ಅನಂತಕುಮಾರ್‌ಗೆ ಬಿಜೆಪಿ ಕಾರ್ಯಕರ್ತರ ಶ್ರದ್ಧಾಂಜಲಿ

7

ಅನಂತಕುಮಾರ್‌ಗೆ ಬಿಜೆಪಿ ಕಾರ್ಯಕರ್ತರ ಶ್ರದ್ಧಾಂಜಲಿ

Published:
Updated:
Deccan Herald

ಕೋಲಾರ: ಕೇಂದ್ರ ಸಚಿವ ಅನಂತಕುಮಾರ್ ನಿಧನದ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಶ್ರದ್ಧಾಂಜಲಿ ಸಲ್ಲಿಸಿದರು.

‘ಎಬಿವಿಪಿಯಿಂದ ಬೆಳೆದು ಬಂದ ಅನಂತಕುಮಾರ್ ಪಕ್ಷದಲ್ಲಿ ಹಲವು ಹುದ್ದೆ ಸಮರ್ಥವಾಗಿ ನಿಭಾಯಿಸಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿ ಅನೇಕ ಜನಪರ ಯೋಜನೆ ಜಾರಿಗೆ ತಂದಿದ್ದರು’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಡಿ.ರಾಮಚಂದ್ರ ಸ್ಮರಿಸಿದರು.

‘ಅನಂತಕುಮಾರ್‌ ಪಕ್ಷದ ಸಾಮಾನ್ಯ ಕಾರ್ಯಕರ್ತರ ಹೆಸರು ಹೇಳಿ ಗುರುತು ಹಿಡಿದು ಮಾತನಾಡಿಸುತ್ತಿದ್ದರು. ಅವರು ಕೊನೆಯ ಬಾರಿಗೆ ತಾಲ್ಲೂಕಿನ ವೇಮಗಲ್‌ನಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಜಿಲ್ಲೆಯ ಅನೇಕ ಮುಖಂಡರ ಜತೆ ಅವರ ಒಡನಾಟವಿತ್ತು’ ಎಂದು ಹೇಳಿದರು.

‘ಅನಂತಕುಮಾರ್ ಯಾವುದೇ ಖಾತೆಯನ್ನು ನಿಭಾಯಿಸುವಷ್ಟು ಸಮರ್ಥರಾಗಿದ್ದರು. ಹೀಗಾಗಿಯೇ ಪ್ರಧಾನಿ ಮೋದಿ, ಅವರಿಗೆ ರಸಗೊಬ್ಬರ ಖಾತೆ ಜತೆಗೆ ಸಂಸದೀಯ ವ್ಯವಹಾರಗಳ ಖಾತೆಯ ಜವಾಬ್ದಾರಿ ವಹಿಸಿದ್ದರು. ಅನಂತಕುಮಾರ್‌ ಯಾವ ಕಾರ್ಯಕರ್ತರನ್ನೂ ನೋಯಿಸುತ್ತಿರಲಿಲ್ಲ. ಅವರ ಅಕಾಲಿಕ ನಿಧನದಿಂದ ಕಾರ್ಯಕರ್ತರಿಗೆ ದಿಕ್ಕು ತೋಚದಂತಾಗಿದೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಭಾವುಕರಾದರು.

‘ಬೇರು ಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ಅನಂತಕುಮಾರ್ ಅವರ ಪಾತ್ರ ಮಹತ್ವದ್ದು. ಹಳೆ ಬೇರು- ಹೊಸ ಚಿಗುರು ಎಂಬ ನಾಣ್ಣುಡಿಯಂತೆ ಅವರು ಪಕ್ಷ ಸಂಘಟನೆಯಲ್ಲಿ ಹಿರಿಯರ ಜತೆಗೆ ಯುವ ಸಮುದಾಯವನ್ನು ಜತೆಯಲ್ಲೇ ಕೊಂಡೊಯ್ದರು’ ಎಂದು ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ಶ್ರೀನಿವಾಸಪ್ಪ ಬಣ್ಣಿಸಿದರು.

ಕಾರ್ಯಕರ್ತರಿಗೆ ಆಘಾತ: ‘ಸರಳ ಸಜ್ಜನಿಕೆಗೆ ಹೆಸರಾಗಿದ್ದ ಅನಂತಕುಮಾರ್ ಕಾರ್ಯಕರ್ತರನ್ನು ಅಕ್ಕರೆಯಿಂದ ಮಾತನಾಡಿಸುತ್ತಿದ್ದರು. ಅವರ ಸಾವಿನಿಂದ ಕಾರ್ಯಕರ್ತರಿಗೆ ಆಘಾತವಾಗಿದೆ’ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

‘ರಸಗೊಬ್ಬರ ಸಮಸ್ಯೆ ಪರಿಹರಿಸಿದ ಕೀರ್ತಿ ಅನಂತಕುಮಾರ್ ಅವರಿಗೆ ಸಲ್ಲುತ್ತದೆ. ಅವರು ಸಚಿವರಾದ ನಂತರ ರೈತರಿಗೂ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡರು. ಬೇವು ಲೇಪಿತ ಯೂರಿಯಾ ಗೊಬ್ಬರ ಪರಿಚಯಿಸಿದರು’ ಎಂದು ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಬೈಚಪ್ಪ ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಮಮತಾ, ಸದಸ್ಯರಾದ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಸಿ.ನಾರಾಯಣಸ್ವಾಮಿ, ಕೆಂಪಣ್ಣ, ಅರುಣಾ, ಮಂಜುಳಾ, ಸುನಿತಾ, ಅಶ್ವಿನಿ, ರಾಮಣ್ಣ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !