ಸೋಮವಾರ, ಸೆಪ್ಟೆಂಬರ್ 21, 2020
25 °C
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್‌ ಹೇಳಿಕೆ

ನರೇಗಾ: 40 ಲಕ್ಷ ಮಾನವ ದಿನ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಜಿಲ್ಲೆಯ ರೈತರಿಗೆ ನರೇಗಾ ಯೋಜನೆ ಪ್ರಯೋಜನ ಕಲ್ಪಿಸುವ ಉದ್ದೇಶದಿಂದ 40 ಲಕ್ಷ ಮಾನವ ದಿನ ಸೃಜಿಸುವ ಗುರಿ ಹೊಂದಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನರೇಗಾ ಯೋಜನೆಯಡಿ ಉತ್ತಮ ಕಾರ್ಯ ನಡೆಯುತ್ತಿದ್ದು, ಪ್ರತಿ ಕುಟುಂಬಕ್ಕೂ ಉದ್ಯೋಗ ಚೀಟಿ ನೀಡಲಾಗಿದೆ. ಯೋಜನೆಯ ಸೌಕರ್ಯ ಕುರಿತು ಪಿಡಿಒ, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಕಾರ್ಯಾಗಾರ ನಡೆಸಲಾಗುವುದು’ ಎಂದರು.

‘ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಯೋಜನೆಯ ಸೌಕರ್ಯಗಳ ಬಗ್ಗೆ ಕೈಪಿಡಿ ಸಿದ್ಧಪಡಿಸಿ ಪ್ರತಿ ಗ್ರಾಮ ಪಂಚಾಯಿತಿಗೆ ನೀಡಲಾಗುವುದು. ಜತೆಗೆ ವ್ಯಾಪಕ ಪ್ರಚಾರ ನಡೆಸುತ್ತೇವೆ’ ಎಂದು ವಿವರಿಸಿದರು.

‘ಹೊಸದಾಗಿ ಹಿಪ್ಪು ನೇರಳೆ ತೋಟ ನಾಟಿ ಮಾಡುವ ರೈತರಿಗೆ ಮೊದಲ ವರ್ಷ ₹ 72 ಸಾವಿರ, ಮೊದಲ ಮತ್ತು ಎರಡನೆ ವರ್ಷ ಬೆಳೆ ನಿರ್ವಹಣೆಗೆ ₹ 1.80 ಲಕ್ಷ ಬಿಡುಗಡೆ ಮಾಡಲಾಗುವುದು. ಅದೇ ರೀತಿ ತೋಟಗಾರಿಕೆ, ಕೃಷಿ ಇಲಾಖೆಯಡಿ ಕೃಷಿ ಚಟುವಟಿಕೆ ನಡೆಸುವ ಮತ್ತು ದನದ ಕೊಟ್ಟಿಗೆ ನಿರ್ಮಿಸುವವರಿಗೆ ಅನುದಾನ ನೀಡಲಾಗುವುದು’ ಎಂದು ಹೇಳಿದರು.

1,000 ಚೆಕ್‌ಡ್ಯಾಂ: ‘ನರೇಗಾ ಅಡಿ 1,000 ಚೆಕ್‌ಡ್ಯಾಂ ಹಾಗೂ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಕಡೆ ಕಾಂಪೌಂಡ್ ನಿರ್ಮಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

‘‘ಯೋಜನೆಯಡಿ ಜಿಲ್ಲೆಯಲ್ಲಿ 355 ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಈ ಪೈಕಿ 200 ಅಂಗನವಾಡಿಗಳಿಗೆ ಅನುಮೋದನೆ ಸಿಕ್ಕಿದೆ. ಸರ್ಕಾರ ಪ್ರತಿ ಕೇಂದ್ರಕ್ಕೆ ₹ 3 ಲಕ್ಷ ಪಾವತಿಸಿದರೆ ಯೋಜನೆಯಿಂದ ₹ 5 ಲಕ್ಷ ಬಳಸಿ ಮಾದರಿ ಕೇಂದ್ರ ನಿರ್ಮಾಣ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ನೀರಿನ ಸಮಸ್ಯೆ: ‘ಜಿಲ್ಲೆಯ 3 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಆ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಿದರೆ ತಿಂಗಳಿಗೆ ₹ 20 ಸಾವಿರ ಪಾವತಿಸಲಾಗುವುದು. ಸಮಸ್ಯೆ ಎದುರಾದ ದಿನವೇ ಮೊಬೈಲ್‌ಗೆ ಸಂದೇಶ ಕಳುಹಿಸಿದರೆ ತಕ್ಷಣದಿಂದಲೇ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲು ಅನುಮೋದನೆ ನೀಡಲಾಗುವುದು’ ಎಂದರು.

ಶಿಸ್ತುಕ್ರಮದ ಎಚ್ಚರಿಕೆ: ‘ನೀರಿನ ಸಮಸ್ಯೆ ಎದುರಿಸಲು ಹಣದ ಕೊರತೆಯಿಲ್ಲ. ಈಗಾಗಲೇ ಜಿಲ್ಲೆಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ₹ 20 ಕೋಟಿ ಬಿಡುಗಡೆಯಾಗಿದ್ದು, ಶಾಸಕರ ನೇತೃತ್ವದ ಕಾರ್ಯಪಡೆಯಡಿ ಪ್ರತಿ ಕ್ಷೇತ್ರಕ್ಕೆ ತಲಾ ₹ 50 ಲಕ್ಷ ನೀಡಲಾಗಿದೆ. ಅಗತ್ಯವಿರುವ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಲು ಪ್ರಕೃತಿ ವಿಕೋಪ ನಿಧಿ ಅನುದಾನ ಬಳಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಹಾಗೂ ನರೇಗಾ ಯೋಜನೆಯಲ್ಲಿ ಯಾವುದೇ ಕಾಮಗಾರಿ ನಡೆದರೂ ಗುಣಮಟ್ಟದಿಂದ ಕೂಡಿರಬೇಕು. ಇಲ್ಲವಾದರೆ ಎಂಜಿನಿಯರ್‌ಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.