ಬಿಸಿನೆಸ್‌ ರೆಸಾರ್ಟ್‌ ಕ್ಲಾರ್ಕ್ಸ್‌ ಎಕ್ಸೋಟಿಕಾ

7

ಬಿಸಿನೆಸ್‌ ರೆಸಾರ್ಟ್‌ ಕ್ಲಾರ್ಕ್ಸ್‌ ಎಕ್ಸೋಟಿಕಾ

Published:
Updated:
Deccan Herald

ನಗರದ ಬದುಕಿನ ಜಂಜಡದಿಂದ ದೂರವಾದ ಪ್ರಶಾಂತ ಪರಿಸರದಲ್ಲಿ ಮನೆ ಕಟ್ಟಿಕೊಂಡು ನೆಲೆಸಬೇಕು, ಇಂತಹ ಹಂಬಲ ಹೊಂದಿದವರಿಗೆ ಸ್ಥಳಾವಕಾಶ ಒದಗಿಸಬೇಕು ಎಂಬ ಕನಸಿನಿಂದ ನಗರದ ಹೊರ ವಲಯದಲ್ಲಿ 1996ರಲ್ಲಿ ಆರಂಭವಾಗಿದ್ದ ಹಾಲಿವುಡ್‌ ಟೌನ್‌ ವಸತಿ ಯೋಜನೆಯು ಆನಂತರ ಕ್ಲಾರ್ಕ್ಸ್‌ ಎಕ್ಸೋಟಿಕಾ (Clarks Exotica) ಬಿಸಿನೆಸ್‌ ರೆಸಾರ್ಟ್‌ ಆಗಿ ರೂಪಾಂತರಗೊಂಡಿದೆ. ಕಾರ್ಪೊರೇಟ್‌ ಜಗತ್ತಿನ ಸಭೆ –ಸಮಾರಂಭಗಳಿಗೆ ಸೂಕ್ತ ತಾಣವಾಗಿ ಬಳಕೆಯಾಗುತ್ತಿದೆ.

ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಮಂಗಳೂರಿನ ರೋನಾಲ್ಡ್‌ ಕೊಲಾಸೊ ಅವರಿಂದ ರೂಪುಗೊಂಡಿದ್ದ ‘ಹಾಲಿವುಡ್‌ ಟೌನ್‌’ ಯೋಜನೆಗೆ ಆನಂತರ ಇತರರೂ ಕೈಜೋಡಿಸಿದ್ದರು. ಹೀಗಾಗಿ ವಿಶಾಲವಾದ ಸ್ಥಳದಲ್ಲಿ ಇಲ್ಲಿ ಸ್ವತಂತ್ರ ವಿಲ್ಲಾಗಳು ಅಸ್ತಿತ್ವಕ್ಕೆ ಬಂದಿದ್ದವು. ಇಲ್ಲಿ ಬಂದು ನೆಲೆಸಿದವರ ಅಗತ್ಯಗಳಿಗಾಗಿ 2007ರಲ್ಲಿ ಬ್ಯಾಡ್ಮಿಂಟನ್‌, ಸ್ಕ್ವಾಷ್‌, ಬ್ರಿಲಿಯರ್ಡ್ಸ್‌, ಈಜುಗೊಳ, ರೆಸ್ಟೊರೆಂಟ್ ಒಳಗೊಂಡ ಸಕಲ ಸೌಲಭ್ಯ ಸಜ್ಜಿತ ಅಂತರರಾಷ್ಟ್ರೀಯ ಮಟ್ಟದ ಕ್ಲಬ್‌ ಹೌಸ್‌ ಆರಂಭಿಸಲಾಗಿತ್ತು. ಈ ಕ್ಲಬ್‌ ಹೌಸ್‌ ನಿರ್ವಹಣೆಗೆ ಆರಂಭದಲ್ಲಿ ಪಂಚತಾರಾ ಹೋಟೆಲ್‌ ಸಮೂಹಗಳು ಆಸಕ್ತಿ ತೋರಿದ್ದವು. ಬಾಡಿಗೆ ಕೋಣೆಗಳು ಇರದ ಬರೀ ಕ್ಲಬ್‌ ಹೌಸ್ ನಿರ್ವಹಣೆ ಆರ್ಥಿಕವಾಗಿ ಲಾಭದಾಯಕವಾಗಿರದ ಕಾರಣಕ್ಕೆ ಇವುಗಳು ಹಿಂದೆ ಸರಿದಿದ್ದವು. ಇದರಿಂದ ಧೃತಿಗೆಡದ ಕಲೋಸಾ ಅವರು ತಮ್ಮ ಪರಿಚಯದ ಕ್ಲಾರ್ಕ್ಸ್‌ ಗ್ರೂಪ್‌ನ ವಿವೇಕ್ ಕುಮಾರ್‌ ಮತ್ತು ಅನುಪ ಕುಮಾರ್‌ ಅವರ ಜತೆ ಈ ಕ್ಲಬ್‌ ಹೌಸ್‌ಗೆ ಪೂರಕವಾಗಿ ಪಂಚತಾರಾ ಸೌಲಭ್ಯದ ವಿಲಾಸಿ ಕೋಣೆ, ವಿಶಾಲ ಸಭಾಂಗಣಗಳನ್ನು ನಿರ್ಮಿಸಿ ಬಿಸಿನೆಸ್‌ ರೆಸಾರ್ಟ್‌ ಆಗಿ ಅಭಿವೃದ್ಧಿಪಡಿಸಿದ್ದಾರೆ. ಇದೊಂದು ಬೆಂಗಳೂರಿನ ಏಕೈಕ ಬಿಸಿನೆಸ್‌ ರೆಸಾರ್ಟ್‌ ಆಗಿದ್ದು, ಹತ್ತನೇ ವರ್ಷಾಚರಣೆ ಆಚರಿಸುತ್ತಿದೆ. ಕ್ಲಾರ್ಕ್ಸ್‌ ಸಮೂಹದಿಂದಲೇ ಈ ಬಿಸಿನೆಸ್‌ ರೆಸಾರ್ಟ್‌ ಸಂಪೂರ್ಣವಾಗಿ ನಿರ್ವಹಣೆಯಾಗುತ್ತಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ  11 ಕಿ. ಮೀ. ದೂರದಲ್ಲಿ ಇರುವ ರೆಸಾರ್ಟ್‌ಗೆ 15 ನಿಮಿಷದಲ್ಲಿ ತಲುಪಬಹುದು.

70 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ರೂಪುಗೊಂಡಿರುವ ರೆಸಾರ್ಟ್‌ನಲ್ಲಿ ಕಾರ್ಪೊರೇಟ್‌ ಸಮಾವೇಶ, ಬೋರ್ಡ್‌ರೂಂ ಸಭೆ, ಉದ್ದಿಮೆ ಸಂಬಂಧಿ ಸಮ್ಮೇಳನ ಮತ್ತು ಕೌಟುಂಬಿಕ ಸಮಾರಂಭಗಳಾದ ಮಕ್ಕಳ ಜನ್ಮ ದಿನ, ನಾಮಕರಣ, ಮದುವೆಗಳೂ ನಡೆಯುತ್ತವೆ. ಓಸಿಯನ್ ಕನ್ವೆಷನ್‌ ಸೆಂಟರ್‌ ಬೆಂಗಳೂರಿನ ಅತಿದೊಡ್ಡ ಸಭಾಂಗಣಗಳಲ್ಲಿ ಒಂದಾಗಿದೆ. ಸೆವೆಂತ್ ಹೆವೆನ್‌ ವೆಲ್‌ನೆಸ್‌ ಸ್ಪಾ  ಕೇಂದ್ರವು 14 ಕೋಣೆಗಳನ್ನು ಒಳಗೊಂಡಿದ್ದು, ಆಯುರ್ವೇದ, ಪಾಶ್ಚಿಮಾತ್ಯ, ಥಾಯ್‌ ಮತ್ತು ಹೈಡ್ರೊಥೆರಪಿ ಒಳಗೊಂಡಿದೆ.

ಸಾಲು ಸಾಲಾಗಿ ಬೆಳೆದು ನಿಂತಿರುವ ಮರಗಳ ವಿಶಾಲವಾದ ಹಸಿರು ಪರಿಸರ, ಎಲ್ಲೆಡೆ ಕಂಡು ಬರುವ ಸ್ವಚ್ಛತೆ, ಶುದ್ಧ ಗಾಳಿ, ವಿಶಾಲ ರಸ್ತೆ, ಖಾಸಗಿ ಭದ್ರತಾ ಸಿಬ್ಬಂದಿ – ಇವೆಲ್ಲವೂ ಈ ಬಿಸಿನೆಸ್‌ ರೆಸಾರ್ಟ್‌ನ ಆಕರ್ಷಣೆ ಹೆಚ್ಚಿಸಿವೆ. ಕ್ರೀಡಾ ಸೌಲಭ್ಯ, ವಿಶಾಲವಾದ ಈಜುಗೊಳ, ದೊಡ್ಡ ಸಭಾಂಗಣ ಮತ್ತಿತರ ಸೌಲಭ್ಯಗಳಿಂದ ಸುಸಜ್ಜಿತವಾಗಿರುವ ಈ ಬಿಸಿನೆಸ್‌ ರೆಸಾರ್ಟ್‌ ನಗರದಲ್ಲಿನ ಪಂಚತಾರಾ ಹೋಟೆಲ್‌ಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿ ಕಾರ್ಪೊರೇಟ್‌ ಜಗತ್ತಿನ ಗಮನ ಸೆಳೆಯುತ್ತಿದೆ.

 25 ಸದಸ್ಯರಿಗೆ ಸಾಲುವ ಬೋರ್ಡ್‌ರೂಂನಿಂದ ಹಿಡಿದು, 50 ಸಾವಿರ ಚದರ ಅಡಿಯ ಏಕಕಾಲದಲ್ಲಿ 3000 ಜನರು ಕುಳಿತುಕೊಳ್ಳಲು ಸ್ಥಳಾವಕಾಶ ಇರುವ ‘ಓಷನ್‌ ಹಾಲ್‌’ ಸೇರಿದಂತೆ 11 ಸಭಾಂಗಣಗಳು ಇವೆ. ಆರಂಭದಲ್ಲಿ 21 ಕೋಣೆಗಳಿಂದ ಆರಂಭವಾದ ಈ ಬಿಸಿನೆಸ್‌ ರೆಸಾರ್ಟ್‌ನಲ್ಲಿ ಈಗ 141 ಕೋಣೆಗಳಿವೆ. 10 ವರ್ಷಗಳಲ್ಲಿ ಕಾರ್ಪೊರೇಟ್‌ ಜಗತ್ತಿನ ಸಭೆ ಸಮಾರಂಭಗಳಿಗೆ ಆತಿಥ್ಯ ಒದಗಿಸುತ್ತ ವರ್ಷದಿಂದ ವರ್ಷಕ್ಕೆ ವಹಿವಾಟನ್ನು ಶೇ 17ರಷ್ಟು ಹೆಚ್ಚಿಸುತ್ತ ಮುನ್ನಡೆಯುತ್ತಿದೆ.

ಪ್ರತಿ ದಿನ 5000 ವೈದ್ಯರು ಭಾಗವಹಿಸಿದ್ದ ಅಖಿಲ ಭಾರತ ಕ್ಯಾನ್ಸರ್‌ ಕಾಂಗ್ರೆಸ್‌ ಅನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಇದರದು. 2019ರ ಜನವರಿಯಲ್ಲಿ ನಾಲ್ಕು ದಿನಗಳ ಕಾಲ ಚರ್ಮ ತಜ್ಞರ ದೊಡ್ಡ ಸಮಾವೇಶವೂ ಇಲ್ಲಿ ನಡೆಯಲಿದೆ. ರೆಸಾರ್ಟ್‌ನ ಶೇ 50ರಷ್ಟು ವಹಿವಾಟು ಐ.ಟಿ ಸಂಸ್ಥೆಗಳಿಂದಲೇ ಬರುತ್ತದೆ. 

‘ಸಮ್ಮೇಳನದಲ್ಲಿ ಭಾಗಿಯಾದವರು ಸಮಾವೇಶದ ನಂತರ ವಾಕಿಂಗ್‌, ಜಾಗಿಂಗ್‌, ಸೈಕ್ಲಿಂಗ್‌, ಸ್ವಿಮ್ಮಿಂಗ್‌ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿ ಮೈ ಮನ ಹಗುರಗೊಳಿಸಿಕೊಳ್ಳಬಹುದು. ಬೆಂಗಳೂರಿನ ಯಾವುದೇ ಪಂಚತಾರಾ ಹೋಟೆಲ್‌ಗಳಲ್ಲಿ ಈ ಎಲ್ಲ ಸೌಲಭ್ಯಗಳು ದೊರೆಯುವುದಿಲ್ಲ. ವರ್ಷಪೂರ್ತಿ ಸರಾಸರಿ ಶೇ 80ರಷ್ಟು ಕೋಣೆಗಳು ಭರ್ತಿಯಾಗುತ್ತಿರುವುದು ಕಾರ್ಪೊರೇಟ್ ಜಗತ್ತಿನಲ್ಲಿ ಇದಕ್ಕೆ ಸಿಕ್ಕಿರುವ ಮನ್ನಣೆಗೆ ಸಾಕ್ಷಿಯಾಗಿದೆ’ ಎಂದು ಕ್ಲಾರ್ಕ್ಸ್‌ ಎಕ್ಸೋಟಿಕಾ ಕನ್ವೆನ್ಷನ್‌ ರೆಸಾರ್ಟ್‌ ಆ್ಯಂಡ್ ಸ್ಪಾದ ಸಿಇಒ ಬಾಲಾಜಿ ಅವರು ಹೇಳುತ್ತಾರೆ.

‘ವಾರಾಂತ್ಯದಲ್ಲಿ ಕೌಟುಂಬಿಕ ವಿಹಾರಕ್ಕೂ ಇಲ್ಲಿ ಅವಕಾಶ ಇದೆ. ಈಜುಗೊಳದ ಪಕ್ಕದ ಬ್ರಂಚ್‌ ಮತ್ತು ಮಧ್ಯಾಹ್ನದ ನಂತದ ಹೈಟೀಗೆ ಪ್ರತಿ ವ್ಯಕ್ತಿಗೆ ₹ 1,400 (ತೆರಿಗೆಗಳು ಪ್ರತ್ಯೇಕ) ಶುಲ್ಕ ನಿಗದಿ ಮಾಡಲಾಗಿದೆ. ಹೀಗೆ ಪ್ರವೇಶ ಪಡೆದವರು ಕ್ರೀಡಾ ಸೌಲಭ್ಯಗಳನ್ನೆಲ್ಲ ಬಳಸಿಕೊಳ್ಳಬಹುದು. ಯಾರು ಬೇಕಾದರೂ ಬರಬಹುದು. ಶುಲ್ಕ ಪಾವತಿಸಿದರೆ ಕೈಗೆ ಬ್ಯಾಂಡ್‌ ಕಟ್ಟಿ ಪ್ರವೇಶ ನೀಡಲಾಗುತ್ತದೆ. ಭಾನುವಾರ ಹೊರತುಪಡಿಸಿ ವಾರದ ಇತರ ದಿನಗಳಲ್ಲಿ ‘ಡೇ ಔಟ್ಸ್‌’ – ಕೂಡ ಇರುತ್ತದೆ. ಪ್ರತಿ ವ್ಯಕ್ತಿಗೆ ₹ 1,200 ಪಾವತಿಸಿ ರೆಗ್ಯುಲರ್‌ ಬಫೆ ಮತ್ತು ಇತರ ಆ್ಯಕ್ಟಿವಿಟಿಗಳಲ್ಲೂ ಭಾಗವಹಿಸಬಹುದು. ‘ಡೆಸ್ಟಿನೇಷನ್‌ ವೆಡ್ಡಿಂಗ್‌’ಗೆ ಒಲವು ತೋರುವ ಕುಟುಂಬಗಳು ಇಲ್ಲಿ ಮದುವೆಗಳನ್ನೂ ಆಯೋಜಿಸುತ್ತವೆ. ವಿವಿಧ ವೃತ್ತಿಪರರು ಒಂದೆಡೆ ಸೇರಿ ಸಭೆ – ಸಮ್ಮೇಳನ ನಡೆಸಲು ಇಲ್ಲಿ ಅವಕಾಶ ಇದೆ. ಅದರಲ್ಲೂ ವೈದ್ಯರು ಹೆಚ್ಚಾಗಿ ಇಂತಹ ಸಭೆಗಳನ್ನು ನಡೆಸುತ್ತಾರೆ’ ಎಂದು ಬಾಲಾಜಿ ಹೇಳುತ್ತಾರೆ.

ಸಣ್ಣ ಪುಟ್ಟ ಸಭೆ ಸಮಾರಂಭ ಸೇರಿ ದೊಡ್ಡ ಮಟ್ಟದ ಸಮಾವೇಶ ಒಳಗೊಂಡಂತೆ ವರ್ಷಕ್ಕೆ 3 ಸಾವಿರ ಸಮ್ಮೇಳನಗಳು ಇಲ್ಲಿ ನಡೆಯುತ್ತವೆ. ಇಲ್ಲಿರುವ ಒಟ್ಟು 11 ಸಭಾಂಗಣಗಳಲ್ಲಿ ದಿನವೊಂದಕ್ಕೆ ಸರಾಸರಿ 10 ಸಮ್ಮೇಳನಗಳು ನಡೆಯುತ್ತವೆ. ಹಬ್ಬಗಳ ಸಂದರ್ಭದಲ್ಲಿಯೂ ಸಮ್ಮೇಳನಗಳು ಇರುತ್ತವೆ. ವೈದ್ಯರೂ ಸೇರಿದಂತೆ ಅನೇಕ ವೃತ್ತಿಪರರ ನೆಚ್ಚಿನ ತಾಣ ಇದಾಗಿದೆ. 2021ರ ವೇಳೆಗೆ ಇದೇ ಬಗೆಯ 300 ಕೋಣೆಗಳ ಇನ್ನೊಂದು ಬಿಸಿನೆಸ್‌ ರೆಸಾರ್ಟ್‌ ಆರಂಭಿಸುವ ಆಲೋಚನೆಯೂ ಸಂಸ್ಥೆಗೆ ಇದೆ.

ಕಾರ್ಪೊರೇಟ್‌ ಸಂಸ್ಥೆಗಳು ಇಲ್ಲಿ ಒಂದೆರಡು ದಿನಗಳ ಮಟ್ಟಿಗೆ ನಿರ್ದೇಶಕ ಮಂಡಳಿ ಸಭೆ, ಸಮಾವೇಶ ನಡೆಸಿದರೆ ಪ್ರತಿಯೊಬ್ಬರಿಗೆ ₹ 4ರಿಂದ 5 ಸಾವಿರದವರೆಗೆ ವೆಚ್ಚ ತಗುಲುತ್ತದೆ. ಕಾರ್ಪೊರೇಟ್‌ ಸಂಸ್ಥೆಗಳ ಜತೆ ಪಾಲುದಾರಿಕೆಯನ್ನೂ ಮಾಡಿಕೊಳ್ಳಲಾಗಿದೆ. ಐ.ಟಿ ಮತ್ತು ವೈದ್ಯಕೀಯ ಸಂಸ್ಥೆಗಳು ಇಲ್ಲಿ ನಿಯಮಿತವಾಗಿ ಸಮ್ಮೇಳನಗಳನ್ನು ಆಯೋಜಿಸುತ್ತಿವೆ. 10ನೇ ವರ್ಷಾಚರಣೆ ಕೊಡುಗೆಯಾಗಿ ಆರಂಭಿಸಿರುವ ಒಂದು ವರ್ಷದ ಸದಸ್ಯತ್ವ ಪಡೆಯುವವರಿಗೆ 4 ರಿಂದ 6 ಕೂಪನ್‌ಗಳನ್ನು ಕೊಡಲಾಗುತ್ತದೆ. ಊಟೋಪಚಾರಕ್ಕೆ ಇವುಗಳನ್ನು ಬಳಸಿ ರಿಯಾಯ್ತಿ ಪಡೆದುಕೊಳ್ಳಬಹುದು.

ಇಲ್ಲಿಯ ರೆಸ್ಟೊರೆಂಟ್‌ಗಳಲ್ಲಿ ಪೂರೈಸುವ ಜೈನ್‌ ಮೆನು, ಹೆಲ್ದಿ ಮೆನು ಜತೆಗೆ ಈಗ ಹೆಚ್ಚು ಜನಪ್ರಿಯವಾಗುತ್ತಿರುವ ‘ವೀಗನ್‌ ಮೆನು’ ಪರಿಚಯಿಸಲಾಗಿದೆ. ವೀಗನ್‌ ಫುಡ್‌ನಲ್ಲಿ ಹಾಲಿನ ಪದಾರ್ಥ ಇರುವುದಿಲ್ಲ. ಮಾಂಸಾಹಾರವೂ ಇರುವುದಿಲ್ಲ. ಹಸುವಿನ ಉತ್ಪನ್ನ ಬಳಸುವುದಿಲ್ಲ. ಬಿಳಿ ಅನ್ನವೂ ಇರುವುದಿಲ್ಲ. ಇದಕ್ಕೆ ಪ್ರತ್ಯೇಕ ದರ ವಿಧಿಸಲಾಗುತ್ತಿದೆ. 10 ಕಿ. ಮೀ ಉದ್ದದ ಮ್ಯೂಸಿಕ್‌ ರನ್‌ ಕೂಡ ಇಲ್ಲಿ ನಡೆಯುತ್ತದೆ. ಹಾಡು ಸಂಗೀತದ ಜತೆ ಓಡುವ ವಿಶಿಷ್ಟ ಮ್ಯಾರಾಥಾನ್‌ ಇದಾಗಿರುತ್ತದೆ. ಡಿಸೆಂಬರ್‌ನಲ್ಲಿ ಜರುಗುವ ಈ ಓಟದಲ್ಲಿ 6 ಸಾವಿರ ಜನ ಭಾಗವಹಿಸುತ್ತಾರೆ. ಪಂಚತಾರಾ ಹೋಟೆಲ್‌ ಮಾನದಂಡಗಳ ಪ್ರಕಾರ ರೆಸಾರ್ಟ್‌ಗೆ 18 ಅಂತರರಾಷ್ಟ್ರೀಯ ಪ್ರಶಸ್ತಿಗಳು ದೊರೆತಿವೆ. ಮಾಹಿತಿಗೆ http://colacobuilders.com/ ತಾಣಕ್ಕೆ ಭೇಟಿ ನೀಡಬಹುದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !