ಭಾನುವಾರ, ಸೆಪ್ಟೆಂಬರ್ 20, 2020
21 °C
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪೋಲೀಸ್ ಇಲಾಖೆ ವತಿಯಿಂದ ‘ಅಪರಾಧ ತಡೆ ಮಾಸಾಚರಣೆ’ ಕಾರ್ಯಕ್ರಮ

ಸಂಕುಚಿತ ಮನೊಭಾವ ಬಿಟ್ಟು ಹೋರಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಬಳ್ಳಾಪುರ: ‘ಹೆಣ್ಣು ಮಕ್ಕಳು ಸಂಕುಚಿತ ಮನೊಭಾವದಿಂದ ಹೊರಬಂದು ತಮಗಾಗುವ ಅನ್ಯಾಯದ ವಿರುದ್ಧ ದಿಟ್ಟತನದಿಂದ ಹೋರಾಡಬೇಕು. ಕಿರುಕುಳಕ್ಕೆ ಒಳಗಾದಾಗ ಅಂಜದೆ ತಕ್ಷಣ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಬೇಕು’ ಎಂದು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಸುದರ್ಶನ್ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಪೋಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ‘ಅಪರಾಧ ತಡೆ ಮಾಸಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೆಣ್ಣು ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ, ಪ್ರಯಾಣದ ಸಂದರ್ಭದಲ್ಲಿ ಯಾರಿಂದಲಾದರೂ ಕಿರುಕುಳ, ದೌರ್ಜನ್ಯಕ್ಕೆ ಒಳಗಾದರೆ ಹೆದರಿಕೊಂಡು ಸಹಿಸಿಕೊಳ್ಳಬಾರದು. ಅದರಿಂದ ಮತ್ತಷ್ಟು ಸಮಸ್ಯೆಗೆ ಸಿಕ್ಕಿಕೊಳ್ಳಬೇಕಾಗುತ್ತದೆ. ಅಂತಹ ವಿಚಾರಗಳನ್ನು ಪೋಷಕರು, ಶಿಕ್ಷಕರು ಅಥವಾ ಸಮೀಪದ ಪೊಲೀಸ್‌ ಠಾಣೆಗೆ ತಿಳಿಸಿದರೆ ಮುಂದಾಗುವ ಅನಾಹುತಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು’ ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿವೆ. ಅದರ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳು ನೆರೆಹೊರೆಯವರು, ಪೋಷಕರಲ್ಲಿ ಅರಿವು ಮೂಡಿಸಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಚಾಲನಾ ತರಬೇತಿ, ಪರವಾನಿಗೆ ಪಡೆಯದೆ ವಾಹನಗಳನ್ನು ಓಡಿಸುವ ಹುಚ್ಚಿಗೆ ಬೀಳಬಾರದು’ ಎಂದರು.

‘ಮೊಬೈಲ್‌ನಿಂದ ತುಂಬಾ ಉಪಯೋಗವಿದೆ ನಿಜ, ಆದರೆ ಶೇ90 ರಷ್ಟು ವಿದ್ಯಾರ್ಥಿಗಳು, ಯುವಜನರು ಮೊಬೈಲ್ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಅನೇಕ ಅಪರಾಧ ಪ್ರಕರಣಗಳಿಗೆ ಕಾರಣರಾಗುತ್ತಿದ್ದಾರೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಗೊತ್ತಿಲ್ಲದಂತೆ ಮಾನಹಾನಿಯಾಗುವಂತಹ ಮಾಹಿತಿ, ಚಿತ್ರಗಳನ್ನು ಹಂಚುವ ಮೂಲಕ ತೊಂದರೆಗಳಿಗೆ ಸಿಲುಕುತ್ತಿದ್ದಾರೆ. ಕೆಲವರು ನಕಲಿ ಖಾತೆಗಳನ್ನು ಸೃಷ್ಟಿಸಿ ಆ ಮೂಲಕ ಸುಳ್ಳು ಸಂದೇಶಗಳನ್ನು ಹರಿಬಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಕಾನೂನಿನ ಕೈಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಮರೆಯಬಾರದು’ ಎಂದು ತಿಳಿಸಿದರು.

ನಗರ ಠಾಣೆಯ ಎಸ್‌ಐ ವರುಣ್ ಕುಮಾರ್ ಮಾತನಾಡಿ, ‘ಅಪರಾಧಗಳನ್ನು ಪತ್ತೆ ಮಾಡುವುದು ಎಷ್ಟು ಮುಖ್ಯವೋ ಅಪರಾಧಗಳು ನಡೆಯದಂತೆ ಅರಿವು ಮೂಡಿಸುವುದು ಅಷ್ಟೇ ಮುಖ್ಯ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ವ್ಯಸನ ಹೆಚ್ಚುತ್ತಿರುವುದು ಆತಂಕದ ವಿಚಾರ. ದುಶ್ಚಟಗಳಿಗೆ ಬಲಿಯಾಗಿ ವಿದ್ಯಾರ್ಥಿಗಳು ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.

‘ಕಾನೂನನ್ನು ಎಲ್ಲರೂ ಗೌರವಿಸಬೇಕು. ಕಾನೂನು ಪಾಲನೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ, ಸುವವ್ಯಸ್ಥೆ ನೆಲೆಸಲು ಸಾಧ್ಯ. ಕಾನೂನುಬಾಹಿರ ಕೃತ್ಯಗಳನ್ನು ನಡೆಸುವವರು ಕಂಡುಬಂದರೆ ಇಲಾಖೆ ಗಮನಕ್ಕೆ ತರಬೇಕು. ಅಪರಾಧ ಕೃತ್ಯಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಕೈಜೋಡಿಸಬೇಕು’ ಎಂದರು.

ಕಾಲೇಜಿನ ಪ್ರಾಂಶುಪಾಲ ಮಂಜುನಾಥ್, ಪ್ರಾಧ್ಯಾಪಕರಾದ ಸಿ.ಎಲ್.ಸತೀಶ್ ಕುಮಾರ್, ಮೋಹನ್ ಕುಮಾರ್, ರಮೇಶ್ ಬಾಬು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು