ಗುರುವಾರ , ಅಕ್ಟೋಬರ್ 29, 2020
21 °C
ವಿರಾಟ್ ವೀರಾವೇಷ: ಶಾಯ್ ಹೋಪ್ ತಿರುಗೇಟು

ಭಾರತ – ವಿಂಡೀಸ್ ನಡುವಣ ಪಂದ್ಯ ರೋಚಕ ಟೈ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ: ದಾಖಲೆಗಳ ರಾಶಿ ಪೇರಿಸಿದ ವಿರಾಟ್ ಕೊಹ್ಲಿ ಮತ್ತು ಛಲದ ಆಟವಾಡಿದ ವೆಸ್ಟ್‌ ಇಂಡೀಸ್ ಬಳಗದ ನಡುವಿನ ಪಂದ್ಯವು ರೋಚಕ ಟೈನಲ್ಲಿ ಅಂತ್ಯ ಕಂಡಿತು.

ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರಿಗೆ ಭರಪೂರ ರಸದೌತಣ ನೀಡಿದ ಪಂದ್ಯದಲ್ಲಿ  ಒಟ್ಟು 642 ರನ್‌ಗಳು ಹರಿದವು. ಆದರೆ ಇಬ್ಬರೂ ಸೋಲಲಿಲ್ಲ. ಪ್ರತಿ ಹಂತದಲ್ಲಿಯೂ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಶತಕ ಹೊಡೆದರು. ಅದರಿಂದಾಗಿ ಭಾರತ ತಂಡವು 321 ರನ್‌ಗಳ ದೊಡ್ಡ ಮೊತ್ತ ಗಳಿಸಿತು.  ಆತಿಥೇಯ ತಂಡದ ಮೂವರು ಸ್ಪಿನ್ನರ್‌ಗಳು ಮತ್ತು ಇಬ್ಬರು ಮಧ್ಯಮವೇಗಿಗಳು ಆರಂಭದಲ್ಲಿಯೇ ಯಶಸ್ಸು ಕಂಡರು. ಆದರೆ ಅವರಿಗೆ ತಿರುಗೇಟು ನೀಡಿದ  ವಿಂಡೀಸ್ ಆಟಗಾರ ಶಾಯ್ ಹೋಪ್ ಶತಕ ದಾಖಲಿಸಿದರು. ಹೆಟ್ಮೆಯರ್ ಅರ್ಧಶತಕ ಹೊಡೆದರು. ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡಿ, ಭಾರತ ತಂಡದ ಗೆಲುವಿನ ಆಸೆಗೆ ಅಡ್ಡಿಯಾದರು. ಆದರೆ 950ನೇ ಏಕದಿನ ಪಂದ್ಯವನ್ನು ಆಡಿದ ಭಾರತವೂ ಸೋಲಿನ ನಿರಾಶೆಯಿಂದ ತಪ್ಪಿಸಿಕೊಂಡಿದ್ದು ವಿಶೇಷ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ಲಭಿಸಲಿಲ್ಲ. ಮೊದಲ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ್ದ ರೋಹಿತ್ ಶರ್ಮಾ  ಕೇವಲ ನಾಲ್ಕು ರನ್‌ ಗಳಿಸಿ ಔಟಾದರು. ಶಿಖರ್ ಧವನ್ ಜೊತೆಗೂಡಿದ ವಿರಾಟ್ ಕೊಹ್ಲಿ ತಮ್ಮ ಎಂದಿನ ಬೀಸಾಟಕ್ಕೆ ಮುನ್ನುಡಿ ಬರೆದರು. ಆದರೆ ತಂಡದ ಮೊತ್ತವು 40 ರನ್‌ಗಳಾಗುಷ್ಟರಲ್ಲಿ  ಶಿಖರ್ ಧವನ್ ಅವರು ಆ್ಯಷ್ಲೆ ನರ್ಸ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.  ಆಗ ಕ್ರೀಸ್‌ಗೆ ಬಂದ ಅಂಬಟಿ ರಾಯುಡು ಜೊತೆಗೂಡಿದ ಕೊಹ್ಲಿ ಬೌಲರ್‌ಗಳ ಬೆವರಿಳಿಸಿದರು.

ದಾಖಲೆಗಳ ರಾಶಿ: ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ಹತ್ತು ಸಾವಿರ ರನ್‌ಗಳನ್ನು ಪೇರಿಸಿದ ದಾಖಲೆ ಬರೆದರು. ಆಕರ್ಷಕ ಹೊಡೆತಗಳ ಮೂಲಕ ಇನಿಂಗ್ಸ್‌ ಕಟ್ಟಿದ ಅವರು 81 ರನ್‌ ಗಳಿಸಿದಾಗ ಈ ಸಾಧನೆ ಮಾಡಿದರು. ಆ ಮೂಲಕ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮರೆದರು.

ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 10 ವರ್ಷ, 68 ದಿನಗಳಲ್ಲಿ ಈ ಸಾಧನೆ ಮಾಡಿದ ಅವರು ರಾಹುಲ್ ದ್ರಾವಿಡ್ (10 ವರ್ಷ, 317ದಿನ) ಅವರ ದಾಖಲೆಯನ್ನು ಮೀರಿದರು. ಅಲ್ಲದೇ ಅತಿ ಕಡಿಮೆ ಎಸೆತಗಳಲ್ಲಿ ಅಂತರೆ 10,813 ಎಸೆತಗಳಲ್ಲಿ ಅವರು ಈ ಸಾಧನೆ ಮಾಡಿದ್ದು ವಿಶೇಷ. ಇಲ್ಲಿ ಶತಕ ದಾಖಲಿಸಿದ (ಔಟಾಗದೆ 157, 129 ಎಸೆತ, 13 ಬೌಂಡರಿ, 4 ಸಿಕ್ಸರ್)  ತಂಡವು 321 ರನ್‌ಗಳ ದೊಡ್ಡ ಮೊತ್ತವನ್ನು ಪೇರಿಸುವಂತೆ ನೋಡಿಕೊಂಡರು. ‌ ಇದರೊಂದಿಗೆ ಸತತ ಮೂರು ಏಕದಿನ ಪಂದ್ಯಗಳಲ್ಲಿ ಶತಕ ಬಾರಿಸಿದ ಮೊದಲ ಆಟಗಾರನಾದರು. ವೇಗವಾಗಿ ಎಂಟು ಸಾವಿರ ರನ್‌ ಗಳಿಸಿದ (137 ಇನಿಂಗ್ಸ್‌) ನಾಯಕನೆಂಬ ಹೆಗ್ಗಳಿಕೆಯೂ ಅವರದ್ದಾಯಿತು.   ಅಲ್ಲದೇ 2018ರಲ್ಲಿ ಇಲ್ಲಿಯವರೆಗೆ ಒಂದು ಸಾವಿರ ರನ್‌ಗಳನ್ನು ಗಳಿಸಿದ  ಅವರು ಹಾಶೀಂ ಆಮ್ಲಾ (2010) ಅವರ ದಾಖಲೆಯನ್ನು ಅಳಿಸಿಹಾಕಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು