ನರೇಗಾ: ತಾಲ್ಲೂಕು ಪ್ರಥಮ ಸ್ಥಾನಕ್ಕೇರಿಸಿ

7
ಸಭೆಯಲ್ಲಿ ಪಿಡಿಒಗಳಿಗೆ ತಾ.ಪಂ ಅಧ್ಯಕ್ಷ ಆಂಜಿನಪ್ಪ ಸೂಚನೆ

ನರೇಗಾ: ತಾಲ್ಲೂಕು ಪ್ರಥಮ ಸ್ಥಾನಕ್ಕೇರಿಸಿ

Published:
Updated:
Deccan Herald

ಕೋಲಾರ: ‘ನರೇಗಾ ಯೋಜನೆಯಡಿ ತಾಲ್ಲೂಕನ್ನು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೇರಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಸಂಕಲ್ಪ ಮಾಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಸೂಚಿಸಿದರು.

ಇಲ್ಲಿ ಬುಧವಾರ ನಡೆದ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ‘ನರೇಗಾ ಯೋಜನೆಯ ಮಾನವ ದಿನಗಳನ್ನು ಹೆಚ್ಚಿಸಲು ಇತರ ಇಲಾಖಾಧಿಕಾರಿಗಳು ಸಹಕಾರ ನೀಡಬೇಕು’ ಎಂದು ತಿಳಿಸಿದರು.

‘ತಾಲ್ಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿದೆ. ಕೃಷಿ ಕೆಲಸವಿಲ್ಲದೆ ರೈತರು ಹಾಗೂ ಕೃಷಿ ಕಾರ್ಮಿಕರು ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ನರೇಗಾ ಅಡಿ ಲಭ್ಯವಿರುವ ಸೌಕರ್ಯಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರತಿ ಹೋಬಳಿ ಮಟ್ಟದಲ್ಲಿ ಪ್ರಚಾರ ಆಂದೋಲನ ನಡೆಸಬೇಕು’ ಎಂದು ಹೇಳಿದರು.

‘ನರಸಾಪುರ, ವೇಮಗಲ್ ಹಾಗೂ ಕ್ಯಾಲನೂರು ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಡಿ.19ಕ್ಕೆ, ಕಸಬಾ ಮತ್ತು ವಕ್ಕಲೇರಿ ಹೋಬಳಿಯ ಗ್ರಾ.ಪಂಗಳಲ್ಲಿ ಡಿ.21, ಸುಗಟೂರು ಮತ್ತು ಹೋಳೂರು ಹೋಬಳಿ ಡಿ.22 ಹಾಗೂ ಹುತ್ತೂರು ಹೋಬಳಿಯಲ್ಲಿ ಡಿ.26ಕ್ಕೆ ಆಂದೋಲನ ಆಯೋಜಿಸಬೇಕು. ಆಯಾ ವ್ಯಾಪ್ತಿಯ ಜನಪ್ರತಿನಿಧಿಗಳನ್ನು ಆಂದೋಲನಕ್ಕೆ ಆಹ್ವಾನಿಸಬೇಕು’ ಎಂದು ಸೂಚನೆ ನೀಡಿದರು.

‘ನರೇಗಾ ಯೋಜನೆಯನ್ನು ರೇಷ್ಮೆ, ತೋಟಗಾರಿಕೆ, ಕೃಷಿ ಹಾಗೂ ಮೀನುಗಾರಿಕೆ ಇಲಾಖೆಗೂ ವಿಸ್ತರಿಸಲಾಗಿದೆ. ಇಲಾಖೆಗಳಿಂದ ಯಾವ ಕೆಲಸಕ್ಕೆ ಕೂಲಿ ನೀಡಲಾಗುವುದು ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ಸಮುದಾಯ ಕಾರ್ಯಕ್ರಮಗಳ ಬಗ್ಗೆ ಪಿಡಿಒಗಳು ಮಾಹಿತಿ ನೀಡಬೇಕು. ಜತೆಗೆ ಕರಪತ್ರ ವಿತರಿಸಬೇಕು’ ಎಂದರು.

ಅಪನಂಬಿಕೆ ಹೋಗಲಾಡಿಸಿ: ‘ಈ ಹಿಂದೆ ನರೇಗಾ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿತ್ತು. ಹೀಗಾಗಿ ಜನ ಯೋಜನೆ ನಂಬುತ್ತಿಲ್ಲ. ಗುತ್ತಿಗೆದಾರರು ಸಂಸದರು ಮತ್ತು ಶಾಸಕರ ಮೇಲೆ ಒತ್ತಡ ಹಾಕಿ ಬಿಲ್ ಬಿಡುಗಡೆ ಮಾಡಿಸಿಕೊಳ್ಳುತ್ತಿದ್ದರು. ಈಗ ಯೋಜನೆಯ ಕ್ರಿಯಾಯೋಜನೆ ಸಿದ್ಧಪಡಿಸುವ ಸಂಪೂರ್ಣ ಅಧಿಕಾರಿಗಳ ಪಿಡಿಒಗಳಿಗಿದೆ. ಜನರ ಅಪನಂಬಿಕೆ ಹೋಗಲಾಡಿಸಿ’ ಎಂದು ಸಲಹೆ ನೀಡಿದರು.

‘ಮನೆಗಳ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದೆ. ಫಲಾನುಭವಿ ಮನೆ ನಿರ್ಮಿಸುವ ಜಾಗ ಹಳ್ಳವಾಗಿದ್ದರೆ ಅದಕ್ಕೆ ಕೆರೆಗಳಿಂದ ಮಣ್ಣು ತಂದು ತುಂಬಿಸಲು ಕಂದಾಯ ಇಲಾಖೆ ಅಧಿಕಾರಿಗಳು ತೊಂದರೆ ಮಾಡುತ್ತಿದ್ದಾರೆ. ಈ ಬಗ್ಗೆ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಗಮನ ಹರಿಸಬೇಕು’ ಎಂದು ತಿಳಿಸಿದರು.

ನೋಟಿಸ್ ಜಾರಿಗೊಳಿಸಿ: ‘ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗಾನಹಳ್ಳಿ ಗ್ರಾ.ಪಂ ಕ್ಷೇತ್ರದ ಸದಸ್ಯ ಮುನಿವೆಂಕಟಪ್ಪ ಸರ್ಕಾರಿ ನಿಯಮ ಮೀರಿ ಸರ್ಕಾರಿ ಕೊಳವೆ ಬಾವಿಯ ಪಕ್ಕದಲೇ ಕೊಳವೆ ಬಾವಿ ಕೊರೆಸಿದ್ದಾರೆ. ಉದ್ದೇಶಪೂರ್ವಕವಾಗಿ ಸರ್ಕಾರಿ ಕೊಳವೆ ಬಾವಿ ಸ್ಥಗಿತಗೊಳಿಸಿ, ಪಂಪ್‌ ಮತ್ತು ಮೋಟರ್‌ ಕೆಳಗೆ ಬೀಳುವಂತೆ ಮಾಡಿದ್ದಾರೆ. ಅವರಿಗೆ ನೋಟಿಸ್ ಜಾರಿಗೊಳಿಸಿ’ ಎಂದು ಹುತ್ತೂರು ಪಿಡಿಒಗೆ ಆದೇಶಿಸಿದರು.

‘ಮುನಿವೆಂಕಟಪ್ಪ ಅವರ ಕೊಳವೆ ಬಾವಿಯಿಂದ ಗ್ರಾಮಕ್ಕೆ ನೀರು ಹರಿಸಲು ಅವಕಾಶ ಕೊಡಬೇಡಿ. ಸರ್ಕಾರಿ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರಿದೆ. ಈ ಸಂಗತಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಕೊಳವೆ ಬಾವಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ’ ಎಂದು ತಿಳಿಸಿದರು.

ತಾ.ಪಂ ಉಪಾಧ್ಯಕ್ಷೆ ಲಕ್ಷ್ಮಿ, ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !