತೆಯಾಗಿತ್ತು. ಸದ್ಯ ಇಬ್ಬರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ’ ಎಂದು ಹೇಳಿದರು.

‘ಎಚ್‌1ಎನ್‌1 ವೈರಸ್‌ಗಳಿಂದ ಬರುವ ಕಾಯಿಲೆ. ಕುರಿತು ಜನ ಯಾವುದೇ ರೀತಿಯಲ್ಲೂ ಆತಂಕಪಡುವ ಅಗತ್ಯವಿಲ್ಲ. ಆದರೆ, ಮುಂಜಾಗ್ರತೆ ಅತ್ಯವಶ್ಯ. ವಿಪರೀತ ಜ್ವರ, ಕೆಮ್ಮು, ಗಂಟಲು ಉರಿತ, ವಾಂತಿ, ಭೇದಿ, ಮೈ–ಕೈ ನೋವು, ಸುಸ್ತು.. ಈ ಲಕ್ಷಣಗಳು ಕಂಡುಬಂದರೆ, ತಡಮಾಡದೆ ವೈದ್ಯರನ್ನು ಕಾಣಬೇಕು’ ಎಂದು ತಿಳಿಸಿದರು.

‘ಇದು ಗಾಳಿಯಿಂದ ಹರಡುವಂತಹ ಕಾಯಿಲೆಯಾದ್ದರಿಂದ ಸೋಂಕುಪೀಡಿತ ವ್ಯಕ್ತಿಯು ಕೆಮ್ಮಿದಾಗ ರೋಗಾಣುಗಳು ಗಾಳಿಯ ಸಂಪರ್ಕಕ್ಕೆ ಬಂದು ಸಾಂಕ್ರಾಮಿಕವಾಗಿ ಹರಡುತ್ತಾ ಹೋಗುತ್ತವೆ. ಆದ್ದರಿಂದ ಸೋಂಕುಪೀಡಿತರು, ಶಾಲಾ, ಕಾಲೇಜು, ಕಚೇರಿ, ಜನಸಂದಣಿ ಪ್ರದೇಶಕ್ಕೆ ಹೋಗದೆ, ಮನೆಯಲ್ಲಿಯೇ ವಿಶ್ರಾಂತಿ ಪಡೆಯಬೇಕು. ಸ್ವಚ್ಛತೆ ಕಾಯ್ದುಕೊಳ್ಳಬೇಕು. ಹೆಚ್ಚು ದ್ರವ ಆಹಾರ ಸೇವಿಸಬೇಕು. ಉಸಿರಾಟದ ತೊಂದರೆ ಹೆಚ್ಚಾದರೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು’ ಎಂದರು.

‘ಎಚ್‌1ಎನ್‌1 ಪೀಡಿತರು ಬಾಯಿಗೆ ಕರವಸ್ತ್ರ ಅಡ್ಡ ಹಿಡಿದು ಕೆಮ್ಮಬೇಕು. ಬೇರೆಯವರಿಗೆ ಹಸ್ತಲಾಘವ ಮಾಡಬಾರದು. ರೋಗಾಣು ಅಂಟಿದ 1ರಿಂದ 4 ದಿನಗಳಲ್ಲಿ ಸೂಕ್ತ ಚಿಕಿತ್ಸೆ ನೀಡುವುದು ತುಂಬಾ ಮುಖ್ಯ. ಸಕಾಲಕ್ಕೆ ಚಿಕಿತ್ಸೆ ಪಡೆದರೆ ಕಾಯಿಲೆ ತಕ್ಷಣ ತಹಬದಿಗೆ ಬರುತ್ತದೆ. ಈ ಬಗ್ಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು