‘ಅನಂತ್‌ ಚತುರ ರಾಜಕೀಯ ತಂತ್ರಗಾರ’

7
ಮಾಜಿ ಶಾಸಕ ಎನ್‌.ಯೋಗೀಶ್ ಭಟ್ ಗುಣಗಾನ

‘ಅನಂತ್‌ ಚತುರ ರಾಜಕೀಯ ತಂತ್ರಗಾರ’

Published:
Updated:
Deccan Herald

ಮಂಗಳೂರು: ‘ಅನಂತಕುಮಾರ್‌ ಒಬ್ಬ ಚತುರ ರಾಜಕೀಯ ತಂತ್ರಗಾರರಾಗಿದ್ದರು. ಷತಂತ್ರಗಾರಿಕೆಯ ಮೂಲಕವೇ ರಾಜಕೀಯ ಬಿಕ್ಕಟ್ಟುಗಳನ್ನು ಬಗೆಹರಿಸುವ ಕಲೆ ಅವರಿಗೆ ಸಿದ್ಧಿಸಿತ್ತು’ ಎಂದು ಮಾಜಿ ಶಾಸಕ ಎನ್‌.ಯೋಗೀಶ್‌ ಭಟ್‌ ಹೇಳಿದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಚೇರಿಯಲ್ಲಿ ಸೋಮವಾರ ನಡೆದ ಕೇಂದ್ರ ಸಚಿವ ಅನಂತಕುಮಾರ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ‘ರಾಜಕೀಯ ಬಿಕ್ಕಟ್ಟುಗಳು ಎಷ್ಟೇ ದೊಡ್ಡದಾಗಿದ್ದರೂ ನಿರಾಯಾಸವಾಗಿ ಅವುಗಳಿಗೆ ಉತ್ತರ ಹುಡುಕುತ್ತಿದ್ದರು. ಒಳಗಿನಿಂದಲೇ ಬಿಕ್ಕಟ್ಟುಗಳನ್ನು ಬಗೆಹರಿಸುವ ಚಾಕಚಕ್ಯತೆ ಅವರಿಗೆ ಇತ್ತು’ ಎಂದರು.

ರಾಷ್ಟ್ರ ರಾಜಕಾರಣದಲ್ಲಿ ಅವರು ಹಲವು ಸಂದರ್ಭಗಳಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಮಂಡಲ್‌ ವರದಿ ವಿರುದ್ಧ ಚಳವಳಿ ಆರಂಭವಾದಾಗ ಅದಕ್ಕೆ ಪ್ರತಿಯಾಗಿ ರಥಯಾತ್ರೆಯ ಅಸ್ತ್ರವನ್ನು ರೂಪಿಸಿದ್ದು ಅನಂತಕುಮಾರ್‌. ಗೋಧ್ರಾ ಗಲಭೆಯ ಸಮಯದಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಂದ ರಾಜೀನಾಮೆ ಪಡೆಯುವ ಯೋಚನೆ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಲ್ಲಿತ್ತು. ಆದರೆ, ಎಲ್‌.ಕೆ.ಅಡ್ವಾಣಿ ಅವರ ಮೂಲಕ ವಾಜಪೇಯಿ ಅವರ ಮನವೊಲಿಸಿದ್ದು ಅನಂತಕುಮಾರ್‌ ಎಂದು ನೆನಪಿಸಿದರು.

ಕಾವೇರಿ ಮತ್ತು ಮಹದಾಯಿ ನದಿ ನೀರು ಹಂಚಿಕೆ ವಿವಾದಗಳಲ್ಲಿ ಅನಂತಕುಮಾರ್‌ ಕರ್ನಾಟಕದ ಪರವಾಗಿ ಪ್ರಬಲವಾಗಿ ಲಾಬಿ ನಡೆಸುತ್ತಿದ್ದರು. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಬಿಜೆಪಿ ಮುಖಂಡ ಸತೀಶ್‌ ಪ್ರಭು ಮಾತನಾಡಿ, ‘ಅನಂತಕುಮಾರ್‌ ಅವರು ಪಕ್ಷದ ಕಾರ್ಯಕರ್ತರ ಮನವೊಲಿಕೆ ಮಾಡುವಲ್ಲಿ ನಿಸ್ಸೀಮರಾಗಿದ್ದರು. ಅವರು ಯಾವತ್ತೂ ಚುನಾವಣೆ ಬಳಿಕ ರಾಜಕಾರಣ ಮಾಡುತ್ತಿರಲಿಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಎಲ್ಲರೊಂದಿಗೂ ಮುಕ್ತವಾಗಿ ಚರ್ಚಿಸುತ್ತಿದ್ದರು. ಜನಾನುರಾಗಿ ಆಗಿದ್ದ ಕಾರಣದಿಂದಲೇ ಸ್ವಜಾತಿಯ ಮತದಾರರು ಕಡಿಮೆ ಸಂಖ್ಯೆಯಲ್ಲಿದ್ದರೂ ನಿರಂತರವಾಗಿ ಗೆಲುವು ಸಾಧಿಸಲು ಸಾಧ್ಯವಾಯಿತು’ ಎಂದು ಹೇಳಿದರು.

‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ಅವರು ಸಕ್ರಿಯರಾಗಿದ್ದ ದಿನಗಳಿಂದಲೂ ನಾನು ಅವರೊಂದಿಗೆ ಒಡನಾಟ ಇರಿಸಿಕೊಂಡಿದ್ದೆ. ಮಂಗಳೂರಿಗೆ ಬಂದಾಗ ನಮ್ಮ ಮನೆಯಲ್ಲಿ ತಂಗುತ್ತಿದ್ದರು. ಊಟ, ಉಪಾಹಾರದ ಬಗ್ಗೆ ಅವರಿಗೆ ವಿಶೇಷ ಆಸಕ್ತಿ. ನಿರ್ದಿಷ್ಟ ಖಾದ್ಯಗಳನ್ನು ಕೇಳಿ ಪಡೆಯುತ್ತಿದ್ದರು’ ಎಂದು ನೆನಪಿಸಿಕೊಂಡರು.

ವಿಧಾನ ಪರಿಷತ್‌ನ ಮಾಜಿ ಸದಸ್ಯ ಬಿ.ಬಾಲಕೃಷ್ಣ ಭಟ್‌ ಮಾತನಾಡಿ, ‘ಕೇಂದ್ರ ಸರ್ಕಾರದಲ್ಲಿ ಅನಂತಕುಮಾರ್‌ ಹತ್ತು ಖಾತೆಗಳನ್ನು ನಿರ್ವಹಿಸಿದ್ದರು. ಎಲ್‌.ಕೆ.ಅಡ್ವಾಣಿ ಅವರನ್ನು ಹೊರತುಪಡಿಸಿದರೆ ಅತ್ಯಧಿಕ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಜಿಎಸ್‌ಟಿ ಮಸೂದೆಗೆ ಸಂಬಂಧಿಸಿದಂತೆ ಸಂವಿಧಾನದ ತಿದ್ದುಪಡಿ ಮಾಡುವಾಗ ವಿರೋಧ ಪಕ್ಷಗಳನ್ನು ಮನವೊಲಿಕೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು’ ಎಂದರು.

ಬಿಜೆಪಿಯ ಹಲವು ಮುಖಂಡರು ಮತ್ತು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಒಂದು ನಿಮಿಷ ಮೌನ ಆಚರಿಸುವ ಮೂಲಕ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !