ಮಂಡ್ಯ: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಗೆ ಜಯ, ಬಿಜೆಪಿಗೆ ದಾಖಲೆ ಮತ‌

7
23 ವರ್ಷಗಳ ನಂತರ ಅಧಿಕಾರ ಪಡೆದ ಎಲ್‌.ಆರ್‌.ಶಿವರಾಮೇಗೌಡ

ಮಂಡ್ಯ: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಗೆ ಜಯ, ಬಿಜೆಪಿಗೆ ದಾಖಲೆ ಮತ‌

Published:
Updated:
Deccan Herald

ಮಂಡ್ಯ: ಲೋಕಸಭೆ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ನಿರೀಕ್ಷೆಯಂತೆ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಎಲ್‌.ಆರ್.ಶಿವರಾಮೇಗೌಡ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಸೋಲು ಕಂಡಿದ್ದರೂ ದಾಖಲೆಯ ಮತಗಳಿಸಿರುವುದು ಈ ಉಪ ಸಮರದ ವಿಶೇಷವಾಗಿದೆ.

ನಗರದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಎಲ್‌.ಆರ್.ಶಿವರಾಮೇಗೌಡ 3,24,925 ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ಅವರು 23 ವರ್ಷಗಳ ನಂತರ ಮತ್ತೆ ಅಧಿಕಾರ ಪಡೆದರು. 1999ರ ನಂತರ ಅವರು ಹಲವು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಪ್ರಚಾರದುದ್ದಕ್ಕೂ ‘23 ವರ್ಷಗಳಿಂದ ನನಗೆ ಅಧಿಕಾರ ಇಲ್ಲ, ಈಗಲಾದರೂ ನನ್ನನ್ನು ಗೆಲ್ಲಿಸಿ, ರಾಜಕೀಯವಾಗಿ ನನಗೆ ಪುನರ್ಜನ್ಮ ಕೊಡಿ’ ಎಂದೇ ಅವರು ಅವಲತ್ತುಕೊಂಡಿದ್ದರು.

ಶಿವರಾಮೇಗೌಡ 5,69,302 ಮತ ಗಳಿಸಿದ್ದು ಅಂಬರೀಷ್‌, ಸಿ.ಎಸ್‌.ಪುಟ್ಟರಾಜು ಹಾಗೂ ರಮ್ಯಾ ಅವರ ದಾಖಲೆ ಮುರಿದಿದ್ದಾರೆ. 1998ರ ಲೋಕಸಭಾ ಚುನಾವಣೆಯಲ್ಲಿ ಅಂಬರೀಷ್‌ 1.80 ಲಕ್ಷ ಮತಗಳ ಅಂತರದಿಂದ ಜಯಗಳಿಸಿ ದಾಖಲೆ ಸೃಷ್ಟಿಸಿದ್ದರು. ಶಿವರಾಮೇಗೌಡರು ಅದಕ್ಕಿಂತ ಎರಡುಪಟ್ಟು ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದು ಹೊಸ ದಾಖಲೆ ಬರೆದಿದ್ದಾರೆ. 2013ರ ಉಪ ಚುನಾವಣೆಯಲ್ಲಿ ರಮ್ಯಾ 5,18,852 ಮತಗಳಿಸಿದ್ದರು. 2014 ಸಾರ್ವತ್ರಿಕ ಚುನಾವಣೆಯಲ್ಲಿ ಸಿ.ಎಸ್‌.ಪುಟ್ಟರಾಜು 5,24,370 ಮತ ಗಳಿಸಿದ್ದರು.

ಕಾಂಗ್ರೆಸ್‌ ಅಭ್ಯರ್ಥಿ ಕಣದಲ್ಲಿ ಇಲ್ಲದ ಕಾರಣ ಶಿವರಾಮೇಗೌಡರು 7 ಲಕ್ಷ ಮತ ಪಡೆಯುತ್ತಾರೆ ಎಂದೇ ಜೆಡಿಎಸ್‌ ಮುಖಂಡರು ಹೇಳಿಕೊಂಡಿದ್ದರು. ಕ್ಷೇತ್ರದ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರು, ಮೂವರು ಸಚಿವರನ್ನು ಒಳಗೊಂಡ ಜೆಡಿಎಸ್‌ ಭದ್ರಕೋಟೆಯಲ್ಲಿ ಮತಗಳು ತಪ್ಪುವುದಿಲ್ಲ ಎಂಬುದೇ ಅವರ ಲೆಕ್ಕಾಚಾರವಾಗಿತ್ತು. ಜೊತೆಗೆ ಕಾಂಗ್ರೆಸ್‌ ಬೆಂಬಲದಿಂದ ಕೊನೇಪಕ್ಷ 5 ಲಕ್ಷ ಮತಗಳ ಅಂತರ ದೊರೆಯುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ ಮತದಾರ ಸ್ಪಷ್ಟ ಉತ್ತರ ನೀಡಿದ್ದು ಬಿಜೆಪಿ  ಅಭ್ಯರ್ಥಿ ಡಾ.ಸಿದ್ದರಾಮಯ್ಯಗೆ 2,44,377 ಮತ ನೀಡಿದ್ದು ಏಳು ಮಂದಿ ಪಕ್ಷೇತರ ಅಭ್ಯರ್ಥಿಗಳಿಗೆ 63,277 ಮತ ನೀಡಿದ್ದಾರೆ.

‘ನಾನು ಈ ಗೆಲುವನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಸಲ್ಲಿಸುತ್ತೇನೆ. 7 ಲಕ್ಷ ಮತಗಳನ್ನು ನಾವು ನಿರೀಕ್ಷೆ ಮಾಡಿದ್ದೆವು. ಆದರೆ ಮತದಾನದ ಪ್ರಮಾಣ ಕಡಿಮೆ ಆಗಿರುವ ಕಾರಣ ಅಂತರ ಕಡಿಮೆಯಾಗಿದೆ’ ಎಂದು ಎಲ್‌.ಆರ್‌.ಶಿವರಾಮೇಗೌಡ ಹೇಳಿದರು.

ಬಿಜೆಪಿಗೆ ಇದು ದಾಖಲೆಯ ಮತ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ 2 ಲಕ್ಷ ಮತಗಳ ಗಡಿಯನ್ನು ದಾಟಿದ್ದಾರೆ. 2009ರ ಲೋಕಸಭಾ ಚುನಾವಣೆಯಲ್ಲಿ ಇದೇ ಎಲ್‌.ಆರ್‌.ಶಿವರಾಮೇಗೌಡ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 1.60 ಲಕ್ಷ ಮತ ಗಳಿಸಿದ್ದರು. ಕಾಂಗ್ರೆಸ್‌–ಜೆಡಿಎಸ್‌ ಸ್ಥಳೀಯ ಮುಖಂಡರಲ್ಲಿ ಮನೆಮಾಡಿದ್ದ ಅಸಮಾಧಾನ ಬಿಜೆಪಿ ದಾಖಲೆಯ ಮತ ಪಡೆಯಲು ಸಹಾಯಕವಾಗಿದೆ. ಕೆಲ ಕಾಂಗ್ರೆಸ್‌ ಮುಖಂಡರು ತಟಸ್ಥವಾಗಿ ಉಳಿದಿದ್ದ ಹಿನ್ನೆಲೆಯಲ್ಲಿ ಅದು ಬಿಜೆಪಿಗೆ ಹೆಚ್ಚು ಮತ ಬೀಳಲು ಕಾರಣವಾಗಿದೆ. ಜೊತೆಗೆ ಶ್ರೀರಂಗಟ್ಟಣ ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬಂದಿದ್ದು ರೈತಸಂಘದ ಬೆಂಬಲವೂ ಇದಕ್ಕೆ ಕಾರಣವಾಗಿದೆ.

‘ನಾನು ಬರೀ ಸಿದ್ದರಾಮಯ್ಯನಾಗಿ ಕ್ಷೇತ್ರಕ್ಕೆ ಬಂದೆ. ಆದರೆ ಈಗ ನನಗೊಂದು ಶಕ್ತಿ ಬಂದಿದೆ. ನಾನು ನೈತಿಕವಾಗಿ ಜನರ ಬಳಿ ತೆರಳಿ ಮತಯಾಚನೆ ಮಾಡಿದ್ದೇನೆ. ಬೇಳೂರು ಗೋಪಾಲಕೃಷ್ಣ ಹೇಳಿಕೆ, ರಾಮನಗರ ಬಿಜೆಪಿ ಅಭ್ಯರ್ಥಿಯ ನಿವೃತ್ತಿಯಿಂದ ನನಗೆ ಹಿನ್ನಡೆಯಾಯಿತು’ ಎಂದು ಡಾ.ಸಿದ್ದರಾಮಯ್ಯ ಹೇಳಿದರು.

ಬಿಕೋ ಎಂದ ಕಾಲೇಜು ಮೈದಾನ

ಜಿಲ್ಲೆಯಲ್ಲಿ ಪ್ರತಿ ಚುನಾವಣೆಯ ಫಲಿತಾಂಶದ ದಿನ ಎಣಿಕೆ ಕೇಂದ್ರದ ಎದುರು ಅಪಾರ ಸಂಖ್ಯೆಯ ಜನರು ಸೇರುವುದು ಸಾಮಾನ್ಯ. ಆದರೆ ಮಂಗಳವಾರ ಸರ್ಕಾರಿ ಮಹಾವಿದ್ಯಾಲಯದ ಆವರಣ ಬಿಕೋ ಎನ್ನುತ್ತಿತ್ತು. ಭದ್ರತೆಗಾಗಿ ನೂರಾರು ಸಂಖ್ಯೆಯ ಪೊಲೀಸರು ಕರ್ತವ್ಯದಲ್ಲಿದ್ದರು. ಜನರ ನಿಯಂತ್ರಣಕ್ಕಾಗಿ ಆವರಣದಲ್ಲಿ ಬ್ಯಾರಿಕೇಡ್‌ ಹಾಕಲಾಗಿತ್ತು. ಆದರೆ ಮೈದಾನ ಜನರಿಲ್ಲದೇ ಭಣಗುಡುತ್ತಿತ್ತು. ಬರೀ ಪೊಲೀಸರೇ ಕಾಣುತ್ತಿದ್ದರು. ಯಾವ ಪಕ್ಷಗಳ ಬಾವುಟಗಳೂ ಕಾಣಲಿಲ್ಲ. ಗೆಲುವು ಘೋಷಣೆಯಾದ ನಂತರ ಶಿವರಾಮೇಗೌಡ ಎಣಿಕೆ ಕೇಂದ್ರಕ್ಕೆ ಬಂದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೇರಿ ಶಾಸಕರು, ವಿಧಾನಪರಿಷತ್‌ ಸದಸ್ಯರೂ ಬಂದರು. ಆದರೆ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಇರಲಿಲ್ಲ. ಪ್ರತಿ ಬಾರಿ ಇರುತ್ತಿದ್ದ ಬಣ್ಣದೋಕುಳಿ, ಪಟಾಕಿ ಸದ್ದು ಯಾವುದೂ ಇರಲಿಲ್ಲ.

15,478 ನೋಟಾ ಚಲಾವಣೆ

15,478 ನೋಟಾ ಚಲಾವಣೆಗೊಂಡಿದ್ದು ಈ ಉಪ ಚುನಾವಣೆಯ ಮೇಲೆ ಮತದಾರನಿಗಿದ್ದ ನಿರಾಸಕ್ತಿ ಮತ್ತೊಮ್ಮೆ ಅನಾವರಣಗೊಂಡಿದೆ. ಚುನಾವಣೆಯ ದಿನ ಅತೀ ಕಡಿಮೆ ಪ್ರಮಾಣದ ಮತದಾನ ನಡೆದಿದ್ದು ಜನರು ಮತಗಟ್ಟೆ ಕಡೆಗೆ ತೆರಳಲು ಆಸಕ್ತಿ ತೋರಲಿಲ್ಲ.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !