ಗುರುವಾರ , ಮೇ 28, 2020
27 °C
ಎಸಿಬಿ ವರದಿ ನೀಡಿ ಏಳು ತಿಂಗಳಾದರೂ ಕ್ರಮ ಕೈಗೊಳ್ಳದ ಇಲಾಖೆ

ಜೈಲು ಸೇರಿದ್ದರೂ ಅಧ್ಯಕ್ಷ ಸ್ಥಾನದಲ್ಲೇ ಠಿಕಾಣಿ!

ವಿ.ಎಸ್‌.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಮಂಗಳೂರು: ಗುತ್ತಿಗೆದಾರರಿಂದ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸಿಕ್ಕಿಬಿದ್ದು ಏಳು ದಿನಗಳ ಜೈಲುವಾಸ ಅನುಭವಿಸಿ ಬಂದಿರುವ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ವಿ.ಜೆ.ಸೆಬಾಸ್ಟಿಯನ್‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕೃಪಾಕಟಾಕ್ಷದಿಂದಾಗಿ ಒಂಬತ್ತು ತಿಂಗಳ ಬಳಿಕವೂ ಅದೇ ಹುದ್ದೆಯಲ್ಲಿ
ಠಿಕಾಣಿ ಹೂಡಿದ್ದಾರೆ!

ಗುತ್ತಿಗೆದಾರ ಉಮ್ಮರ್ ಮಲ್ಲಿಗೆಮಜಲು ಎಂಬುವವರಿಂದ ಕಾಮಗಾರಿಯ ಬಿಲ್‌ ಪಾವತಿಗೆ ₹ 35,000 ಲಂಚ ಪಡೆಯುತ್ತಿದ್ದಾಗ ಸೆಬಾಸ್ಟಿಯನ್‌ ಮತ್ತು ಅದೇ ಗ್ರಾಮ ಪಂಚಾಯಿತಿಯ ಆಗಿನ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಿ.ಪುರುಷೋತ್ತಮ ಅವರನ್ನು ಫೆಬ್ರುವರಿ 6ರಂದು ಎಸಿಬಿ ಪೊಲೀಸರು ಬಂಧಿಸಿದ್ದರು. ಫೆ.12ರವರೆಗೂ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದರು.

ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಬಿ ದಕ್ಷಿಣ ಕನ್ನಡ ಘಟಕದ ಡಿವೈಎಸ್‌ಪಿ ಸುಧೀರ್‌ ಹೆಗ್ಡೆ ನೇತೃತ್ವದ ತಂಡ ಎಸಿಬಿಯ ಪಶ್ಚಿಮ ವಲಯ ಎಸ್‌ಪಿ ಎನ್‌.ಎಸ್‌.ಶೃತಿ ಅವರಿಗೆ ವರದಿ ಸಲ್ಲಿಸಿತ್ತು. ಈ ವರದಿಯನ್ನು ಅವರು ಎಸಿಬಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಿದ್ದರು.

ಏಪ್ರಿಲ್‌ 7ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದ ಎಸಿಬಿಯ ಆಗಿನ ಎಡಿಜಿಪಿ ಅಲೋಕ್‌ ಮೋಹನ್‌, ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ 1993ರ ಸೆಕ್ಷನ್‌ 43 (ಎ) ಅನ್ವಯ ಸೆಬಾಸ್ಟಿಯನ್‌ ಅವರ ಸದಸ್ಯತ್ವ ರದ್ದು ಮಾಡುವಂತೆ ಶಿಫಾರಸು ಮಾಡಿದ್ದರು.

‘ಸೆಬಾಸ್ಟಿಯನ್‌ ಅವರನ್ನು ಈಗ ಇರುವ ಹುದ್ದೆಯಲ್ಲೇ ಮುಂದುವರಿಸಿದರೆ ಆರೋಪಿಯು ತನಿಖೆಗೆ ಅಗತ್ಯವಿರುವ ದಾಖಲೆಗಳನ್ನು ನಾಶಪಡಿಸುವ ಅಥವಾ ತಿರುಚುವ ಸಾಧ್ಯತೆಗಳಿರುತ್ತವೆ. ಪ್ರಕರಣದ ದೂರುದಾರ ಹಾಗೂ ಸಾಕ್ಷಿಗಳಿಗೆ ಬೆದರಿಕೆ ಒಡ್ಡಿ ತನಿಖೆಯ ದಿಕ್ಕನ್ನು ತಪ್ಪಿಸಲು ಪ್ರಯತ್ನಿಸುವ ಸಾಧ್ಯತೆಗಳಿರುತ್ತವೆ’ ಎಂದು ಎಡಿಜಿಪಿ ಉಲ್ಲೇಖಿಸಿದ್ದರು. ಪ್ರಕರಣದ ಪ್ರಥಮ ಮಾಹಿತಿ ವರದಿ, ತನಿಖಾ ವರದಿಯನ್ನೂ ಶಿಫಾರಸಿನೊಂದಿಗೆ ಲಗತ್ತಿಸಿದ್ದರು.

‘ಲಂಚ ಪ್ರಕರಣ ನಡೆದು ಏಳು ತಿಂಗಳು ಕಳೆದಿವೆ. ಆರೋಪಿಯ ಸದಸ್ಯತ್ವ ರದ್ಧತಿಗೆ ಶಿಫಾರಸು ಮಾಡಿ ಐದು ತಿಂಗಳು ಕಳೆದಿವೆ. 15 ದಿನಗಳೊಳಗೆ ಕ್ರಮ ಜರುಗಿಸಿ ವರದಿ ನೀಡುವಂತೆ ಕೋರಲಾಗಿತ್ತು. ಆ ಬಳಿಕ ಎಸಿಬಿಯ ಕೇಂದ್ರ ಕಚೇರಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಹಲವು ಬಾರಿ ನೆನಪೋಲೆ ಕಳುಹಿಸಲಾಗಿದೆ. ಈವರೆಗೆ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ’ ಎಂದು ಎಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಧಿಕಾರಿ ವಿರುದ್ಧ ತ್ವರಿತ ಕ್ರಮ: ಸೆಬಾಸ್ಟಿಯನ್‌ ಜೊತೆ ಬಂಧಿತರಾಗಿದ್ದ ಪಿಡಿಒ ಜಿ.ಪುರುಷೋತ್ತಮ್‌ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕೆಲವೇ ದಿನಗಳಲ್ಲಿ ಕ್ರಮ ಜರುಗಿಸಿತ್ತು. ತನಿಖಾ ತಂಡದ ಶಿಫಾರಸು ತಲುಪಿದ ಬೆನ್ನಲ್ಲೇ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು. ಆ ಬಳಿಕ ಬೇರೊಬ್ಬರನ್ನು ಕೊಕ್ಕಡ ಗ್ರಾಮ ಪಂಚಾಯಿತಿ ಪಿಡಿಒ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು.

ಅಧ್ಯಕ್ಷರ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆ ವಿಳಂಬವಾಗಿರುವ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್‌, ‘ಇಂತಹ ಪ್ರಕರಣಗಳಲ್ಲಿ ಆರೋಪಿತರಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿ, ಉತ್ತರ ಪಡೆದ ಬಳಿಕ ವಿಚಾರಣೆ ನಡೆಸಲಾಗುತ್ತದೆ. ನಂತರ ತೀರ್ಮಾನಕ್ಕೆ ಬರಲಾಗುತ್ತದೆ. ಕೊಕ್ಕಡ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪ್ರಕರಣದಲ್ಲಿ ದೀರ್ಘ ವಿಳಂಬ ಆಗಿರುವುದಕ್ಕೆ ಕಾರಣ ಗೊತ್ತಿಲ್ಲ. ತಕ್ಷಣವೇ ಕಡತ ಪರಿಶೀಲಿಸಿ ಮುಂದಿನ ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು